ಗೋರಖ್‍ಪುರ್ ಬಿಆರ್‍ಡಿ ಆಸ್ಪತ್ರೆಯಲ್ಲಿ ಏರುತ್ತಲೇ ಇದೆ ಮಕ್ಕಳ ಸಾವಿನ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

BRD-Medical-College

ಗೋರಖ್‍ಪುರ್, ಅ.12-ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಕ್ಷೇತ್ರ ಗೋರಖ್‍ಪುರ್‍ದಲ್ಲಿರುವ ಹಾಗೂ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೇರಿದೆ. ದೇಶಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿದೆ. ಮಕ್ಕಳ ಸಾವು ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಪರಿಸ್ಥಿತಿ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ.ನಡ್ಡಾ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಆ.7 ರಿಂದ 11ರವರೆಗೆ ಐದು ದಿನಗಳ ಅವಧಿಯಲ್ಲಿ ಬಿಆರ್‍ಡಿ ಆಸ್ಪತ್ರೆಯಲ್ಲಿ 63 ಮಕ್ಕಳು ಬಲಿಯಾಗಿದ್ದರು. ಮೊನ್ನೆ, ನಿನ್ನೆ ಮತ್ತು ಇಂದು ಇನ್ನೂ ಕೆಲವು ಮಕ್ಕಳು ಅಸುನೀಗಿದ್ದು, ಸತ್ತವರ ಸಂಖ್ಯೆ 70ಕ್ಕೇರಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಈವರೆಗೆ 65 ಮಕ್ಕಳು ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಸಾವು ಪ್ರಕರಣಗಳನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ರಕ್ಷಣೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಘಟನೆಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಈಗಾಗಲೇ ಸೂಕ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು

ಈ ಆಸ್ಪತ್ರೆಯಲ್ಲಿ ಇಂದು ಜಪಾನಿ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ ಅಥವಾ ಮಸ್ತಿಷ್ಕೋದ್ರೇಕ) ರೋಗದಿಂದ ಹಾಗೂ ಆಮ್ಲಜನಕ ಪೂರೈಕೆ ಅಡಚಣೆಯಿಂದಾಗಿ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಪರಿಸ್ಥಿತಿ ನಿರ್ವಹಣೆಯ ಉಸ್ತುವಾರಿ ವಹಿಸಿದ್ದಾರೆ. ಮಕ್ಕಳ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.

ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದ್ದ ಕಂಪನಿಗಳ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ್ದ ಆಸ್ಪತ್ರೆ ವೈದ್ಯರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಬಿಆರ್‍ಡಿ ಆಸ್ಪತ್ರೆಯು 63 ಲಕ್ಷ ರೂ.ಗಳನ್ನು ಬಾಕಿ ಇರಿಸಿಕೊಂಡ ಕಾರಣ ಸಂಸ್ಥೆಯು ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂಬ ಆರೋಪಗಳ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.  ಬಿಆರ್‍ಡಿ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಲ್ಲಿ 3,000ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವ ವಿಚಾರ ಬಯಲಾಗಿದೆ.

ಈ ಕಾಲೇಜಿನಲ್ಲಿ 2012ರಲ್ಲಿ 557, ನಂತರದ ವರ್ಷಗಳಲ್ಲಿ ಅನುಕ್ರಮವಾಗಿ 650, 535, 491, 641 ಹಾಗೂ ಈ ವರ್ಷದಲ್ಲಿ ಇಲ್ಲಿಯವರೆಗೆ 163 ಮಕ್ಕಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಿಂದ ತಿಳಿದುಬಂದಿದೆ.

Facebook Comments

Sri Raghav

Admin