ಬಿಬಿಎಂಪಿ ಮೇಯರ್ ಪಟ್ಟ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಆ.11- ಬಿಬಿಎಂಪಿ ಹೊಸ ಮೇಯರ್ ಆಯ್ಕೆ ಪ್ರಕ್ರಿಯೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈಗಾಗಲೇ ಚಾಲನೆ ನೀಡಿದೆ. ಹೊಸ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ನಿನ್ನೆ ಕಾಂಗ್ರೆಸ್‍ನವರು ಸಭೆ ನಡೆಸಿ ಉದ್ದೇಶಿತ ಹೊಸ ಮೇಯರ್ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ದಪಡಿಸಿದೆ. ಸಂಪತ್‍ರಾಜ್, ಗೋವಿಂದರಾಜು, ಈಜಿಪುರ ವಾರ್ಡ್‍ನ ರಾಮಚಂದ್ರ ಅವರ ಹೆಸರುಗಳು ಪಟ್ಟಿಯಲ್ಲಿದೆ. ಪಾಲಿಕೆ ಕೌನ್ಸಿಲ್ ಕಾರ್ಯಾಲಯದಿಂದ ಚುನಾವಣೆ ನಡೆಸುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪತ್ರ ಕೂಡ ರವಾನೆಯಾಗಿದೆ.

ಹಾಲಿ ಮೇಯರ್ ಜಿ.ಪದ್ಮಾವತಿ ಅವರ ಅವಧಿ ಸೆ.10ಕ್ಕೆ ಪೂರ್ಣಗೊಳ್ಳಲಿದ್ದು, ಹೊಸ ಮೇಯರ್ ಸ್ಥಾನ ಪರಿಶಿಷ್ಟ ಜಾತಿ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಆದಷ್ಟು ಬೇಗ ಚುನಾವಣಾ ಕಾರ್ಯ ಕೈಗೆತ್ತಿಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಸರ್ಕಾರದೊಂದಿಗೆ ಚರ್ಚೆ ನಡೆಸಿ ಹೊಸ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದ್ದಾರೆ. ಹಾಲಿ ಮೇಯರ್ ಅಧಿಕಾರಾವಧಿ ಸೆ.10ಕ್ಕೆ ಪೂರ್ಣಗೊಳ್ಳಲಿದ್ದು, ಅದೇ ತಿಂಗಳಲ್ಲೇ ಚುನಾವಣೆ ನಡೆಸುವ ಪರಮಾಧಿಕಾರ ಪ್ರಾದೇಶಿಕ ಆಯುಕ್ತರಿಗಿದೆ. ಹಾಗಾಗಿ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಗೂ ಮುನ್ನ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಪೈಪೋಟಿ :

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಹಾಗಾಗಿ ಆ ಪಕ್ಷಕ್ಕೆ ಬೆಂಬಲ ನೀಡಬೇಕೆ, ಬೇಡವೇ ಎಂಬ ಬಗ್ಗೆ ಇನ್ನೂ ಜೆಡಿಎಸ್‍ನಲ್ಲಿ ಚಿಂತನೆ ನಡೆದಿದೆ. ಆದರೂ ಕೂಡಾ ಆ ಪಕ್ಷದಲ್ಲಿ ಉಪಮೇಯರ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.ಮುಂದಿನ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಆ ಸ್ಥಾನಕ್ಕೆ ಹಾಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್, ಜೆಡಿಎಸ್ ಗುಂಪಿನ ನಾಯಕಿ ರಮೀಳಾ ಉಮಾಶಂಕರ್ ಹಾಗೂ ಮಂಜುಳಾನಾರಾಯಣಸ್ವಾಮಿ ಮತ್ತಿತರರು ಲಾಭಿ ನಡೆಸುತ್ತಿದ್ದಾರೆ.

ರಮೀಳಾ ಉಮಾಶಂಕರ್ ಅವರು ತಮ್ಮ ಜನಾಂಗದ ಪ್ರಭಾವ ಬಳಸಿ ಕಾಂಗ್ರೆಸಿಗರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ತಂದು ಉಪಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಜೆಡಿಎಸ್ ಮುಖಂಡರು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ನೇತ್ರಾನಾರಾಯಣ್ ಅವರಿಗೆ ಉಪಮೇಯರ್ ಸ್ಥಾನ ಕೊಡಲು ಒಲವು ತೋರಿದ್ದಾರೆ.  ಇದರ ಮಧ್ಯೆ ಮಂಜುಳಾನಾರಾಯಣಸ್ವಾಮಿ ಮತ್ತಿತರರು ಕೂಡಾ ಲಾಬಿ ನಡೆಸುತ್ತಿದ್ದು, ಉಪಮೇಯರ್ ಸ್ಥಾನ ಯಾವ ಮಹಿಳಾ ಸದಸ್ಯೆಗೆ ಒಲಿಯಲಿದೆ ಎಂಬದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin