ಈ ಬಾರಿ ಪುಟ್ಟ ಭಾಷಣ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Speech

ನವದೆಹಲಿ, ಆ. 15- ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಅತ್ಯಂತ ಪುಟ್ಟ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ರಾಜಸ್ಥಾನಿ ಪೇಟ, ಬಾದಾಮ್ ಬಣ್ಣದ ಕುರ್ತಾ, ಅದರ ಮೇಲೊಂದು ವಾಸ್ಕೋಟ್(ವೈಸ್ಟ್‍ಕೋಟ್) ಧರಿಸಿದ್ದ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷಗಳಲ್ಲಿ ಈ ಬಾರಿ ತುಂಬಾ ಕಿರಿದಾದ ಭಾಷಣ ಮಾಡಿದರು.  ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ನಂತರ ತಮ್ಮ ಎಂದಿನ ಶೈಲಿಯಲ್ಲಿ ಭಾವುಕರಾಗಿಯೇ ಮಾತನಾಡಿದರೂ ಅವರ ಭಾಷಣ ಈ ವರ್ಷ ಕೇವಲ 57 ನಿಮಿಷಗಳಿಗೆ ಸೀಮಿತವಾಗಿತ್ತು. ಕಳೆದ ವರ್ಷ 96 ನಿಮಿಷಗಳ ಕಾಲ ಮಾತನಾಡಿ ಸ್ವಾತಂತ್ರ್ಯ ದಿನೋತ್ಸವದಲ್ಲಿ ಕೆಂಪುಕೋಟೆಯ ಮೇಲೆ ಅತ್ಯಂತ ಸುದೀರ್ಘ ಭಾಷಣ ಮಾಡಿದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1947ರಲ್ಲಿ ಪ್ರಥಮ ಸ್ವಾತಂತ್ರ್ಯೋತ್ಸವದಂದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕೆಂಪುಕೋಟೆಯ ಮೇಲೆ 72 ನಿಮಿಷಗಳ ಕಾಲ ಮಾತನಾಡಿದ್ದ ದಾಖಲೆ 2015ರ ವರೆಗೂ ಹಾಗೆಯೇ ಮುಂದುವರಿದಿತ್ತು. 2015ರ ಸ್ವಾತಂತ್ರ್ಯ ದಿನದಂದು ಮೋದಿ ಆ ದಾಖಲೆ ಮುರಿದರು.

ನನ್ನ ರೇಡಿಯೊ ಮನ್ ಕಿ ಬಾತ್‍ನಲ್ಲಿ ಕೆಲವರು ಸ್ವಾತಂತ್ರ್ಯ ದಿನದ ಭಾಷಣ ಉದ್ದವಾಯಿತು ಎಂದು ಆಕ್ಷೇಪಿಸಿದ್ದರು. ಆಗ ನಾನು ನನ್ನ ಭಾಷಣ ಮೊಟಕುಗೊಳಿಸುವುದಾಗಿ ಆಶ್ವಾಸನೆ ನೀಡಿದ್ದೆ ಎಂದು ಮೋದಿ ಹೇಳಿದ್ದಾರೆ. ಮೋದಿ ನಿಕಟಪೂರ್ವ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೆಂಪುಕೋಟೆಯ ಮೇಲೆ 10 ಭಾಷಣ ಮಾಡಿದ್ದರೂ ಅವರು ಎಂದೂ 50 ನಿಮಿಷದ ಗಡಿ ದಾಟಲಿಲ್ಲ. 2005-06ರಲ್ಲಿ ಕ್ರಮವಾಗಿ 32 ಮತ್ತು 45 ನಿಮಿಷ ಮಾತನಾಡಿದ್ದರು. ಮೋದಿ ಪಕ್ಷದವರೇ ಆದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 30-35 ನಿಮಿಷ ಮಾತನಾಡಿದ್ದರು ಅಷ್ಟೇ. 2002ರಲ್ಲಿ 25 ನಿಮಿಷ ಮತ್ತು 2003ರಲ್ಲಿ 30 ನಿಮಿಷವಷ್ಟೇ ವಾಜಪೇಯಿ ಮಾತನಾಡಿದ್ದರು.

Facebook Comments

Sri Raghav

Admin