ಇಲ್ಲೊಂದು ಗ್ರಾಮವಿದೆ, ಇಲ್ಲಿ ಸರ್ಕಾರಿ ಸೇವೆಗಳ ಸುಳಿವೇ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Hanuru--01

– ಆರ್.ಪುಟ್ಟಸ್ವಾಮಿ, ಹನೂರು.

ಹನೂರು, ಆ.11- ಈ ದೇಶದ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಪಿಡುಗು ಶಾಪವೇ ಸರಿ, ಗಂಡೆತ್ತವರ ವರದಕ್ಷಿಣೆ ಎಂಬ ರಣದಾಹ ಅದೆ ಷ್ಟೋ ಅಮಾಯಕ ಹೆಣ್ಣು ಮಕ್ಕಳ ಅಮೂಲ್ಯ ಜೀವಗಳನ್ನು ಬಲಿ ತೆಗೆದು ಕೊಂಡಿದೆ. ಅದೆಷ್ಟೊ ಹೆಣ್ಣೆತ್ತವರ ಕರುಳ ಹಿಂಡಿವೆ.  ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಎನ್ನುವ ಮೂಢನಂಬಿಕೆಯಿತ್ತು. ಇದನ್ನು ಮನಗಂಡ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಆ ಅನಿಷ್ಠ ಪದ್ದತಿಯನ್ನು ಕಿತ್ತೊಗೆಯಲು ಭಾಗ್ಯಲಕ್ಷ್ಮಿ ಯೋಜನೆ ಯನ್ನು ಜಾರಿಗೆ ತಂದು ಸುಮಾರು 8 ವರ್ಷಗಳೇ ಕಳೆಯುತ್ತಿವೆ. ಆದರೆ ಯೋಜನೆ ಜಾರಿಗೆ ಬಂದು ಇಷ್ಟು ವರ್ಷಗಳು ಕಳೆದರೂ ಈ ಪೋಡಿನ ಮುಗ್ದ ಜನರಿಗೆ ಇನ್ನೂ ತಲುಪದೆ ಇರುವುದು ವಿಪರ್ಯಾಸವೆ ಸರಿ.

ಕಣ್ಣಿಗೆ ಕಾಣದ ದಟ್ಟಾರಣ್ಯಗಳ ನಡುವೆ ವಾಸಿಸುವ ಅದೇಷ್ಟೋ ಪೋಡುಗಳ ಗಿರಿ ಜನರು ಇಂದಿಗೂ ಸಹ ನಾಗರೀಕ ಪ್ರಪಂಚದ ಹಸ್ತಕ್ಷೇಪದಿಂದ ದೂರ ಉಳಿದಿವೆ.  ಬಹುತೇಕ ಪೋಡುಗಳಿಗೆ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ಅಂತಹ ಪೋಡುಗಳಲ್ಲಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ನೆಲ್ಲಿಕತ್ರಿ ಪೋಡುವಿನಲ್ಲಿ ವಾಸಿಸುವ ಸೋಲಿಗರ ದಯನಿಯಸ್ಥಿತಿಯೇ ಸಾಕ್ಷಿ.  ಲೊಕ್ಕನಹಳ್ಳಿ ಹೋಬಳಿ ಪಿ.ಜಿ.ಪಾಳ್ಯ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಈ ಗಿರಿಜನರ ಹಾಡಿ ನೆಲ್ಲಿಕತ್ರಿ ಪೋಡುವಿನಲ್ಲಿ ಸುಮಾರು 250ಕ್ಕೂ ಹೆಚ್ಚು ಜನರಿರುವ 60 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಜನರಿಗೆ ಇಂದಿಗೂ ವಾಸಿಸಲು ಯೋಗ್ಯ ಮನೆಗಳಿಲ್ಲ. ಬದುಕಿನ ಬಂಡಿ ಎಳೆಯಲು ದುಡಿಯುವ ಕೈಗೆ ಕೆಲಸವಿಲ್ಲ. ಅಕ್ಕ ಪಕ್ಕದ ಗ್ರಾಮದ ತೋಟದ ಜಮೀನುಗಳೆ ಬದುಕಿನ ಬಂಡಿಗೆ ಆಸರೆ.

ಸರ್ಕಾರಗಳು ಗಿರಿಜನರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ತರುತ್ತಲೂ ಇವೆ.  ಆದರೆ, ಅದ್ಯಾವುದೂ ಇಂತಹ ನಾಗರಿಕರ ಕೈ ತಲುಪಿತ್ತಿಲ್ಲ. ಈ ಅಮಾಯಕ ಬಡಜನರ ದಯಾನಿಯ ಕೂಗು ನಮ್ಮನ್ನಾಳುವ ಸರ್ಕಾರಕ್ಕೆ ಮುಟ್ಟುತ್ತಿಲ್ಲವೇ ? ಕೊಳ್ಳೇಗಾಲದಿಂದ ಹಾಸನೂರು ಮಾರ್ಗವಾಗಿ ತಮಿಳು ನಾಡಿಗೆ ತೆರಳುವ ಸತ್ಯಮಂಗಲ ಮುಖ್ಯ ರಸ್ತೆಯಿಂದ 12 ಕಿ.ಮೀ. ದೂರ ಕ್ರಮಿಸಿದರೆ ಕರ್ನಾಟಕ- ತಮಿಳುನಾಡಿನ ನಡುವಿನ ದಟ್ಟಾರಣ್ಯದ ಮಧ್ಯ ನೆಲ್ಲಿಕತ್ರಿ, ಕೊರಮನಕತ್ರಿ, ಹಾವಿನ ಮೂಲೆ, ವನಮೇಟಿ ಪೋಡುಗಳು ಸಿಗುತ್ತವೆ.

ಈ ಪೋಡುಗಳಿಗೆ ತೆರಳಲು ಸಮರ್ಪಕ ರಸ್ತೆಯಿಲ್ಲದ ಕಾರಣ ಯಾವುದೇ ವಾಹನ ಸಂಚಾರವಿಲ್ಲ. ಹಾಗಾಗಿ ನಡೆದೆ ಹೋಗಬೇಕು. ಇಲ್ಲಿನ ಜನರಿಗೆ ಆರೋಗ್ಯ ಹಾಗೂ ಶಿಕ್ಷಣ ಗಗನ ಕುಸುಮವೇ ಸರಿ. ಇಲ್ಲಿ ಅಂಗನವಾಡಿ ಕೇಂದ್ರವಾಗಲಿ ಆರೋಗ್ಯ ಕೇಂದ್ರವಾಗಲಿ ಯಾವುದೂ ಇಲ್ಲ. ಒಡೆಯರ್‍ಪಾಳ್ಯ, ಲೊಕ್ಕನ ಹಳ್ಳಿ ಅಥವಾ ಹನೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಬೇಕು.

ಸಂಬಂಧಪಟ್ಟ ಯಾವುದೇ ನರ್ಸ್ ಆಗಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯ ರಾಗಲೀ ಇಲ್ಲಿಗೆ ಭೇಟಿ ನೀಡಿ ಬಾಣಂತಿಯರ ಯೋಗಕ್ಷೇಮ ವಿಚಾರಿಸುತ್ತಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಪೋಡಿಗೆ ಭೇಟಿ ನೀಡಿ ಯೋಜನೆಯಿಂದ ವಂಚಿತವಾಗಿರುವ ಬಡ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಪಿ.ಜಿ. ಪಾಳ್ಯ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ. ಕಳೆದ ವರ್ಷ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಈ ಪೋಡುಗಳಿಗೆ ಭೇಟಿ ನೀಡಿ ಒಂದು ರಾತ್ರಿ ವಾಸ್ತವ್ಯ ಹೂಡಿ ಜನರ ಆತಿಥ್ಯ ಸ್ವೀಕರಿಸಿ ಹೋಗಿದ್ದಾರೆ.  ಆದರೂ ಈ ಪೋಡುಗಳ ಜನತೆಗೆ ಸರ್ಕಾರದ ಸೌಲಭ್ಯಗಳು ತಲುಪದಿರುವುದು ಶೋಚನೀಯವೇ ಸರಿ.

ಜಾಣ ಕುರುಡು ಅನುಸರಿಸುತ್ತಿರುವ ಅಧಿಕಾರಿಗಳು ಈ ಪೋಡುಗಳತ್ತ ಸುಳಿಯು ವುದೇ ಇಲ್ಲ ಇನ್ನೆಲ್ಲಿಯ ಸೌಲಭ್ಯ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೋಷಿತ, ಸಾಮಾಜಿಕ ದುರ್ಬಲ ಸೋಲಿಗರ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸಿ ಸಮಾಜದ ಮುಖ್ಯ ವಾಹಿನಿಗೆ ತರುವರೇ ಕಾದು ನೋಡಬೇಕಿದೆ.

Facebook Comments

Sri Raghav

Admin