ರಾಜ್ಯಕ್ಕೆ ಬಂದ ಎಲೆಕ್ಷನ್ ‘ಶಾ’ಣಾಕ್ಷನಿಗೆ ಅದ್ದೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah-01

ಬೆಂಗಳೂರು, ಆ.12- ಬಹು ದಿನಗಳ ನಂತರ ಕರ್ನಾಟಕಕ್ಕೆ ಇಂದು ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಪಕ್ಷದ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.ಬೆಳಗ್ಗೆ 10.45ಕ್ಕೆ ಸರಿಯಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ರಾಜ್ಯ ಮುಖಂಡರು ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ ಸೇರಿದಂತೆ ಮತ್ತಿತರರು ಬಿಜೆಪಿಯ ಚಾಣುಕ್ಯನನ್ನು ನಗುನಗುತ್ತಲೇ ಬರಮಾಡಿಕೊಂಡರು.

ಬಳಿಕ ಅಲ್ಲಿಂದ ಅಮಿತ್ ಶಾ ಅವರನ್ನು ಭಾರೀ ಬಿಗಿ ಭದ್ರತೆ ನಡುವೆ ಟೋಲೆಗೇಟ್ ಬಳಿ ಕರೆತರಲಾಯಿತು. ಈ ವೇಳೆ ಸಾವಿರಾರು ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರು ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‍ಶಾಗೆ ಜೈಕಾರದ ಘೋಷಣೆಗಳನ್ನು ಕೂಗಿ ಸ್ವಾಗತ ನೀಡಿದರು. ಅಮಿತ್ ಶಾ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಹರ್ಷೋದ್ಗಾರಗಳ ಮೂಲಕ ಉದ್ಯಾನನಗರಿಗೆ ಸ್ವಾಗತ ಕೋರಲಾಯಿತು. ತದನಂತರ ಅಲ್ಲಿಂದ ಬಳ್ಳಾರಿ ರಸ್ತೆಯ ಮೂಲಕ ನೇರವಾಗಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ ಕರೆತಂದರು.

ಈ ವೇಳೆಯೂ ಇಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಪುನಃ ಪಟಾಕಿ ಸಿಡಿಸಿ ಸಿಹಿ ಹಂಚಿ ಜೈಂಕಾರಗಳ ಮೂಲಕ ಕಚೇರಿಗೆ ಬರಮಾಡಿಕೊಂಡರು.
ಪಕ್ಷದ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಗ್ರಂಥಾಲಯವನ್ನು ಉದ್ಘಾಟಿಸಿ ತದ ನಂತರ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಮೊದಲೇ ನಿಗದಿಯಾದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು, 2014ರ ಲೋಕಸಭೆ ಚುನಾವಣೆಯಲ್ಲಿ ಜಗಳಿಸಿದ 11 ಲೋಕಸಭೆ ಸದಸ್ಯರು, ಮುಖಂಡರು ಸೇರಿದಂತೆ ಮತ್ತಿತರ ಜತೆ ಸಮಾಲೋಚನೆ ಸಭೆಯನ್ನು ನಡೆಸಿದರು.

ಇತ್ತೀಚೆಗೆ ಕೈಗೊಂಡಿದ್ದ ವಿಸ್ತಾರಕ್ , ಪಕ್ಷ ಸಂಘಟನೆ, ಕೇಂದ್ರ ಮತ್ತು ಮೋದಿ ನಾಯಕತ್ವ ಬಗ್ಗೆ ಜನರಿಗಿರುವ ಸದಾಭಿಪ್ರಾಯ, ರಾಜ್ಯ ಸರ್ಕಾರದ ಬಗ್ಗೆ ಮತದಾರರಿಗಿರುವ ಅಭಿಪ್ರಾಯ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದರು.  ಸಂಜೆ ಖಾಸಗಿ ಹೋಟೆಲ್‍ನಲ್ಲಿ ಚಿಂತಕರ ಜತೆ ಸಮಾಲೋಚನೆ ಸಭೆ ನಡೆಸಿದ ಅಮಿತ್ ಶಾ ಅವರು ತಮ್ಮ ಮೊದಲ ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದರು.

Facebook Comments

Sri Raghav

Admin