ಗೋವಾ ಜತೆ ಸೌಹಾರ್ದ ಮಾತುಕತೆಗೆ ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

All-Party-Meeting--Eshwarap

ಬೆಂಗಳೂರು, ಆ.14-ಮಹದಾಯಿ-ಕಳಸಾ ಬಂಡೂರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಂಬಂಧ ಗೋವಾ ಮುಖ್ಯಮಂತ್ರಿ ಹಾಗೂ ಅಲ್ಲಿನ ಪ್ರತಿಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸುವ ಸಂಬಂಧ ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆ ರಾಜ್ಯಕ್ಕೆ ತೆರಳುವ ಮಹತ್ವದ ನಿರ್ಧಾರ ಇಂದಿನ ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಮೂಲಕ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಸಿಗುವ ತಾರ್ಕಿಕ ಲಕ್ಷಣಗಳು ಗೋಚರಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಮಹದಾಯಿ-ಕಳಸಬಂಡೂರಿ ವಿವಾದ ಬಗೆಹರಿಸುವ ಸಂಬಂಧ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮನವೊಲಿಸಲು ರಾಜ್ಯ ಬಿಜೆಪಿ ಮುಖಂಡರು ಸಹಮತ ವ್ಯಕ್ತಪಡಿಸಿದರೆ, ಅಲ್ಲಿನ ಪ್ರತಿಪಕ್ಷ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸರ್ವಪಕ್ಷ ಸಭೆಯಲ್ಲಿ ಈ ವಿವಾದಕ್ಕೆ ಕಾಂಗ್ರೆಸ್, ಬಿಜೆಪಿ ಪರಸ್ಪರ ಪ್ರತಿಷ್ಠೆಗಳನ್ನು ಬದಿಗಿಟ್ಟು ವಿವಾದ ಬಗೆಹರಿಸಲು ಗೋವಾಕ್ಕೆ ತೆರಳಿ ಮಾತುಕತೆಗೆ ಮುಂದಾಗುವುದಾಗಿ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಕೂಡ ಈ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಆ.28 ರಂದು ಗೋವಾ ವಿಧಾನಸಭೆ ಉಪಚುನಾವಣೆಯ ನಂತರ ಯಡಿಯೂರಪ್ಪ ನೇತೃತ್ವದಲ್ಲಿ ಗೋವಾಕ್ಕೆ ತೆರಳಿ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಮಹದಾಯಿ ಸಂಬಂಧ ಮಾತುಕತೆ ನಡೆಸುವುದಾಗಿ ತಿಳಿಸಿದರು.

ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಲಾಗಿದೆ. ಆದರೆ ಎರಡೂ ರಾಜ್ಯಗಳು ಸೇರಿ ಸೌಹಾರ್ದಯುತ ಪರಿಹಾರಕ್ಕೆ ಪ್ರಯತ್ನ ನಡೆಸಿ ನಂತರ ಪ್ರಧಾನಿ ಮಧ್ಯಸ್ಥಿಕೆ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಇದಕ್ಕೂ ಮುನ್ನ ಸರ್ವಪಕ್ಷ ಸಭೆಯಲ್ಲಿ ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಾಯಕರ ನಡುವೆ ಕಾವೇರಿದ ಚರ್ಚೆ ನಡೆಯಿತು.
ಬಿಜೆಪಿ-ಕಾಂಗ್ರೆಸ್ ಮುಖಂಡರು ಹಳೆಯ ವಿಚಾರಕ್ಕೆ ಅಂಟಿಕೊಂಡಿದ್ದರು. ಗೋವಾ ಕಾಂಗ್ರೆಸ್ ವಿಪಕ್ಷ ನಾಯಕರನ್ನು ಒಪ್ಪಿಸಿ ನಾವು ಸಿಎಂ ಜೊತೆ ಚರ್ಚೆ ನಡೆಸುತ್ತೇವೆ ಬಿಜೆಪಿ ನಾಯಕರು ಹೇಳಿದರು. ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ ಸಿಎಂ ಸಿದ್ದರಾಮಯ್ಯ, ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಮನವಿ ಮಾಡಿದ್ದೇನೆ. ಪ್ರಧಾನಿ ಬಳಿ ನಿಯೋಗ ತೆರಳಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಕಾಂಗ್ರೆಸ್ ಬೆನ್ನಿಗೆ ನಿಂತ ಜೆಡಿಎಸ್ ಶಾಸಕರು, ಶೆಟ್ಟರ್, ಈಶ್ವರಪ್ಪ, ಪ್ರಹ್ಲಾದ್ ಜೋಷಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.ಗೋವಾ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಿ ಮೂರು ರಾಜ್ಯಗಳ ಸಭೆ ನಡೆಸಲು ವ್ಯವಸ್ಥೆ ಮಾಡಿ ಎಂದು ಸದಾನಂದಗೌಡ ಹಾಗೂ ಈಶ್ವರಪ್ಪನವರ ಕಾಲೆಳೆದರು.
ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯ ಮಂಡಳಿ ಸಲಹೆ ನೀಡಿದ ನಂತರದ ಬೆಳವಣಿಗೆಗಳನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ವಿವರಿಸಿದರು.

ಕೊನೆಯಲ್ಲಿ ಗೋವಾ ಬಿಜೆಪಿ ಮುಖ್ಯಮಂತ್ರಿ ಅವರ ಮನವೊಲಿಸಲು ರಾಜ್ಯ ಬಿಜೆಪಿ ಒಪ್ಪಿದರೆ ಅಲ್ಲಿನ ಪ್ರತಿಪಕ್ಷದ ಮನವೊಲಿಸಲು ಇಲ್ಲಿನ ಕಾಂಗ್ರೆಸ್ ಮುಖಂಡರು ಸಹಮತ ವ್ಯಕ್ತಪಡಿಸುವ ಮೂಲಕ ಮಹದಾಯಿ ಸಭೆ ಮುಕ್ತಾಯಗೊಂಡಿತು.

Facebook Comments

Sri Raghav

Admin