ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆಯನ್ನು ಜನರ ಗಮನಕ್ಕೆ ತನ್ನಿ : ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--0

ಬೆಂಗಳೂರು, ಆ.14- ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿರುವ 20ಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯಾಕಾಂಡ ವಿಚಾರವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇಂದಿಲ್ಲಿ ಕರೆ ನೀಡಿದರು. ಕೇಶವಕೃಪದಲ್ಲಿ ನಡೆದ ಆರ್‍ಎಸ್‍ಎಸ್ ಮತ್ತಿತರ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆ ವೇಳೆ ಷಾ ಈ ಕರೆ ನೀಡಿದರು. ರಾಜ್ಯದಲ್ಲಿ 20ಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆಯಾಗಿದ್ದರೂ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಈ ವಿಚಾರವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಷಾ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಅನುದಾನ ವಾಪಸ್ ಪಡೆದ ವಿಚಾರಗಳ ಬಗ್ಗೆಯೂ ಷಾ ಮಾಹಿತಿ ಪಡೆದುಕೊಂಡರು.

ಆರ್‍ಎಸ್‍ಎಸ್ ಕಾರ್ಯಕರ್ತರ ಪ್ರಕರಣಗಳಲ್ಲಿ ರಾಜ್ಯ ಬಿಜೆಪಿ ಯಾವ ರೀತಿ ಸ್ಪಂದಿಸಿದೆ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಹಕಾರ ನೀಡುತ್ತಿದ್ದಾರೆಯೇ ಎಂದು ಸಂಘ ಪರಿವಾರದ ಮುಖಂಡರನ್ನು ಅಮಿತ್ ಷಾ ಪ್ರಶ್ನಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರಿಂದ ವೈಯಕ್ತಿಕ ಅಭಿಪ್ರಾಯ ಸಂಗ್ರಹದಲ್ಲೂ ಷಾ ತೊಡಗಿಸಿಕೊಂಡರು.

ಸಭೆಯಲ್ಲಿ ಎಬಿವಿಪಿ, ವಿಎಚ್‍ಪಿ, ಹಿಂದೂ ಜಾಗರಣವೇದಿಕೆ, ವನವಾಸಿ ಕಲ್ಯಾಣ, ಸೇವಾ ಭಾರತಿ, ಭಾರತೀಯ ಕಿಸಾನ್ ಸಂಘ, ಮಜ್ದೂರ್ ಸಂಘ, ವಿದ್ಯಾಭಾರತಿ, ಸ್ವದೇಶಿ ಜಾಗರಣ ವೇದಿಕೆಯ ಹಲವಾರು ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‍ಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರರಾವ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್, ರಾಮ್‍ಲಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್, ವಿಎಚ್‍ಪಿ ಮುಖಂಡರಾದ ಗೋಪಾಲ್, ವಿಜಯಲಕ್ಷ್ಮಿ ದೇಶಮಾನೆ, ಎಬಿವಿಪಿಯ ವಿನಯ್‍ಬಿದರೆ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin