ಹಿಂದೂಸ್ತಾನವು ಎಂದೂ ಮರೆಯದ ಕೆಚ್ಚೆದೆ ಕಲಿಗಳು

ಈ ಸುದ್ದಿಯನ್ನು ಶೇರ್ ಮಾಡಿ

freedom-fight

ಆಂಗ್ಲರ ದಬ್ಬಾಳಿಕೆಯಿಂದ ಭಾರತಾಂಬೆಯನ್ನು ವಿಮುಕ್ತಿಗೊಳಿಸಲು ಸ್ವಾತಂತ್ರ ಸಂಗ್ರಾಮದ ಕಲಿಗಳು ನಡೆಸಿದ ಹೋರಾಟ ಮೈನವಿರೇಳಿಸುವಂಥದ್ದು. ನಮ್ಮ ಸ್ವಾತಂತ್ರ ಸಂಗ್ರಾಮಕ್ಕೆ ನೂರೈವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. 18ನೆ ಶತಮಾನದಲ್ಲಿ ಆಗಿನ ರಾಜ ಮಹಾರಾಜರು, ವೀರರಾಣಿಯರು ವಿದೇಶಿ ಆಡಳಿತಗಾರರ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ದ ದನಿಎತ್ತಿ ದಿಟ್ಟ ಹೋರಾಟ ನಡೆಸಿದ್ದಾರೆ. 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಗಿನ ದಿಟ್ಟ ಹೋರಾಟದ ಪ್ರಮುಖ ಘಟ್ಟಗಳು ಮತ್ತು ಕೆಚ್ಚೆದೆ ಕಲಿಗಳ ನೆನೆಪು ಇಲ್ಲಿದೆ.

ಪ್ರಥಮ ಸ್ವಾತಂತ್ರ ಸಂಗ್ರಾಮ (ಸಿಪಾಯಿ ದಂಗೆ) : 

ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಕಿಚ್ಚು ಸಿಪಾಯಿ ದಂಗೆ ಮೂಲಕ ಹೊರಹೊಮ್ಮಿತು. 1857-1858ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ ಇದು.   ಸಿಪಾಯಿ ದಂಗೆಗೆ ವಾಸ್ತವ ಕಾರಣವೆಂದರೆ ಬ್ರಿಟಿಷ್ ಸೈನ್ಯದಿಂದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ ಬಂದೂಕಿನ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಹಿಂದು ಮತ್ತು ಮುಸ್ಲಿಂ ಸಿಪಾಯಿಗಳ ಮನಸ್ಸು ನೋಯುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.  ಈ ಧಾರ್ಮಿಕ ಸಂಗತಿ ಹಿನ್ನೆಲೆಯಲ್ಲಿ ಫೆಬ್ರವರಿ 1857ರಲ್ಲಿ ಸಿಪಾಯಿಗಳು ದಂಗೆ ಎದ್ದು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು.

ಸಿಪಾಯಿ ದಂಗೆ ದಿಟ್ಟ ಹೋರಾಟದ ಕಿಚ್ಚು ಪಡೆದಿದ್ದು, ಭಾರತ ಪ್ರಥಮ ಸ್ವಾತಂತ್ರ ಸಂಗ್ರಾಮದ ಹುತಾತ್ಮ ಎಂದೇ ಖ್ಯಾತಿ ಪಡೆದಿರುವ ಮಂಗಲ್ ಪಾಂಡೆ ಮೂಲಕ. ಈಸ್ಟ್ ಇಂಡಿಯಾ ಕಂಪೆನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದ ಪಾಂಡೆ 1957ರಲ್ಲಿ ಆಂಗ್ಲರ ಮೇಲೆ ಮಾಡಿದ ಆಕ್ರಮಣ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ರೂಪ ಪಡೆಯಿತು.  ಮಂಗಲ್ ಪಾಂಡೆ 1857ರ ಮಾರ್ಚ್‍ನಲ್ಲಿ ಬ್ರಿಟಿಷ್ ಸಾರ್ಜೆಂಟ್ ಲೆಫ್ಟಿನೆಂಟ್ ಬಾಘ್ ಮೇಲೆ ದಾಳಿ ಮಾಡಿ ಮತ್ತೊಬ್ಬ ಯೋಧನನ್ನು ಗಾಯಗೊಳಿಸಿದನು. ಏಪ್ರಿಲ್ 7ರಂದು ಮಂಗಲ್ ಪಾಂಡೆಯನ್ನು ಜಮಾದಾರ ಈಶ್ವರಿ ಪ್ರಸಾದ್ ಜೊತೆ ನೇಣು ಹಾಕಲಾಯಿತು.
ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆ ಗಾರ ಅಹ್ಮದ್ ಉಲ್ಲಾ, ನಾನಾ ಸಾಹೇಬ್, ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾಂತ್ಯಾ ಟೋಪಿ ಮತ್ತು ಅಜೀಮುಲ್ಲಾ ಖಾನ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ಕುಂವರ್ ಸಿಂಹ, ಬಿಹಾರದ ಜಗದೀಶ್‍ಪುರದ ರಜಪೂತ ನಾಯಕರು ಮತ್ತು ಮೊಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಪಿರೋಜ್ ಶಹಾ, ಎರಡನೇ ಬಹಾದುರ್ ಶಹಾ ಮೊದಲಾದವರು ಬ್ರಿಟಿಷರ ವಿರುದ್ದ ತಿರುಗಿಬಿದ್ದರು.

ಜಲಿಯಲ್ ವಾಲಾಭಾಗ್ ಹತ್ಯಾಕಾಂಡ : 

ಭಾರತದಲ್ಲಿ ಸ್ವಾತಂತ್ರ ಸಂಗ್ರಾಮ ಹಾಗೂ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟಿಷರು ಒಂದೆಡೆ ಒಡೆದು ಆಳುವ ನೀತಿಯನ್ನು ಅನುಸರಿಸಿದರೆ ಇನ್ನೊಂದೆಡೆ ದಮನಕಾರೀ ಕರಾಳ ಕಾಯ್ದೆ-ಮಸೂದೆಗಳನ್ನು ಜಾರಿಗೊಳಿಸಿದರು. ಇಂಥ ಕ್ರೂರ ಕಾಯ್ದೆಯಲ್ಲಿ ರೌಲತ್ ಮಸೂದೆ ಕೂಡ ಒಂದು.
ಈ ಕಾಯ್ದೆಗಳಿಂದ ಆದ ಚಳವಳಿಗಳು ಏಪ್ರಿಲ್ 13, 1919ರಂದು ಪಂಜಾಬ್‍ನ ಅಮೃತ್‍ಸರದಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಇದನ್ನು ಅಮೃತಸರದ ನರಮೇಧ ಎಂದೂ ಹೆಸರಿಸಲಾಗಿದೆ.

ಬ್ರಿಟಿಷ್ ಸೈನ್ಯದ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ತನ್ನ ಸೈನಿಕರಿಗೆ ಸುಮಾರು ಹತ್ತು ಸಾವಿರಷ್ಟಿದ್ದ ನಿಶ್ಯಸ್ತ್ರ ಮತ್ತು ಅಮಾಯಕ ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ.   ಅವರು ಮಾರ್ಷಲ್ ಲಾ ಜಾರಿಯಾಗಿರುವ ಸಂಗತಿ ತಿಳಿಯದೆ, ಗೋಡೆಗಳಿಂದ ಆವೃತ ವಾದ ಅಮೃತಸರದ ಜಲಿಯನ್ ವಾಲಾಭಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆ ಸೇರಿದ್ದರು.  ಈ ಘಟನೆಯಲ್ಲಿ ಒಟ್ಟು 1,650 ಸುತ್ತು ಗುಂಡುಗಳನ್ನು ಹಾರಿಸಲಾಯಿತು. 739 ಮಂದಿ ದುರಂತ ಸಾವಿಗೀಡಾಗಿ, 1,137 ಜನರು ಗಾಯಗೊಂಡರು.

ಚೌರಾಚೌರಿ ಘಟನೆ : 

1922ರಲ್ಲಿ ಗೋರಖ್‍ಪುರ್ ಚೌರಾಚೌರಿ ಘಟನೆ ನಡೆಯಿತು. ಗಾಂಧೀಜಿ ನೇತೃತ್ವದಲ್ಲಿ ದೇಶಾದ್ಯಂತ ಅಸಹಕಾರ ಚಳವಳಿ ನಡೆಯುತ್ತಿದ್ದ ಸಂದರ್ಭವದು. ಈ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಪೊಲೀಸ್ ಚೌಕಿಯತ್ತ ಮುನ್ನುಗ್ಗಲು ಯತ್ನಿಸಿದಾದ ಠಾಣಾಧಿಕಾರಿ ಗೋಲಿಬಾರ್‍ಗೆ ಆದೇಶ ನೀಡಿದ. ಈ ಗುಂಡಿನ ದಾಳಿಯನ್ನು ಮೂವರು ಪ್ರತಿಭಟನಾಕಾರರು ಮೃತಪಟ್ಟು ಹಲವರು ಗಾಯಗೊಂಡರು. ಇದರಿಂದ ಇನ್ನಷ್ಟು ಕೆರಳಿದ ಗುಂಪು ಪೊಲೀಸ್ ಚೌಕಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಠಾಣೆ ಒಳಗೆ ಸಿಲುಕಿದ 23 ಪೊಲೀಸರು ಹತರಾದರು.

ಅಸಹಕಾರ ಚಳವಳಿ : 
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ದ ದಿನೇ ದಿನೇ ಪ್ರತಿಭಟನೆ ಮತ್ತು ಹೋರಾಟದ ಕಿಚ್ಚು ವ್ಯಾಪಿಸುತ್ತಿದ್ದಂತೆ ಭಾರತೀಯರ ಕುಂದು-ಕೊರತೆ ಆಲಿಸಲು ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ನೇತೃತ್ವದ ಆಯೋಗವನ್ನು ಕಳುಹಿಸಿತು. ಆದರೆ ಒಬ್ಬ ಭಾರತೀಯನಿಗೂ ಸಹ ಈ ಆಯೋಗದಲ್ಲಿ ಅವಕಾಶ ಇರಲಿಲ್ಲ. ಇದರಿಂದ ಭಾರತೀಯರು ಈ ಆಯೋಗವನ್ನು ಬಹಿಷ್ಕರಿಸಿದರು. ಈ ಆಯೋಗವು ಲಾಹೋರ್‍ಗೆ ಬಂದಾಗ ಪಂಜಾಬ್ ಕೇಸರಿ ಎಂದೇ ಜನಜನಿತರಾಗಿದ್ದ ಲಾಲಾ ಲಜಪತರಾಯ್ ಮತ್ತು ಇತರರು ಆಯೋಗದ ವಿರುದ್ದ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿ ಸೈಮನ್ ಹಿಂದಕ್ಕೆ ತೊಲಗಿ ಎಂಬ ಘೋಷಣೆ ಮೊಳಗಿದವು.

ಉಪ್ಪಿನ ಸತ್ಯಾಗ್ರಹ : 

ಈ ಮಧ್ಯೆ, ಗಾಂಧಿಯವರು 1920ರ ಮಾರ್ಚ್ 12 ಮತ್ತು ಏಪ್ರಿಲ್ 6ರ ನಡುವೆ ಅಹಮದಾಬಾದ್‍ನ ತಮ್ಮ ನೆಲೆಯಿಂದ ಸುಮಾರು 400 ಕಿ.ಮೀ. ದೂರದ ದಂಡಿವರೆಗೆ ಗುಜರಾತ್ ಕಡಲ ತೀರದುದ್ದಕ್ಕೂ ತಮ್ಮ ಪ್ರಸಿದ್ದ ಪಾದಯಾತ್ರೆಯನ್ನು ಕೈಗೊಂಡರು. ಉಪ್ಪಿನ ಮೇಲೆ ಬ್ರಿಟಿಷರ ತೆರಿಗೆಗಳನ್ನು ಪ್ರತಿಭಟಿಸಿ, ದಂಡಿಯಲ್ಲಿ ಅವರು ಮತ್ತು ಅವರ ಸಾವಿರಾರು ಅನುಯಾಯಿಗಳು ಸಮುದ್ರ ನೀರಿನಿಂದ ತಮ್ಮದೇ ಆದ ಉಪ್ಪನ್ನು ತಯಾರಿಸಿ ಕಾನೂನು ಮುರಿದರು. ಈ ನಡಿಗೆಯು ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.  1930-31ರ ನಾಗರಿಕ ಅಸಹಕಾರ ಆಂದೋಲನದ ಕಾಲಕ್ಕೆ ಸುಮಾರು ಒಂದು ಲಕ್ಷ ಜನರನ್ನು ಬಂಧನದಲ್ಲಿ ಇಡಲಾಯಿತು. ಪೇಷಾವರದಲ್ಲಿ ಕಿಸ್ಸಾ ಖ್ವಾನೀ ಬಜಾರ್ ಹತ್ಯಾಕಾಂಡದಲ್ಲಿ ನಿಶ್ಶಸ್ತ್ರ ಪ್ರದರ್ಶನಕಾರರ ಮೇಲೆ ಗುಂಡು ಹಾರಿಸಲಾಯಿತು.

 

ಸಶಸ್ತ್ರ ದಂಗೆ : 
1920ರ ಹೊತ್ತಿಗೆ ಕ್ರಾಂತಿಕಾರಿಗಳು ಸದೃಢವಾಗಿ ಸಂಘಟಿತರಾದರು. ಚಂದ್ರಶೇಖರ್ ಅಜಾದ್ ನೇತೃತ್ವದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ 1929ರ ಅ.8ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆ ಅಂಗೀ ಕರಿಸುವುದನ್ನು ಪ್ರತಿಭಟಿಸಿ, ಸ್ಫೋಟಕವನ್ನು ಎಸೆದರು, ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆ ವಿಚಾರಣೆ ನಂತರ ಭಗತ್‍ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರಂದು ಗಲ್ಲಿಗೇರಿಸಲಾಯಿತು.  ಕ್ರಾಂತಿಕಾರಿ ನಾಯಕ ಸೂರ್ಯ ಸೇನ್ 18ನೆ ಏಪ್ರಿಲ್ 1920ರಂದು ಇತರೆ ಕಾರ್ಯಕರ್ತರೊಂದಿಗೆ ಸೇರಿ ಕೊಂಡು ಮದ್ದು-ಗುಂಡು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡು ಸರ್ಕಾರಿ ಸಂಪರ್ಕ ವ್ಯವಸ್ಥೆಯನ್ನು ನಾಶ ಮಾಡಿ ಸ್ಥಳೀಯ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ದಾಳಿ ಮಾಡಿದರು. 1932ರಲ್ಲಿ ಪ್ರೀತಿಲತಾ ವಡ್ಡೇದಾರ್, ಚಿತ್ತಗಾಂಗ್‍ನಲ್ಲಿ ಯುರೋಪಿ ಯನ್ ಕ್ಲಬ್ ಮೇಲೆ ನಡೆದ ದಾಳಿಯ ಮುಂದಾಳತ್ವ ವಹಿಸಿದ್ದರು. ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಹೆಮ್ಮೆಯ ಪುತ್ರ. ಶಸ್ತ್ರಾಸ್ತ್ರ ಹೋರಾಟದ ಮೂಲಕ ಬ್ರಿಟಿಷ್ ದುರಾಡಳಿತ ಕೊನೆಗಾಣಿಸಲು ನೇತಾಜಿ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರು. ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಗಿದ್ದು ದೇಶದ ದೊಡ್ಡ ದುರಂತ.

ಭಾರತ ಬಿಟ್ಟು ತೊಲಗಿ ಆಂದೋಲನ : 
1942ರ ಆಗಸ್ಟ್‍ನಲ್ಲಿ ಕೂಡಲೇ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿ ಭಾರತ ಬಿಟ್ಟು  ತೊಲಗಿ ಎಂಬ ನಾಗರಿಕ ಅಸಹಕಾರ ಆಂದೋಲನಕ್ಕೆ ಕಾಂಗ್ರೆಸ್ ಕರೆ ನೀಡಿತು. ಮುಂಬೈನಲ್ಲಿ ಗಾಂಧೀಜಿಯವರು ಈ ಕರೆಯನ್ನು ಬೆಂಬಲಿಸಿ ಶಾಂತಿಯುತವಾಗಿ ಸರ್ಕಾರಕ್ಕೆ ಅಸಹಕಾರಿಯಾಗಿ ವರ್ತಿಸಬೇಕೆಂದು ಭಾರತೀಯರನ್ನು ಕೋರಿದರು.  ಆದರೆ, ಗಾಂಧೀಜಿಯವರ ಕರೆಯ 24 ಗಂಟೆಗಳಲ್ಲಿ ಕಾಂಗ್ರೆಸ್‍ನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. ಈ ಕರೆಗೆ ಮತ್ತು ಸಾಮೂಹಿಕ ಬಂಧನಕ್ಕೆ ಭಾರತದಲ್ಲೆಲ್ಲ ಪ್ರತಿಭಟನೆಗಳು ನಡೆದವು. ಇನ್ನು ಕೆಲವರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು. 1944 ಹೊತ್ತಿಗೆ ನಾಯಕರಿಲ್ಲದೇ ಈ ಚಳವಳಿ ನಿಂತು ಹೋಯಿತು.

ನಾವಿಕರ ದಂಗೆ : 
ಮುಂಬೈ ಬಂದರಿನಲ್ಲಿ ಫೆಬ್ರವರಿ 18, 1946ರಲ್ಲಿ ಭಾರತೀಯ ನೌಕಾಪಡೆಯ ನಾವಿಕರು ದಂಗೆ ಎದ್ದರು. ಈ ದಂಗೆ ಕರಾಚಿ ಮತ್ತು ಕಲ್ಕತ್ತ ಬಂದರುಗಳಿಗೂ ಹರಡಿತು. ಒಟ್ಟು 78 ಹಡಗುಗಳು ಮತ್ತು 20,000 ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು.

ಹಾರಾಡಿದ ತ್ರಿವರ್ಣ ಧ್ವಜ : 
ಎರಡನೆ ಮಹಾ ಸಂಗ್ರಾಮದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆ ತೆತ್ತಿದ್ದ ಬ್ರಿಟಿಷ್ ಸಾಮ್ರಾಜ್ಯ ಒಂದೆಡೆ ಅಸಹಕಾರ ಚಳವಳಿ ಇನ್ನೊಂದೆಡೆ ಸೇನೆಯ ದಂಗೆಯಂಥ ಆಂದೋಲನದಿಂದ ಎಚ್ಚೆದ್ದ ಭಾರತೀಯರನ್ನು ಸದೆಬಡಿಯುವ ಬಲ ಹೊಂದಿರಲಿಲ್ಲ. ಈ ಹೋರಾಟಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಮುಂದುವರೆಸುವುದರ ವಿಪರ್ಯಾಸವನ್ನು ಬ್ರಿಟಿಷ್ ಸಾಮ್ರಾಜ್ಯ ಅರಿತುಕೊಂಡಿತು. 1946ರ ಮಧ್ಯದೊಳಗೆ ಎಲ್ಲಾ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರನ್ನು ಸರ್ಕಾರ ವಿಮೋಚನೆಗೊಳಿಸಿತು.  ಭಾರತದ ಕೊನೆಯ ಬ್ರಿಟಿಷ್ ಗೌರ್ನರ್ ಜನರಲ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ 1947ರ ಆಗಸ್ಟ್ 15ರಂದು ಅಧಿಕಾರ ಹಸ್ತಾಂತರಿಸಿದರು. ಭಾರತ ಸ್ವತಂತ್ರ ರಾಷ್ಟ್ರವಾಯಿತು. ತ್ರಿವರ್ಣ ಧ್ವಜ ಎಲ್ಲೆಡೆ ಸಡಗರ-ಸಂಭ್ರಮದಿಂದ ಹಾರಾಡಿತು.

 

Facebook Comments

Sri Raghav

Admin