ಯಡಿಯೂರಪ್ಪ, ಈಶ್ವರಪ್ಪಗೆ ಅಮಿತ್ ಷಾ ಹಿಗ್ಗಾಮುಗ್ಗಾ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Eshwarppa-AMit-

ಬೆಂಗಳೂರು, ಆ.13- ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತವನ್ನೂ ಸಹಿಸುವುದಿಲ್ಲ. ನಾಯಕರು ವ್ಯಕ್ತಿಗತ ಪ್ರತಿಷ್ಠೆಗಳನ್ನು ಬದಿಗಿರಿಸಿ ಪಕ್ಷ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ನಾಯಕರ ನಡುವಿನ ಅಸಮಾಧಾನಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಷಾ, ವಿಶೇಷವಾಗಿ ಪದಾಧಿಕಾರಿಗಳ ನೇಮಕದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್‍ನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಉಂಟಾಗಿದ್ದ ಭಿನ್ನಮತವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಸಹಿಸುವುದಿಲ್ಲ. ನಮ್ಮದು ಕಾರ್ಯಕರ್ತರ ಪಕ್ಷವಾಗಿರುವುದರಿಂದ ವ್ಯಕ್ತಿ ಪೂಜೆ ಇಲ್ಲವೇ ಏಕಪಕ್ಷೀಯ ನಿರ್ಧಾರ ಹಾಗೂ ಸರ್ವಾಧಿಕಾರಿ ಧೋರಣೆ ಇರಕೂಡದು ಎಂದು ಕಠಿಣ ಶಬ್ಧಗಳಲ್ಲೇ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರತಿಪಕ್ಷವಾಗಿ ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಇತ್ತೀಚೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಬಂಧಿಗಳ ಮೇಲೆ ನಡೆದ ಐಟಿ ಅಧಿಕಾರಿಗಳ ದಾಳಿ, ಕಾನೂನು ಸುವ್ಯವಸ್ಥೆ ಕುಸಿತ ಸೇರಿದಂತೆ ಮತ್ತಿತರ ಪ್ರಚಲಿತ ಘಟನೆಗಳನ್ನು ಮುಂದಿಟ್ಟುಕೊಂಡು ಸಮರ್ಪಕವಾಗಿ ಹೋರಾಟ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.

ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರಿನಂದಷ್ಟೇ ಮತ ಬರುವುದಿಲ್ಲ. ಪ್ರತಿಪಕ್ಷವಾಗಿದ್ದು ರಚನಾತ್ಮಕವಾಗಿ ಕೆಲಸ ಮಾಡಬೇಕು. ಸರ್ಕಾರದ ಸಣ್ಣಪುಟ್ಟ ವೈಫಲ್ಯಗಳನ್ನು ಕೂಡ ಅಧಿವೇಶನ ಇಲ್ಲವೇ ಸಾರ್ವಜನಿಕರ ಮುಂದಿಡಬೇಕು. ಪಕ್ಷ ಸಂಘಟನೆ, ವಿಸ್ತಾರಕ್ ಸೇರಿದಂತೆ ಯಾವುದೇ ಕೆಲಸಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ ಎಂದು ಅಮಿತ್ ಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲೇ ವಾಸ್ತವ್ಯ:

ರಾಜ್ಯ ಘಟಕದ ನಾಯಕರು ಒಳಜಗಳ, ಕಚ್ಚಾಟ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಇರುವ ಹಿನ್ನೆಲೆಯಲ್ಲಿ ಅಮಿತ್ ಷಾ ಬರುವ ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯದಲ್ಲೇ ವಾಸ್ತವ್ಯ ಹೂಡಿ ಪಕ್ಷದ ವಿದ್ಯಮಾನಗಳ ಬಗ್ಗೆ ತಾವೇ ವಿಶೇಷ ಆಸಕ್ತಿ ವಹಿಸುವುದಾಗಿ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿರುವ ಭಿನ್ನಮತಕ್ಕೂ, ಕರ್ನಾಟಕದಲ್ಲಿರುವ ಭಿನ್ನಮತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಪ್ರಮುಖ ಕೆಲವು ನಾಯಕರು ಪಕ್ಷದ ಹಿತಾಸಕ್ತಿಗಿಂತ ತಮ್ಮ ಹಿತಾಸಕ್ತಿ ಮುಖ್ಯ ಎಂದುಕೊಂಡಿದ್ದಾರೆ. ಉತ್ತರಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ನಾವು ಪಕ್ಷದೊಳಗಿನ ಭಿನ್ನಮತವನ್ನು ಒಂದೇ ಹಂತದಲ್ಲಿ ನಿವಾರಿಸಿದೆವು. ಆದರೆ, ಕರ್ನಾಟಕದಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೆಲ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ವಿಧಾನಸಭೆ ಚುನಾವಣೆ ನಡೆಯುವವರೆಗೂ ಕರ್ನಾಟಕದಲ್ಲೇ ವಾಸ್ತವ್ಯ ಹೂಡುತ್ತೇನೆ. ಟಿಕೆಟ್ ಹಂಚಿಕೆ, ಪ್ರಣಾಳಿಕೆ ರೂಪಿಸುವುದು, ಪ್ರಚಾರದ ಕಾರ್ಯಶೈಲಿ ಸೇರಿದಂತೆ ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ. ರಾಜ್ಯ ಘಟಕದ ನಾಯಕರು ಕೇವಲ ಪಕ್ಷ ಸಂಘಟನೆಗೆ ಗಮನ ಕೊಡಬೇಕೆಂದು ಸಲಹೆ ನೀಡಿದ್ದಾರೆ. ಪಕ್ಷಕ್ಕೆ ಬರುವವರಿಗೆ ಇಲ್ಲವೇ ನಿಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಖಾತರಿ ನೀಡಬೇಡಿ. ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು. ಮೊದಲು ಪಕ್ಷವನ್ನು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಭದ್ರ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

Facebook Comments

Sri Raghav

Admin