ಅಕ್ರಮ ಸಂಬಂಧ : ಅಡುಗೆ ಭಟ್ಟನ ಮನೆಯಲ್ಲಿ ಮಹಿಳೆ ಕೊಲೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Crime--01

ಬೆಂಗಳೂರು, ಆ.14- ಅಡುಗೆ ಭಟ್ಟನ ರೂಮ್‍ನಲ್ಲಿ ಮಹಿಳೆಯೊಬ್ಬರ ಕೊಲೆಯಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಆಂಧ್ರ ಪ್ರದೇಶದ ಅನಂತಪುರ ನಿವಾಸಿ ಅನಿತಾ ಅಲಿಯಾಸ್ ಹನುಮಕ್ಕ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಅನಿತಾ ಅವರ ಪತಿ ಮರಣ ಹೊಂದಿದ್ದು, ಡಿಪ್ಲಮೋ ವ್ಯಾಸಂಗ ಮಾಡುತ್ತಿರುವ ಮಗನ ಜತೆ ಮತ್ತಿಕೆರೆಯಲ್ಲಿ ಎರಡು ವರ್ಷಗಳಿಂದ ವಾಸವಾಗಿದ್ದರು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಫಾಸ್ಟ್‍ಫುಡ್ ಹೊಟೇಲ್‍ವೊಂದರಲ್ಲಿ ಅನಿತಾ ಅವರು ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಮಗ ಆಂಧ್ರ ಪ್ರದೇಶಕ್ಕೆ ಹೋಗಿದ್ದನು.

ಈ ಮಧ್ಯೆ ಅಡುಗೆ ಭಟ್ಟ ಮಂಜು ಅಲಿಯಾಸ್ ರವಿ ಎಂಬಾತನ ಪರಿಚಯವಾಗಿದೆ. ಬಿಕೆ ನಗರದ 2ನೆ ಮುಖ್ಯರಸ್ತೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ ಮಂಜು ಮನೆಗೆ ಅನಿತಾ ಅವರು ಆಗಿಂದಾಗ್ಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಈ ನಡುವೆ ಅಡುಗೆ ಭಟ್ಟನ ರೂಮ್‍ನಲ್ಲಿ ಅನಿತಾಳಿಗೆ ಚಾಕುವಿನಿಂದ ಕುತ್ತಿಗೆ, ಕೈ, ಹೊಟ್ಟೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಇರಿದು ಕೊಲೆ ಮಾಡಿ ರೂಮ್‍ನ ಬೀಗ ಹಾಕಿಕೊಂಡು ಆರೋಪಿ ಪರಾರಿಯಾಗಿದ್ದಾನೆ.

ಇಂದು ಬೆಳಗ್ಗೆ ಈ ಕೊಠಡಿಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಕೊಠಡಿಯ ಬಾಗಿಲ ಬೀಗ ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಎರಡು-ಮೂರು ದಿನಗಳ ಹಿಂದೆಯೇ ಈ ಮಹಿಳೆಯನ್ನು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ನಾಪತ್ತೆಯಾಗಿರುವ ಅಡುಗೆ ಭಟ್ಟನ ಮೇಲೆ ಶಂಕೆ ವ್ಯಕ್ತವಾಗಿದೆ.  ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಡುಗೆ ಭಟ್ಟನಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin