ವಿಧಾನಸಭೆ ಜೊತೆ ಲೋಕಸಭೆಗೂ ಚುನಾವಣೆ..? ಮೋದಿ ಮಾಸ್ಟರ್ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Modi--.121

ನವದೆಹಲಿ, ಆ.14-ಚುನಾವಣೆ ಕಾವು ನಿಧಾನವಾಗಿ ಏರುತ್ತಿರುವ ಸಂದರ್ಭದಲ್ಲೇ ಹಲವಾರು ರಾಜ್ಯಗಳಲ್ಲಿ ಜರುಗಲಿರುವ ವಿಧಾನಸಭೆ ಚುನಾವಣೆಯೊಂದಿಗೇ 2019ರ ಲೋಕಸಭೆ ಮತದಾನವನ್ನೂ ನಡೆಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಂದಿನ ವರ್ಷ ನವೆಂಬರ್-ಡಿಸೆಂಬರ್‍ನಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, 2019ರ ಸಾರ್ವತ್ರಿಕ ಚುನಾವಣೆಗಳನ್ನು ಅದರೊಂದಿಗೆ ಒಗ್ಗೂಡಿಸಲು ಸರ್ಕಾರ ಗಹನವಾಗಿ ಆಲೋಚಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತೆರೆಮರೆಯಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ಮತ್ತು ಸಮಾಲೋಚನೆಗಳು ನಡೆಯುತ್ತಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ವಿವಿಧ ಅವಧಿಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳು ಹಾಗೂ 2019ರ ಲೋಕಸಭೆ ಚುನಾವಣೆಯಿಂದ ಭಾರೀ ಹಣಕಾಸು ಹೊರೆಯನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ವಿಧಾನಸಭೆಯೊಂದಿಗೆ ಲೋಕಸಭೆಗೂ ಚುನಾವಣೆ ನಡೆಸಿ ಮತದಾನ ಪ್ರಕ್ರಿಯೆಗಳನ್ನು ಸರಳಗೊಳಿಸುವ ಅಲೋಚನೆಯೂ ಇದರಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಈ ಆಲೋಚನೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.  ಈ ಆಲೋಚನೆ ಕೈಗೂಡಿದರೆ, ಕೇಂದ್ರ ಚುನಾವಣೆ ನಡೆಯುವ ದಿನಾಂಕಗಳಿಂದ ಆರು ತಿಂಗಳ ಒಳಗಾಗಿ ಮತದಾನಕ್ಕೆ ಅವಕಾಶ ನೀಡಲು ಶಾಸನಬದ್ಧ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಇದನ್ನು ಚುನಾವಣಾ ಆಯೋಗ ಜಾರಿಗೊಳಿಸಬಹುದಾಗಿದ್ದು, ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡುವ ಅಗತ್ಯ ಇರುವುದಿಲ್ಲ.  ಲೋಕಸಭೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ. ಕಶ್ಯಪ್ ಮತ್ತು ಕಾರ್ಯದರ್ಶಿಗಳ ಸಮೂಹವು ಈ ವಿಷಯದಲ್ಲಿ ಈಗಾಗಲೇ ಗಂಭೀರ ಚಿಂತನೆ ಮತ್ತು ಚರ್ಚೆಯಲ್ಲಿ ತೊಡಗಿವೆ.

ಆದರೆ, ವಿಧಾನಸಭೆ ಚುನಾವಣೆಗಳೊಂದಿಗೆ ಲೋಕಸಭೆಗೂ ಮತದಾನ ನಡೆಸಬೇಕೆಂಬುದನ್ನು ಎಷ್ಟು ರಾಜ್ಯಗಳು ಒಪ್ಪುತ್ತವೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ. ಅಲ್ಲದೇ ದೇಶಾದ್ಯಂತ ಇದಕ್ಕೆ ರಾಜಕೀಯ ಒಮ್ಮತ ಮೂಡಿಸುವುದು ದೊಡ್ಡ ಸವಾಲಿನ ಕೆಲಸ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಛತ್ತೀಸ್‍ಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ರಾಜಸ್ತಾನ ರಾಜ್ಯಗಳ ವಿಧಾನಸಭೆ ಚುನಾವಣೆಗಳೊಂದಿಗೆ ನಡೆಸಬಹುದು ಎಂದು ಸಲಹೆ ನೀಡಲಾಗಿದೆ. ಮಿಜೋರಾಂ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಮಿತ್ರಪಕ್ಷ ಆಡಳಿತ ನಡೆಸುತ್ತಿವೆ. ಇನ್ನೊಂದು ಪರ್ಯಾಯ ಸಲಹೆಯಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಸಮ್ಮತಿಸಿದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸಲು ಪರಿಗಣಿಸಬಹುದು.

Facebook Comments

Sri Raghav

Admin