ಕರ್ನಾಟಕದಲ್ಲಿ ಕಮಲ ಅರಳಿಸಲು ‘ಷಾ’ಣಕ್ಯನ ಹೊಸ ಲೆಕ್ಕಾಚಾರಗಳೇನು..?

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಬೆಂಗಳೂರು,ಆ.14- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ನಾಯಕರಿಗೆ ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಬಳಿ ಮೂರು ಸಮೀಕ್ಷೆ ವರದಿಗಳನ್ನು ಇಟ್ಟುಕೊಂಡು, ಇವತ್ತೇ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದರೆ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಬಿಜೆಪಿ ನಾಯಕರನ್ನು ಕೇಳಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು, ನೂರಿಪ್ಪತ್ತೈದರಿಂದ ನೂರೈವತ್ತು ಸ್ಥಾನಗಳಲ್ಲಿ ಗೆಲ್ತೀವಿ ಅಂದಿದ್ದಾರೆ. ಆ ಮಾತಿಗೆ ತಿರುಗೇಟು ನೀಡಿದ ಶಾ, ಇವತ್ತೇ ಚುನಾವಣೆ ನಡೆದರೆ ವಾಸ್ತವವಾಗಿ ಬಿಜೆಪಿ ಎಂಬತ್ತು ಸ್ಥಾನಗಳಲ್ಲಿ ಗೆಲ್ಲಬಹುದು ಅಷ್ಟೇ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಪಕ್ಷದ ನಾಯಕರ ಜತೆಗೆ ನಿರಂತರ ಸಭೆಗಳನ್ನು ನಡೆಸಿದ್ದಾರೆ. ಪ್ರತಿ ಸಭೆಯಲ್ಲೂ ಚುನಾವಣೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿವೆ. ಇನ್ನೂ ಬಹಳ ದೂರದ ಹಾದಿಯನ್ನು ಸಾಗಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

ವರದಿಯ ಆಧಾರ ಸಮಸ್ಯೆಗಳಿವೆ ಎಂಬುದರ ಕಡೆಗೆ ಬೊಟ್ಟು ಮಾಡಿದ್ದಾರೆ ಅಮಿತ್ ಶಾ. ತಮಗೆ ದೊರೆತಿರುವ ವರದಿ ಪ್ರಕಾರ ಯಾವ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಿದೆ, ಎಲ್ಲೆ ಕೈ ತಪ್ಪಿ ಹೋಗುವಂತಿದೆ. ಈ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಪಕ್ಷದವರಿಗೆ ಸೂಚನೆಗಳನ್ನು ನೀಡಿದ್ದಾರೆ.

ಈ ಹಿಂದಿನ ತಪ್ಪು ಮಾಡಬೇಡಿ:

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಈ ಹಿಂದೆ ಅಂದರೆ 2013ರಲ್ಲಿ ಪಕ್ಷದ ಆಂತರಿಕ ಜಗಳ ಹಾಗೂ ಆ ಅವಧಿಯನ್ನು ಮುಗಿಸಲು ಬಿಜೆಪಿ ಹೆಣಗಾಡಿದ್ದರ ಬಗ್ಗೆ ಕೂಡ ಪ್ರಸ್ತಾವ ಮಾಡಿದ್ದಾರೆ ಅಮಿತ್ ಶಾ. ಅಂಥ ಸನ್ನಿವೇಶಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಪರಸ್ಪರ ಕಚ್ಚಾಟವನ್ನು ಪಕ್ಕಕ್ಕಿಡಿ. ಪಕ್ಷ ಮುಖ್ಯ. ಅದಕ್ಕಿಂತ ಯಾರೂ ಹೆಚ್ಚಲ್ಲ ಎಂದಿದ್ದಾರೆ.

ನಾವು ಸರಿಪಡಿಸ್ತೀವಿ, ಚಿಂತಿಸಬೇಡಿ:

ಪಕ್ಷದ ಹಲವರು ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದಾರೆ. ಆಗ ಅಮಿತ್ ಶಾ, ಏನೂ ಯೋಚಿಸಬೇಡಿ. ನಾವು ಅದನ್ನು ನೋಡಿಕೊಳ್ತೇವೆ. ಸದ್ಯಕ್ಕೆ ಎಲ್ಲ ಹಂತದಲ್ಲೂ ಪಕ್ಷವನ್ನು ಬಲಪಡಿಸುವ ಕಡೆಗೆ ಗಮನಕೊಡಿ. ಭ್ರಷ್ಟಾಚಾರದಂಥ ವಿಚಾರ ಬಂದಾಗ ಸರಕಾರದ ವಿರುದ್ಧ ಪ್ರಬಲ ಹೋರಾಟ ಸಂಘಟಿಸಬೇಕು ಎಂದು ಹೇಳಿದ್ದಾರೆ.

ಹಲವು ವಿಚಾರಗಳಲ್ಲಿ ಅಸಮಾಧಾನ:

ರಾಜ್ಯ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸುವುದಕ್ಕೆ ಎಷ್ಟು ಸಭೆಗಳನ್ನು ಮಾಡಿದ್ದೀರಿ ಎಂದು ಕೂಡ ಇದೇ ವೇಳೆ ಪ್ರಶ್ನಿಸಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರೊಬ್ಬರು ಮಾತನಾಡಿದ್ದು, ಹಲವು ವಿಚಾರದಲ್ಲಿ ಅಸಮಾಧಾನ ಇದೆ. ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ಸರಿಯಾದ ಹೋರಾಟ ಸಂಘಟಿಸಿಲ್ಲ ಎಂಬುದನ್ನು ಅಮಿತ್ ಶಾ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಎಂಬ ಮಾಹಿತಿ ನೀಡಿದ್ದಾರೆ.

ಜನರ ಮನಸ್ಥಿತಿ ತಿಳಿಯಲು ಪ್ರಯತ್ನಿಸಿ:

ರಾಜ್ಯ ಸರಕಾರದ ಹಲವು ವಿವಾದಗಳು ವರದಿಯಾದವು. ಆದರೆ ಅಂಥ ಎಲ್ಲ ಸಂದರ್ಭದಲ್ಲಿ ಬಿಜೆಪಿಯು ದೊಡ್ಡಮಟ್ಟದ ಧ್ವನಿ ಎತ್ತಿಲ್ಲ ಅಥವಾ ಬಾಯಿ ಮುಚ್ಚಿಕೊಂಡು ಕೂತಿದೆ. ಉದ್ದುದ್ದ ಭಾಷಣಗಳು ಬಿಗಿಯುವುದು, ಫೋಟೋಗಳಿಗೆ ಪೋಸ್ ಕೊಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ಆಡಳಿತಕ್ಕೆ ಕೊನೆ ಹಾಡಲು ಪ್ರಯತ್ನಿಸಿ. ಜನರ ಮನಸ್ಸನ್ನು ತಿಳಿದುಕೊಳ್ಳುವುದಕ್ಕೆ ಈಗಿನಿಂದಲೇ ಶುರು ಮಾಡಿ. ಚುನಾವಣೆಯ ಮನಸ್ಥಿತಿಯಲ್ಲೇ ಕೆಲಸ ಆರಂಭಿಸಿ. ಇಲ್ಲದಿದ್ದರೆ ನಾವಿಲ್ಲಿ ಗೆಲ್ಲಲ್ಲ ಎಂದಿದ್ದಾರೆ ಅಮಿತ್ ಶಾ.

Facebook Comments

Sri Raghav

Admin