ಟ್ರಬಲ್ ಶೂಟರ್ ಡಿಕೆಶಿಗೆ ಗೃಹಖಾತೆ..?

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ರಾಯಚೂರು, ಆ.12- ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಕಾಪಾಡಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿ ಹೈಕಮಾಂಡ್ ನಾಯಕರ ಮೆಚ್ಚುಗೆ ಗಳಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚುವರಿಯಾಗಿ ಗೃಹಖಾತೆ ಸಿಗುವ ಸಾಧ್ಯತೆ ಕೇಳಿಬಂದಿದೆ. ಖಾಲಿ ಇರುವ ಮೂರು ಸಂಪುಟ ಸ್ಥಾನಗಳನ್ನು ಭರ್ತಿ ಮಾಡುವ ಸಂಬಂಧ ಇಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚುವರಿಯಾಗಿ ಗೃಹಖಾತೆ ಹೊಣೆಗಾರಿಕೆ ನೀಡುವ ವಿಷಯ ಕೇಳಿಬಂದಿದೆ.

ಚುನಾವಣೆ ಸಂದರ್ಭದಲ್ಲಿ ಗೃಹಖಾತೆ ಜವಾಬ್ದಾರಿ ವಹಿಸಿಕೊಳ್ಳಲು ಹಿರಿಯ ಸಚಿವರಾರೂ ಮುಂದೆ ಬಂದಿರಲಿಲ್ಲ. ರಮೇಶ್‍ಕುಮಾರ್, ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ ಸೇರಿದಂತೆ ಯಾರೂ ಈ ಖಾತೆ ನಿರ್ವಹಿಸುವ ಒಲವು ವ್ಯಕ್ತಪಡಿಸಿರಲಿಲ್ಲ ಎನ್ನಲಾಗಿದ್ದು, ಇಗ ಡಿ.ಕೆ.ಶಿವಕುಮಾರ್ ಅವರಿಗೆ ಈ ಖಾತೆ ನೀಡಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದ್ದು, ಖಾತೆಯನ್ನು ನಿಭಾಯಿಸಲು ಡಿ.ಕೆ.ಶಿವಕುಮಾರ್ ಅವರು ಕೂಡ ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಗುಜರಾತ್‍ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲ ಭೀತಿಯಿಂದ ಪಾರು ಮಾಡಲು ಬೆಂಗಳೂರಿಗೆ ಕರೆತಂದ ಸಂದರ್ಭದಲ್ಲಿ ಯಾರೂ ಆತಿಥ್ಯ ವಹಿಸಿಕೊಳ್ಳಲು ಮುಂದಾಗದ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು. ತಮ್ಮ ಮೇಲೆ ಐಟಿ ದಾಳಿ ನಡೆದರೂ ಕೂಡ ಧೃತಿಗೆಡದೆ ಶಾಸಕರನ್ನು ರಕ್ಷಿಸಿ ಗುಜರಾತ್‍ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಗೆಲುವಿಗೆ ಕಾರಣವಾಗಿ ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಒಳಗಾಗಿದ್ದರು.

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸಂದರ್ಭದಲ್ಲೂ ಕೂಡ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಬಳ್ಳಾರಿ ಉಪಚುನಾವಣೆ ಸಂದರ್ಭದಲ್ಲೂ ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸಿ ಯಶಸ್ವಿಯಾಗಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆಂಬ ನಂಬಿಕೆ ಹೈಕಮಾಂಡ್‍ಗೆ ಬಂದಿರುವುದರಿಂದ ಸಿಎಂ ಬಳಿ ಇರುವ ಗೃಹ ಖಾತೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅದೇ ರೀತಿ ಖಾಲಿ ಉಳಿದಿರುವ ಮೂರು ಸಂಪುಟ ಸ್ಥಾನಗಳಿಗೆ ನೇಮಕ ಮಾಡುವ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ. ಎಚ್.ಎಸ್.ಮಹದೇವ ಪ್ರಸಾದ್ ಅವರ ನಿಧನ ಹಾಗೂ ಡಾ.ಜಿ.ಪರಮೇಶ್ವರ್ ಮತ್ತು ಎಚ್.ವೈ.ಮೇಟಿಯವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಮೂವರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದ್ದು, ಆ.16ರ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪಕ್ಷ ಸಂಘಟನೆ, ಮುಂದಿನ ಚುನಾವಣಾ ಕಾರ್ಯತಂತ್ರ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಬಂಧ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಕೂಡ ಮಹತ್ವದ ಚರ್ಚೆ ನಡೆಸಿದ್ದಾರೆ.

Facebook Comments

Sri Raghav

Admin