‘ಅಮಿತ್ ಷಾ ಅಲ್ಲ, ಮೋದಿ ಬಂದು ಠಿಕಾಣಿ ಹೂಡಿದರೂ ರಾಜ್ಯದಲ್ಲಿ ಕಾಂಗ್ರೆಸ್ಸೇ ಮತ್ತೆ ಅಧಿಕಾರಕ್ಕೆ ಬರೋದು’

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಕಲಬುರಗಿ, ಆ.13-ಅಮಿತ್ ಷಾ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಬಂದು ಕರ್ನಾಟಕದಲ್ಲಿ ವಾಸ್ತವ್ಯ ಹೂಡಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯ ಅಳಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಷಾ -ಮೋದಿ ಇಬ್ಬರೂ ಇಲ್ಲೇ ಬಂದು ಠಿಕಾಣಿ ಹೂಡಲಿ ನಮಗೆ ಯಾವ ಭಯ ಇಲ್ಲ. ಮುಂದಿನ ಬಾರಿಯೂ ಸಂಪೂರ್ಣ ಬಹುಮತದೊಂದಿಗೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ಸಾಧ್ಯವೇ ಇಲ್ಲ. ನಮ್ಮ ಅಧಿಕಾರವನ್ನು ಪೂರ್ಣಗೊಳಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಷಡ್ಯಂತ್ರ. ಇಂತಹ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದರು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಬೇಡಿಕೆ ಹಿಂದೆ ನನ್ನ ಪಾತ್ರವಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ನಮ್ಮ ಮೇಲೆ ಆರೋಪ ಹೊರಿಸುತ್ತಿವೆ. ನಾವು ಸಮಾಜವನ್ನು ಜೋಡಿಸುವವರೇ ಹೊರತು ಸಮಾಜ ಒಡೆಯುವವರಲ್ಲ. ಬಿಜೆಪಿ ಪಕ್ಷ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಕತ್ತರಿ ಇಟ್ಟುಕೊಂಡಿದ್ದರೆ ನಾವು ಸೂಜಿ ಇಟ್ಟುಕೊಂಡಿದ್ದೇವೆ. ಇಬ್ಬರೂ ಸೇರಿ ಮನವಿ ಸಲ್ಲಿಸಿದರೆ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಅಭ್ಯರ್ಥಿ ಎಂಬ ಜನಾರ್ದನ್‍ಪೂಜಾರಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಯಾರಾಗುತ್ತಾರೆ ಎಂಬುದು ಶಾಸಕರು ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಜನಾರ್ಧನ ಪೂಜಾರಿಯಲ್ಲ ಎಂದು ಹೇಳಿದರು.

Facebook Comments

Sri Raghav

Admin