ಬೈಕ್ ಮೇಲೆ ಬಂದು ಒಂದೇ ಕಡೆ ಮೂವರು ಮಹಿಳೆಯರ ಸರ ಕಸಿದು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

Snatchers

ಬೆಂಗಳೂರು, ಆ.14- ಬೈಕ್‍ನಲ್ಲಿ ಬಂದ ಒಂದೇ ತಂಡ ಒಂದೇ ಪ್ರದೇಶದಲ್ಲಿ ಮೂರು ಕಡೆ ಮೂರು ಮಹಿಳೆಯರ ಕುತ್ತಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ 200ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ 6ಗಂಟೆ ಸುಮಾರಿನಲ್ಲಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಆರ್‍ಪಿಸಿ ಬಡಾವಣೆಯ 11ನೇ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜ್ಯೋತಿ ಎಂಬ ವೃದ್ಧೆಯ ಕುತ್ತಿಗೆಯಲ್ಲಿದ್ದ 60 ಗ್ರಾಂನ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.

7.30ರ ಸುಮಾರಿಗೆ ಅದೇ ರಸ್ತೆಯಲ್ಲಿ ಗಂಡನ ಜತೆ ತೆರಳುತ್ತಿದ್ದ ಅಲ್ತಾಸ್‍ಘನಿ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ 60 ಗ್ರಾಂನ ಚಿನ್ನದ ಸರವನ್ನು ಅದೇ ದುಷ್ಕರ್ಮಿಗಳ ತಂಡ ಕಸಿದು ಪರಾರಿಯಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಅದೇ ರಸ್ತೆಯ ಸ್ವಲ್ಪ ಮುಂಭಾಗದಲ್ಲಿ ನಡೆದು ಹೋಗುತ್ತಿದ್ದ ಕವಿತಾ ಎಂಬ ಮಹಿಳೆಯ ಕತ್ತಿನಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವುದು ಆರ್‍ಪಿಸಿ ಬಡಾವಣೆ ಸುತ್ತಮುತ್ತಲಿನ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದೆ. ಸರ ಅಪಹರಣ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin