ರಾಜ್ಯ ಬಿಜೆಪಿ ಉಸ್ತುವಾರಿ ಜವಾಬ್ದಾರಿ ಮುರಳೀಧರ ರಾವ್ ಬದಲಿಗೆ ರಾಮ್ ‍ಮಾಧವ್ ಹೆಗಲಿಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Ram-madhav--01

ಬೆಂಗಳೂರು, ಆ.12- ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದ ಮುರಳೀಧರ ರಾವ್ ಅವರನ್ನು ಬದಲಾಯಿಸಿ ಆ ಜಾಗಕ್ಕೆ ಆರ್‍ಎಸ್‍ಎಸ್ ಹಿರಿಯ ಮುಖಂಡ ರಾಮ್‍ಮಾಧವ್ ಅವರನ್ನು ಕೂರಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.ರಾಮ್ ಮಾಧವ್ ಸದ್ಯಕ್ಕೆ ಜಮ್ಮು- ಕಾಶ್ಮೀರದಲ್ಲಿ ಬಿಜೆಪಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದು ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿಗೆ ಅವರೇ ಸೂಕ್ತವೆಂದು ಖುದ್ದು ಆರ್‍ಎಸ್‍ಎಸ್ ಕೂಡ ಬಿಜೆಪಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನಿಸಿಕೆ ಎಲ್ಲರಲ್ಲಿ ಇರುವುದರಿಂದ ತುರ್ತಾಗಿ ಇಲ್ಲಿರುವ ಭಿನ್ನಮತಗಳು ಉಪಶಮನ ಆಗಬೇಕಿದೆ. ಈ ಹಿನ್ನೆಲೆಯಲ್ಲಿ, ಪಕ್ಷದ ಉಸ್ತುವಾರಿಯನ್ನು ಬದಲಾಯಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಹೀಗೆ, ದಿಢೀರ್ ಎಂದು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾಗಿದ್ದಾರೂ ಏಕೆ, ಇದು ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವ ತಂತ್ರಗಾರಿಕೆಯೇ ? ಎಂಬ ಪ್ರಶ್ನೆಗಳು ಎದುರಾಗಿದೆ.

ರಾಜ್ಯದಿಂದಲೇ ದೂರು ?

ನಿಜಹೇಳಬೇಕೆಂದರೆ, ಮುರಳೀಧರ ರಾವ್ ಅವರನ್ನು ಬದಲಾಯಿಸುವಂತೆ ರಾಜ್ಯ ಬಿಜೆಪಿ ನಾಯಕರ ಒಂದು ಬಣ, ಹೈಕಮಾಂಡ್ ಗೆ ಮನವಿ ಸಲ್ಲಿಸಿದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.ಹಾಗೊಂದು ವೇಳೆ, ರಾಮ್ ಮಾಧವ್ ಅವರು ಕರ್ನಾಟಕದ ಉಸ್ತುವಾರಿ ವಹಿಸಿಕೊಳ್ಳುವುದೇ ಆದರೆ, ಅವರಿಗೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಜವಾಬ್ದಾರಿ ಅವರ ಹೆಗಲಿಗೇ ಬೀಳಲಿದೆ.

ದಕ್ಷಿಣದಲ್ಲೂ ಮ್ಯಾಜಿಕ್ ಮಾಡಲು ನಿರ್ಧಾರ:

ಈಗ ಭಾರತದ ಉತ್ತರ ಭಾಗದ ಬಹುತೇಕ ರಾಜ್ಯಗಳನ್ನು ಬಿಜೆಪಿಯು ತನ್ನ ವಶಕ್ಕೆ ತೆಗೆದುಕೊಂಡಿದ್ದು, ದಕ್ಷಿಣ ಭಾರತದಲ್ಲೂ ಅದೇ ಹವಾ ಎಬ್ಬಿಸುವ ಕಾತುರದಲ್ಲಿದೆ ಬಿಜೆಪಿ. ಇದಲ್ಲದೆ, ಈ ಹಿಂದೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಗ್ಗೆ ಕಳಕಳಿ ಹೊಂದಿದ್ದ ವೆಂಕಯ್ಯ ನಾಯ್ಡು ಅವರೀಗ ಉಪ ರಾಷ್ಟ್ರಪತಿ ಹುದ್ದೆಗೆ ಏರಿರುವುದರಿಂದ ದಕ್ಷಿಣ ಭಾರತಕ್ಕೊಬ್ಬ ಸಮರ್ಥ ಉಸ್ತುವಾರಿ ನಾಯಕ ಬೇಕು ಎಂಬ ಕೂಗು ಈಗ ಬಿಜೆಪಿ ವಲಯದಲ್ಲಿ ಕೇಳಿಬಂದಿದೆ ಎನ್ನಲಾಗಿದೆ.

Facebook Comments

Sri Raghav

Admin