‘ಕಾವೇರಿ’ದ ಚರ್ಚೆ, ಮಹದಾಯಿ ಕುರಿತು ಗೋವಾಗೆ ನಿಯೋಗ : ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

All-Party-Meeting

ಬೆಂಗಳೂರು, ಆ.14-ನ್ಯಾಯಾಧಿಕರಣದ ತೀರ್ಪಿನನ್ವಯ ತಮಿಳುನಾಡಿಗೆ ಬರದ ಸಮಯದಲ್ಲೂ ನೀರು ಬಿಡುತ್ತಿರುವ ರಾಜ್ಯಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಇಂದು ನಡೆದ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದು, ನ್ಯಾಯಾಧಿಕರಣದ ತೀರ್ಪನ್ನು ಸರ್ಕಾರ ಏಕಮುಖವಾಗಿ ಪಾಲನೆ ಮಾಡುತ್ತಿದೆ. ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ಬೆಳೆಗಳಿಗೂ ನೀರು ಬಿಡಬೇಕು. ತೀರ್ಪಿನ ಆದೇಶ ಪಾಲಿಸಬೇಕೆಂದು ಕೇವಲ ತಮಿಳುನಾಡಿಗೆ ಮಾತ್ರ ನೀರು ಬಿಡಲಾಗುತ್ತಿದೆ. ನಮ್ಮ ಪ್ರದೇಶದ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ವಕೀಲರ ವಾದ ಮಂಡನೆ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದೆನಿಸುತ್ತದೆ. ಪರಿಣಾಮಕಾರಿಯಾಗಿ ಪರಿಣಾಮಕಾರಿಯಾಗಿ ವಾದ ಮಂಡಿಸಿ ರಾಜ್ಯದ ಪರವಾಗಿ ನ್ಯಾಯ ಪಡೆಯಬೇಕಾದ ಅಗತ್ಯವಿದೆ ಎಂದು ಜನಪ್ರತಿನಿಧಿಗಳು ಸರ್ಕಾರವನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನ್ಯಾಯಾಧಿಕರಣದ ತೀರ್ಪಿನಂತೆ ಈವರೆಗೆ 24 ಟಿಎಂಸಿ ನೀರು ಹರಿಸಬೇಕಿತ್ತು, ಆದರೆ 17 ಟಿಎಂಸಿ ನೀರು ಹರಿದಿದೆ. ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಳೆದು ನಿಂತ ಬೆಳೆಗಳಿಗೆ 30 ದಿನಗಳ ಕಾಲ ನೀರು ಹರಿಸಲಾಗುವುದು. ರೈತರು ಹೊಸ ಬೆಳೆ ಬೆಳೆಯಬಾರದೆಂದು ಮನವಿ ಮಾಡಲಾಗಿದೆ ಎಂದರು.

ಕಳೆದ ಸಾಲಿಗಿಂತ 8 ರಿಂದ 9 ಟಿಎಂಸಿ ನೀರು ಕಡಿಮೆಯಿದೆ. ಬೆಳೆದು ನಿಂತ ಬೆಳೆಗಳಿಗೆ 30 ದಿನಗಳ ನೀರು ಹರಿಸಿ ಉಳಿದ ನೀರನ್ನು ಕೆರೆಕಟ್ಟೆಗಳಿಗೆ ಹರಿಯಬಿಡಲಾಗುವುದು. ಕುಡಿಯುವ ನೀರಿಗೆ ಅಗತ್ಯವಿರುವುದರಿಂದ ಹೆಚ್ಚು ನೀರು ಬಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರಲ್ಲದೆ, ಒಳಹರಿವು ಕಡಿಮೆ ಇದೆ. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಲಾಗಿದೆ ಎಂದರು.

ಇನ್ನೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಸಭೆಯಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದಾಗ, ತಮಿಳುನಾಡಿಗೆ ಶೇ.52ರಷ್ಟು ಪ್ರಮಾಣದ ನೀರು ಹರಿಯುತ್ತದೆ. ನಮ್ಮಲ್ಲಿ ಶೇ.32 ರಷ್ಟು ಮಾತ್ರ ನೀರು ಹರಿಯುತ್ತದೆ. ತಮಿಳುನಾಡಿನಲ್ಲಿ ಶೇ.32ರಷ್ಟು ಪ್ರಮಾಣದ ಜಲಾನಯನ ಪ್ರದೇಶವಿದೆ. ನಮ್ಮಲ್ಲಿ ಶೇ.50ರಷ್ಟು ಜಲಾನಯನ ಪ್ರದೇಶವಿದ್ದರೂ ನೀರಿನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗಿ ನಮಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಹೇಳಿದರು.
ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲಾ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin