ರೈಲು ಹಳಿ ಬಳಿ ಜಿಲ್ಲಾಧಿಕಾರಿ ಮೃತದೇಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

IAS-Officer--1

ಪಾಟ್ನಾ, ಆ.11-ಬಿಹಾರದ ಬಕ್ಸಾರ್‍ನ ಜಿಲ್ಲಾಧಿಕಾರಿಯಾಗಿ(ಜಿಲ್ಲಾ ದಂಡಾಧಿಕಾರಿ) ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಮುಖೇಶ್ ಪಾಂಡೆ (32)ಅವರ ಮೃತದೇಹ ಉತ್ತರಪ್ರದೇಶದ ಘಾಜಿಯಾಬಾದ್ ರೈಲು ನಿಲ್ದಾಣದ ಬಳಿ ಪತ್ತೆಯಾಗಿದೆ.  ಮುಖೇಶ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಮೃತದೇಹದ ಬಳಿ ಡೆತ್‍ನೋಟ್, ಪರ್ಸ್, ಗುರುತಿನ ಚೀಟಿ ಪತ್ತೆಯಾಗಿವೆ. ನಾನು ಮುಖೇಶ್ ಪಾಂಡೆ. ಐಎಎಸ್ ಅಧಿಕಾರಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ನನ್ನ ಸಾವಿನ ನಂತರ ನನ್ನ ಕುಟುಂಬದವರಿಗೆ ತಿಳಿಸಿ ಎಂದು ಅವರು ಡೆತ್ ನೋಟ್‍ನಲ್ಲಿ ದೂರವಾಣಿ ಸಂಖ್ಯೆಗಳನ್ನೂ ಬರೆದಿದ್ದಾರೆ. ಅಲ್ಲದೇ ಬಂಧು-ಮಿತ್ರರಿಗೆ ತಾವು ಸಾವಿಗೆ ಶರಣಾಗುತ್ತಿರುವುದಾಗಿ ವಾಟ್ಸ್ ಆ್ಯಪ್ ಸಂದೇಶದಲ್ಲಿ ತಿಳಿಸಿದ್ದಾರೆ.

ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಘಾಜಿಯಾಬಾದ್ ಪೊಲೀಸ್ ಅಧಿಕಾರಿ ಸೋಮವೀರ್ ಸಿಂಗ್ ತಿಳಿಸಿದ್ದಾರೆ. ಘಾಜಿಯಾಬಾದ್‍ನಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಬುಧವಾರ ಅವರು ಬಕ್ಸಾರ್‍ನಿಂದ ಅಲ್ಲಿಗೆ ತೆರಳಿದ್ದರು. ಘಾಜಿಯಾಬಾದ್‍ನ ಲೀಲಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಅವರ ಮೊಬೈಲ್‍ಫೋನ್ ಹೋಟೆಲ್ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಕುಟುಂಬದ ಆಪ್ತರೊಬ್ಬರು ಅನಾರೋಗ್ಯಪೀಡಿತರಾಗಿದ್ದಾರೆ. ಅವರನ್ನು ನೋಡಲು ತಾವು ದೆಹಲಿಗೆ ತೆರಳುತ್ತಿರುವುದಾಗಿ ಜಿಲ್ಲಾ ದಂಡಾಧಿಕಾರಿಯೂ ಆಗಿದ್ದ ಮುಖೇಶ್ ಅವರು ಸೋಮವಾರ ತಿಳಿಸಿದ್ದರು. ಅಲ್ಲದೇ ತಾವು ಹಿಂದಿರುಗುವ ತನಕ ಉಸ್ತುವಾರಿ ವಹಿಸಿಕೊಳ್ಳುವಂತೆ ಬಕ್ಸಾರ್‍ನ ಉಪ ಅಭಿವೃದ್ದಿ ಆಯುಕ್ತ (ಡಿಡಿಸಿ) ಮೊಬಿನ್ ಅಲಿ ಅನ್ಸಾರಿ ಅವರಿಗೆ ತಿಳಿಸಿದ್ದರು. ಆನಂತರ ಅವರು ಮಂಗಳವಾರ ಬೆಳಗ್ಗೆ ವಾರಾಣಾಸಿಯಿಂದ ದೆಹಲಿಗೆ ವಿಮಾನದಲ್ಲಿ ತೆರಳಿದಿದ್ದರು. ಅವರು ಈಗ ಶವವಾಗಿ ಪತ್ತೆಯಾಗಿದ್ದಾರೆ.

ಮುಖೇಶ್ ಆತ್ಮಹತ್ಯೆ ಪ್ರಕರಣ ಹಲವಾರು ವದಂತಿಗಳಿಗೆ ಕಾರಣವಾಗಿದ್ದು, ವಿಶೇಷ ಪೊಲೀಸ್ ತಂಡದಿಂದ ತನಿಖೆ ಆರಂಭಿಸಲಾಗಿದೆ.  2012ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದ ಅವರು ಬಕ್ಸಾರ್‍ಗೆ ಡಿಎಂ ಆಗಿ ವರ್ಗಾವಣೆ ಆಗುವುದಕ್ಕೆ ಮುನ್ನ ಕತಿಹಾರ ಜಿಲ್ಲೆಯ ಉಪ ಅಭಿವೃದ್ದಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.  ಹಿರಿಯ ಐಎಎಸ್ ಅಧಿಕಾರಿ ಸಾವಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಐಎಎಸ್ ಅಸೋಸಿಯೇಷನ್, ಮೃತರ ಆತ್ಮಕ್ಕೆ ಶಾಂತಿ ಕೋರಿದೆ.

Facebook Comments

Sri Raghav

Admin