ಮತ್ತೆ ಬಾಯ್ತೆರೆದುಕೊಳ್ಳಲಿದೆ ಬೋಫೋರ್ಸ್ ಫಿರಂಗಿ ಹಗರಣ

ಈ ಸುದ್ದಿಯನ್ನು ಶೇರ್ ಮಾಡಿ

bofors-guns-file

ನವದೆಹಲಿ, ಆ.11-ಇಡೀ ದೇಶಾದ್ಯಂತ ವಿವಾದದ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ್ದ 64 ಕೋಟಿ ರೂ.ಗಳ ಬೋಫೋರ್ಸ್ ಫಿರಂಗಿ ಹಗರಣಕ್ಕೆ ಮತ್ತೆ ಜೀವ ಬರಲಿದೆ. ರಾಜಕೀಯ ಸಂಚಲನದ ಈ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಲು ತಾನು ಉತ್ಸುಕವಾಗಿರುವುದಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಂಸದೀಯ ಸಮಿತಿ ಮುಂದೆ ಹೇಳಿದೆ.

ಬೋಫೋರ್ಸ್ ಹಗರಣದ ಬಗ್ಗೆ ಮರು ತನಿಖೆ ನಡೆಸಬೇಕು ಹಾಗೂ ಸುಪ್ರೀಂಕೋರ್ಟ್ ಮುಂದೆ ಅದನ್ನು ತರಬೇಕು ಎಂದು ಬಹುತೇಕ ಸದಸ್ಯರು ಅಭಿಮತ ವ್ಯಕ್ತಪಡಿಸಿರುವ ಸಮಿತಿ ಮುಂದೆ ಸಿಬಿಐ ತನ್ನ ಈ ಇರಾದೆಯನ್ನು ವ್ಯಕ್ತಪಡಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.
ಮಾರ್ಚ್ 24, 1986ರಂದು ಭಾರತೀಯ ಸೇನೆಗಾಗಿ 400 ಸಂಖ್ಯೆಯ 155 ಎಂಎಂ ಹೋವಿಟ್ಜರ್ ಫಿರಂಗಿಗಳನ್ನು ಪೂರೈಸಲು ಭಾರತ ಮತ್ತು ಸ್ವೀಡನ್‍ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎಬಿ ಬೋಫೋರ್ಸ್ ನಡುವೆ 1,437 ಕೋಟಿ ರೂ.ಗಳ ಒಪ್ಪಂದ ಕುದುರಿತ್ತು. ಏಪ್ರಿಲ್ 16, 1987ರಲ್ಲಿ ಸ್ವೀಡಿಶ್ ರೇಡಿಯೋ ಈ ವ್ಯವಹಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಭಾರತದ ಅತ್ಯುನ್ನತ ರಾಜಕೀಯ ನಾಯಕರು ಮತ್ತು ರಕ್ಷಣಾ ಅಧಿಕಾರಿಗಳಿಗೆ ಕಂಪನಿಯು ಲಂಚ ನೀಡಿದೆ ಎಂದು ಸುದ್ದಿ ಬಿತ್ತರಿಸಿತ್ತು.

ಜನವರಿ 22, 1990ರಂದು ತನಿಖಾ ಸಂಸ್ಥೆಯು ಎಬಿ ಬೋಫೋರ್ಸ್‍ನ ಆಗಿನ ಅಧ್ಯಕ್ಷ ಮಾರ್ಟಿನ್ ಆರ್ಡ್‍ಬೊ, ಮಧ್ಯವರ್ತಿ ವಿನ್ ಛಡ್ಡಾ ಮತ್ತು ಹಿಂದುಜಾ ಸಹೋದರರ ವಿರುದ್ಧ ವಿವಿಧ ಆರೋಪಗಳ ಮೇಲೆ ಎಫ್‍ಐಆರ್ ದಾಖಲಿಸಿತ್ತು. ಈ ಪ್ರಕರಣದ ತನಿಖೆ ಮುಂದುವರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ರಕ್ಷಣಾ ಕಾರ್ಯದರ್ಶಿ ಎಸ್.ಕೆ.ಭಟ್ನಾಗರ್, ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಅವರ ಹೆಸರುಗಳೂ ತಳುಕು ಹಾಕಿಕೊಂಡು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.

Facebook Comments

Sri Raghav

Admin