ಆ.16 ರಂದು ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲಿದ್ದಾರೆ ರಾಹುಲ್‍

ಈ ಸುದ್ದಿಯನ್ನು ಶೇರ್ ಮಾಡಿ

Rahul--0145

ಬೆಂಗಳೂರು, ಆ.12-ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸುವ ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಆ.16ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಲೋಕಾರ್ಪಣೆ ಮಾಡಲಿದ್ದಾರೆ. ಜಯನಗರ ವಾರ್ಡ್‍ನ ಕನಕನಪಾಳ್ಯದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸುವ ಮೂಲಕ ರಾಹುಲ್‍ಗಾಂಧಿ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಮೇಯರ್ ಜಿ.ಪದ್ಮಾವತಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಸಚಿವರಾದ ಅನಂತ್‍ಕುಮಾರ್ ಸೇರಿದಂತೆ ಹಲವಾರು ಸಚಿವರು ಮತ್ತು ಗಣ್ಯರು ಕ್ಯಾಂಟೀನ್ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅವರು ಹೇಳಿದರು. ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‍ನಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ 86 ಕ್ಯಾಂಟೀನ್‍ಗಳ ಕಾಮಗಾರಿ ಪೂರ್ಣಗೊಂಡಿದ್ದು, 20 ಕ್ಯಾಂಟೀನ್‍ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕ್ಯಾಂಟೀನ್ ನಿರ್ಮಾಣಕ್ಕೆ ಪಾಲಿಕೆಯ 110 ಸ್ವತ್ತುಗಳಲ್ಲದೆ, ಸರ್ಕಾರದ ವಿವಿಧ ಇಲಾಖೆಗೆ ಸೇರಿದ ನಿವೇಶನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
16 ರಂದು ವಿವಿಧ ಗಣ್ಯರ ಸಮ್ಮುಖದಲ್ಲಿ 101 ಕ್ಯಾಂಟೀನ್‍ಗಳನ್ನು ಲೋಕಾರ್ಪಣೆ ಮಾಡಲಾಗುವುದು. ಉಳಿದ ಕ್ಯಾಂಟೀನ್‍ಗಳ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಅ.2ರ ಗಾಂಧಿ ಜಯಂತಿಯಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪದ್ಮಾವತಿ ಹೇಳಿದರು.

ಆಹಾರ ತಯಾರಿಸುವುದು ಮತ್ತು ಕ್ಯಾಂಟೀನ್‍ಗಳಿಗೆ ಸರಬರಾಜು ಮಾಡುವ ಹೊಣೆಯನ್ನು ರಿವಾಡ್ರ್ಸ್, ಚೇಫ್ ಟಾಕ್ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.ತಿಂಡಿ ಮತ್ತು ಊಟಕ್ಕೆ ಸರ್ಕಾರದ ವತಿಯಿಂದ 32 ರೂ.ಗಳನ್ನು ಭರಿಸಲಾಗುತ್ತದೆ. 9.50 ರೂ. ತಿಂಡಿಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 11.25 ರೂ.ಗಳನ್ನು ನೀಡಲಾಗುತ್ತಿದೆ.

ಕ್ಯಾಂಟೀನ್‍ಗಳಿಗೆ ಸಿದ್ಧ ಆಹಾರ ಸರಬರಾಜು ಮಾಡುವ ಅಡುಗೆ ಕೋಣೆಗಳ ನಿರ್ಮಾಣ ಕಾರ್ಯ 13 ಕಡೆ ಪ್ರಗತಿಯಲ್ಲಿದೆ. ಒಂದು ಅಡುಗೆ ಕೋಣೆಯಲ್ಲಿ 15 ರಿಂದ 18 ಮಂದಿ ಆಹಾರ ತಯಾರಿಸಲಿದ್ದಾರೆ. ಇವರಿಗೆ ಪಾಲಿಕೆ ವತಿಯಿಂದ ಹಿರಿಯ ಅಧಿಕಾರಿಗಳು ಕಾರ್ಯಾಗಾರ ನಡೆಸಿದ್ದಾರೆ. ಒಂದು ಕ್ಯಾಂಟೀನ್‍ನಲ್ಲಿ ಕ್ಯಾಷಿಯರ್, ಸೂಪರ್‍ವೈಸರ್ಸ್, ವಾಚ್‍ಮೆನ್, ಸಪ್ಲೈಯರ್ ಮತ್ತು ಕ್ಲೀನರ್ ಸೇರಿದಂತೆ 7 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಒಂದು ಅಡುಗೆ ಕೋಣೆಯಲ್ಲಿ ಸುಮಾರು 5 ರಿಂದ 6 ಸಾವಿರ ಜನಕ್ಕೆ ಆಹಾರ ತಯಾರಿಸಬಹುದಾಗಿದೆ. ಒಂದು ಕ್ಯಾಂಟೀನ್‍ನಲ್ಲಿ ದಿನವೊಂದಕ್ಕೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ಉಪಹಾರ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Indira-Canteen

ಒಟ್ಟಾರೆ ರಾಜ್ಯಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನನ್ನು ಸಮರ್ಪಕವಾಗಿ ಜಾರಿಗೆ ತರಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಮೇಯರ್ ವಿವರಿಸಿದರು.ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದೆ ವಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ಅಂತಹ ಆರೋಪಗಳಿಗೆ ಮುಂದಿನ ದಿನಗಳಲ್ಲಿ ನಾಗರಿಕರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಕ್ರಮವಿಲ್ಲ:

ಪಾಲಿಕೆ ವ್ಯಾಪ್ತಿಯಲ್ಲಿ 1187 ಪಾರ್ಕ್, 287 ಮೈದಾನ, 227 ಇತರೆ ಜಾಗಗಳಿವೆ. ಪಾರ್ಕ್, ಮೈದಾನಕ್ಕೆಂದು ಮೀಸಲಿಟ್ಟಿರುವ ಯಾವುದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಲ್ಲ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಸಾರ್ವಜನಿಕರು ಕಸ ಹಾಕುತ್ತಿದ್ದ ಜಾಗ ಗುರುತಿಸಿ ಅಂತಹ ಪ್ರದೇಶದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಮರ್ಫಿಟೌನ್ ಗ್ರಂಥಾಲಯದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಹೀಗಾಗಿ ಆ ಜಾಗವನ್ನು ವಶಕ್ಕೆ ಪಡೆದು ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ಸಮಜಾಯಿಷಿ ನೀಡಿದರು.

ಕ್ಯಾಂಟೀನ್ ಮಾಹಿತಿಗೆ ಆ್ಯಪ್:

ಇಂದಿರಾ ಕ್ಯಾಂಟೀನ್‍ನ ಆಹಾರದ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕ್ಯಾಂಟೀನ್‍ಗಳ ಮಾಹಿತಿಗೆ ಹೊಸ ಆ್ಯಪ್ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನಾವರಣ ಮಾಡಲಾಗುವುದು. ಆ್ಯಪ್‍ನಲ್ಲಿ ಕ್ಯಾಂಟೀನ್ ಮಾಹಿತಿ ಮತ್ತು ಆಯಾ ದಿನಗಳ ಮೆನು ಕೂಡ ಇರಲಿದೆ ಎಂದರು. ಕ್ಯಾಂಟೀನ್ ಕುರಿತಂತೆ ದೂರು ದಾಖಲಿಸಲು ಆ್ಯಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಸಾದ್ ವಿವರಿಸಿದರು.

ಲಕ್ಷ ಬಹುಮಾನ:

Selfie--01

ಇಂದಿರಾ ಕ್ಯಾಂಟೀನ್ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿ ಪೋಟೋ ಕಳುಹಿಸಿದರೆ ಉತ್ತಮ ಪೋಟೋಗಳಿಗೆ ಒಂದು ಲಕ್ಷ ರೂ.ಗಳ ಬಹುಮಾನ ನೀಡುವ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ತಾಜ್ ಹೊಟೇಲ್ ಮುಖ್ಯ ಚೆಫ್ ಹಾಗೂ ವಿದ್ಯಾರ್ಥಿ ಭವನದ ಕೆಲ ಮುಖ್ಯಸ್ಥರಿಂದ ಕ್ಯಾಂಟೀನ್ ಆಹಾರದ ಕ್ವಾಲಿಟಿ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕ್ಯಾಂಟೀನ್ ವೇಳಾಪಟ್ಟಿ:

ಬೆಳಗ್ಗೆ 7.30 ರಿಂದ 10.30 ವರೆಗೆ ತಿಂಡಿ ವಿತರಣೆ
ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ
ರಾತ್ರಿ 7.30 ರಿಂದ 8.30ರವರೆಗೆ ಊಟ ಲಭ್ಯ.
ಆಯಾ ಕ್ಯಾಂಟೀನ್‍ಗಳಲ್ಲಿ ಎಷ್ಟು ಊಟ ಲಭ್ಯವಿದೆ ಎನ್ನುವ ಮಾಹಿತಿ ಡಿಸ್‍ಪ್ಲೇ ಬೋರ್ಡ್‍ನಲ್ಲಿ ಪ್ರಕಟಿಸಲಾಗುವುದು. ಪ್ರತಿ ಕ್ಯಾಂಟೀನ್‍ನಲ್ಲೂ ಆಹಾರದ ಸುರಕ್ಷತೆಗಾಗಿ ಆರೋಗ್ಯಾಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಕ್ಯಾಂಟೀನ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.

Facebook Comments

Sri Raghav

Admin