ಉಪ್ಪಿ ಕನಸಿನ ‘ಪ್ರಜಾಕೀಯ’ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Upendra-PRajaakiya--01

ಬೆಂಗಳೂರು, ಆ.12- ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲ. ನಾನೇ ಸ್ವಂತ ಪಕ್ಷ ಕಟ್ಟುತ್ತೇನೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವ ಪಕ್ಷಕ್ಕೂ ಸೇರುವುದಿಲ್ಲ. ಜನರ ಮಧ್ಯೆ ನಿಂತು ನಾನೇ ಸ್ವಂತ ಪಕ್ಷ ಕಟ್ಟುತ್ತೇನೆ. ಇನ್ನೂ ಪಕ್ಷದ ಟೈಟಲ್ ಅಂತಿಮವಾಗಿಲ್ಲ ಎಂದು ಹೇಳಿದರು.

ನಾನು ಮಾತನಾಡುವ ರೀತಿ ಎಲ್ಲರಿಗೂ ಗೊತ್ತಿದೆ. ಹಣ ಬಲ, ತೋಳ್ಬಲ ಇರುವವರು ರಾಜಕೀಯಕ್ಕೆ ಬಂದು ಗೆಲ್ಲುತ್ತಾರೆ. ಗೆದ್ದ ನಂತರ ಸರಿಯಾಗಿ ಕೆಲಸ ಮಾಡುವುದಿಲ್ಲ. ಇಂತಹ ವ್ಯವಸ್ಥೆಯನ್ನು ಕಿತ್ತುಹಾಕಲು ಪ್ರತಿಯೊಬ್ಬರೂ ಪಣ ತೊಡಬೇಕು ಒಳ್ಳೆಯ ವ್ಯಕ್ತಿಗೆ ವೋಟ್ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ನಾನು ರಾಜಕೀಯಕ್ಕೆ ಬರುತ್ತಿರುವುದು ಹಣ ಮಾಡಲು ಅಲ್ಲ. ಜನರ ಮಧ್ಯೆ ನಿಂತು ಸಮಸ್ಯೆಗಳನ್ನು ಬಗೆಹರಿಸಲು ನಾನು ಬರುತ್ತಿದ್ದೇನೆ. ಅಸಾಮಾನ್ಯರು ಕಟ್ಟುವ ತೆರಿಗೆಯಿಂದ ಬಜೆಟ್ ನಡೆಯುತ್ತಿದೆ. ಆ ಬಜೆಟ್‍ನಲ್ಲಿ ಘೋಷಣೆಯಾಗಿರುವ ಅನುದಾನ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಬಿಡುಗಡೆಯಾಗುತ್ತದೆ. ಕಷ್ಟಪಟ್ಟು ದುಡಿದು ತೆರಿಗೆ ಕಟ್ಟಿರುವ ಹಣ ಯಾವುದೇ ಕಾರಣಕ್ಕೂ ಪೋಲಾಗಬಾರದು. ಆಯಾ ಕ್ಷೇತ್ರದಲ್ಲಿ ನೀರು, ಚರಂಡಿ, ರಸ್ತೆ, ಶಾಲೆ, ವೈದ್ಯಕೀಯ, ಶಿಕ್ಷಣ ಸೇರಿದಂತೆ ನಾನಾ ಸಮಸ್ಯೆಗಳು ತಾಂಡವವಾಡುತ್ತಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದು ಶಾಸಕನ ಕರ್ತವ್ಯ ಎಂದು ಹೇಳಿದರು.

ನಾನು ಖಾಕಿ ಹಾಕಿಕೊಂಡು ಮಾತನಾಡುತ್ತಿರುವುದು ವಿಶೇಷವೇನೆಂದರೆ, ನಾನೊಬ್ಬ ಕಾರ್ಮಿಕ. ಕಾರ್ಮಿಕನಾಗಿಯೇ ಪಕ್ಷ ಕಟ್ಟಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ಮಾಡುತ್ತೇನೆ. ಯಾರಾದರೂ ನಮ್ಮ ಪಕ್ಷಕ್ಕೆ ಬರಬಹುದು. ಪಕ್ಷದಲ್ಲಿದ್ದು ಭ್ರಷ್ಟಾಚಾರ ಮಾಡಿ ದುಡ್ಡು ಮಾಡುವವರು ನಮ್ಮ ಪಕ್ಷಕ್ಕೆ ಬರುವುದು ಬೇಡ. ಒಳ್ಳೆಯ ವ್ಯಕ್ತಿತ್ವವಿರುವ ಜನರು ನಮ್ಮ ಪಕ್ಷಕ್ಕೆ ಬರಬೇಕು. ಆಯಾ ಕ್ಷೇತ್ರದಲ್ಲಿ ಏನೇ ಸಮಸ್ಯೆಗಳಿದ್ದರೂ ನನ್ನ ಇ-ಮೇಲ್‍ಗೆ ಕಳುಹಿಸಿಕೊಡಿ. ಆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಮನವಿ ಮಾಡೋಣ ಎಂದರು.

ನನಗೆ ಚಿಕ್ಕ ವಯಸ್ಸಿನಿಂದಲೂ ರಾಜಕೀಯಕ್ಕೆ ಬರಬೇಕೆಂಬ ಮಹದಾಸೆ ಇತ್ತು. ನನ್ನ ತಂದೆ-ತಾಯಿ ಬೇಡ ಎಂದು ಹೇಳುತ್ತಿದ್ದರು. ಹಾಗಾಗಿ ಸ್ವಲ್ಪ ತಡವಾಗಿ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಸಹಕಾರ, ಬೆಂಬಲ ಅತ್ಯಗತ್ಯ. ಪ್ರತಿದಿನ ಪಾರದರ್ಶಕವಾಗಿ ಕೆಲಸ ಮಾಡುವವರು ಬೇಕು. ಎಲ್ಲಿ ಹಣ ಇದೆಯೋ ಅಲ್ಲಿ ವಿಪರೀತ ಸಮಸ್ಯೆ ಇದೆ ಎಂದು ವಿವರಿಸಿದರು.  ಹಿಂದೆ ರ್ಯಾಲಿಯಲ್ಲಿ ಭಾಷಣ ಮಾಡಿ ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ರಾಜಕೀಯ ನಾಯಕರು ಕೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಫೇಸ್‍ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ವೇಗವಾಗಿ ಬೆಳೆಯುತ್ತಿವೆ ಎಂದರು.

ನನಗೆ ಸೋಲು-ಗೆಲುವಿನ ಚಿಂತೆ ಇಲ್ಲ. ಹೀಗಾಗಿ ಹಣ ಇಲ್ಲದೆ ರಾಜಕೀಯ ಮಾಡಬೇಕು. ನನಗೆ ಆಶಾಭಾವನೆ ಇದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪ್ರಜಾಕೀಯ ಪಕ್ಷ ಮಾಡೋಣ. ನಾನು ಜನಸೇವಕನಾಗಿರಬೇಕು. ಅದಕ್ಕೆ ನಾನು ಖಾಕಿ ಶರ್ಟ್ ಹಾಕಿದ್ದೇನೆ ಎಂದು ಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದರು.

ನೀವು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಈ ಇ- ಮೇಲ್ ವಿಳಾಸಕ್ಕೆ ಕಳುಹಿಸಬಹುದು
prajakarana1@gmail.com

prajakarana2@gmail.com

prajakarana3@gmail.com

Facebook Comments

Sri Raghav

Admin