ಕರ್ನಾಟಕದಲ್ಲಿ ಕನ್ನಡದ್ದೇ ಆಧಿಪತ್ಯ, ದಬ್ಬಾಳಿಕೆ ಸಹಿಸಲ್ಲ, ಪ್ರಗತಿಯಲ್ಲಿ ರಾಜ್ಯ ನಂ.1 : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಆ.15- ರಾಜ್ಯಗಳಲ್ಲಿ ರಾಜ್ಯಭಾಷೆಯೇ ಸಾರ್ವಭೌಮ ಭಾಷೆಯೇ ಹೊರತು ಬೇರಾವುದೋ ಭಾಷೆ ಈ ನೆಲದ ಬದುಕಿನ ಮೇಲೆ ಆಧಿಪತ್ಯ ಮೆರೆಯುವುದು, ಭಾಷಾವಾರು ಪ್ರಾಂತ್ಯ ರಚನೆ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳುವ ಮೂಲಕ ಕನ್ನಡ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದ್ದಾರೆ. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 71ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರ ವೇರಿಸಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ನಮ್ಮದು ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕøತಿ, ಬಹು ಮಾದರಿಯ ಬಹುತ್ವದ ವ್ಯವಸ್ಥೆ. ಈ ನೆಲದ ಬದುಕಿನ ಮೇಲೆ ಬೇರೆ ಭಾಷೆ ಅಧಿಪತ್ಯ ಮೆರೆಯುವುದನ್ನು ನಾವು ಸಹಿಸುವುದಿಲ್ಲ. ಸ್ಥಳೀಯ ಭಾಷೆಯ ಸ್ವಾಯತ್ತತೆ ಉಳಿಸಿಕೊಂಡೇ ಅನ್ಯ ಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ನೀಡುವ ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ-ಸಂಹಿತೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಕುರಿತು ಮಾಡಿದ ಸಂಕಲ್ಪವನ್ನು ಅನುಷ್ಠಾನ ಮಾಡುತ್ತಿದ್ದೇವೆ. ಬಡವರ, ಶ್ರಮಿಕರ, ಹಿಂದುಳಿದವರ ಹಸಿವಿನ ನಿವಾರಣೆಗೆ ತಲಾ 7 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಬರಗಾಲವಿದ್ದರೂ ಯಾರೂ ಎಲ್ಲೂ ಅನ್ನಕ್ಕಾಗಿ ಪರದಾಡುವ ಸ್ಥಿತಿ ಉದ್ಭವವಾಗಿಲ್ಲ. ಬರದ ಕಾರಣಕ್ಕಾಗಿ ಸಾವು-ನೋವುಗಳು ಸಂಭವಿಸಿಲ್ಲ. ಗುಳೆ ಹೋಗುವ ಸಂಕಷ್ಟ ಎದುರಾಗಿಲ್ಲ. ಇದು ಅನ್ನಭಾಗ್ಯ ಯೋಜನೆಯ ಸಫಲತೆಯ ಸಾಕ್ಷಿ ಎಂದು ಹೇಳಿದರು.

ಕರ್ನಾಟಕವು ಮೊದಲಿನಿಂದಲೂ ಕೈಗಾರಿಕೆ ಹಾಗೂ ಔದ್ಯಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನಲ್ಲಿ 1,54,173 ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಂತೆಯೇ 17,293 ಕೋಟಿ ರೂ. ಯೋಜನೆಗಳ ಜಾರಿಯಿಂದಾಗಿ 1.6 ಲಕ್ಷ ಜನ ಉದ್ಯೋಗ ಪಡೆದಿದ್ದಾರೆ. ಇದಲ್ಲದೆ, ನಮ್ಮ ರಾಜ್ಯವು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಪಾಲಿಗೆ ಭರವಸೆಯ ತಾಣವಾಗಿದೆ. 10.3 ಲಕ್ಷ ಜನರಿಗೆ ಇದರಿಂದ ಉದ್ಯೋಗಾವಕಾಶ ದೊರೆತಿದೆ. ನೂತನ ಜವಳಿ ನಿಂತಿಯಿಂದಾಗಿ 1.91 ಕೋಟಿ ರೂ. ಹೂಡಿಕೆಯಾಗಿದ್ದು, 1 ಲಕ್ಷ ಜನರಿಗೆ ಉದ್ಯೋಗಾಕವಾಶ ದೊರೆತಿದೆ.

ಇವೆಲ್ಲವಕ್ಕೂ ಕಳಶವಿಟ್ಟಂತೆ ಬೆಂಗಳೂರನ್ನು ಅತ್ಯಂತ ಕ್ರಿಯಾಶೀಲ ನಗರವೆಂದು ವಿಶ್ವ ಆರ್ಥಿಕ ವೇದಿಕೆ ಗುರುತಿಸಿದೆ. ಭಾರತದ ಸ್ಟಾರ್ಟ್ ಅಪ್ ರಾಜಧಾನಿ ಎನ್ನುವ ಶ್ರೇಯಕ್ಕೂ ಭಾಜನವಾಗಿದೆ. ಸರ್ವರಿಗೂ ಸಮಾನ ಶಿಕ್ಷಣದ ಕನಸು ಈಡೇರಬೇಕು ಎಂಬ ದೃಷ್ಟಿಯಿಂದ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ವರ್ಷಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ರಾಜ್ಯವನ್ನು ಗುಡಿಸಲು ಮುಕ್ತವಾಗಿಸಿ ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ 11.75 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಏಳು ಲಕ್ಷ ಮನೆಗಳ ಮಂಜೂರು ಮಾಡಲಾಗಿದೆ. ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇಡೀ ದೇಶಕ್ಕೇ ಮಾದರಿಯಾದ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರಿಂದ ರೈತರ ಆದಾಯ ಶೇ.38ರಷ್ಟು ಹೆಚ್ಚಿದೆ.  ಕ್ರಾಂತಿಕಾರಿಯಾದ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮೂಲಕ ಒಟ್ಟು 58 ಸಾವಿರ ಜನವಸತಿ ಅಂದರೆ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕನಹಟ್ಟಿ, ಮಜಾರೆ, ಆಡಿ, ದೊಡ್ಡಿ ಮುಂತಾದ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಆಸ್ತಿ, ಹಕ್ಕುದಾರಿಕೆ ನೀಡಲಾಗಿದೆ.

ರಾಜ್ಯದ ಅತ್ಯಂತ ಪ್ರತಿಭಾವಂತ ಒಂದು ಸಾವಿರ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ ಜಾರಿಗೊಳಿಸಲಾಗಿದೆ.  ನಮ್ಮ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸಬೇಕೆಂದರೆ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆ ತಡೆಯುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಲ್ಯಾಣ ಪರ್ವಕ್ಕೆ ಚಾಲನೆ ನೀಡಲಾಗಿದೆ.  ಸೇನಾ ಯೋಧರಿಗೆ ಸವಲತು: ಯುದ್ಧ ಅಥವಾ ಯುದ್ಧದಂಥ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ ಓರ್ವ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇಶರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ಕಾಳಜಿ ಕೇವಲ ಬಾಯಿಮಾತಿನದ್ದಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು.
ನಾವಿಂದು ಮನೆಯೊಳಗೆ ಸುರಕ್ಷಿತವಾಗಿ ನಿಶ್ಚಿಂತೆಯಿಂದ ಇರಲು ಕಾರಣ ಪ್ರಾಣ ಒತ್ತೆ ಇಟ್ಟು ದೇಶ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಸೈನಿಕರಿಗೆ ನಮ್ಮದೊಂದು ಸೆಲ್ಯೂಟ್ ಎಂದು ಹೇಳಿದರು. ಕೋಮುವಾದ, ಜಾತಿವಾದ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕೂ ದಿಕ್ಕುಗಳಿಂದ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದು ಕೂಡ ಆತಂಕಕಾರಿ ಸಂಗತಿಯಾಗಿದೆ.

ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಈ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನವಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶ ವಿರೋಧಿಗಳ ಹುನ್ನಾರ ವಿಫಲಗೊಳಿಸಲು ನಾವೆಲ್ಲ ಮುಂದಾಗಬೇಕೆಂದು ಕರೆ ನೀಡಿದರು.
ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರಿಗೂ, ಸಮಪಾಲು-ಸಮಬಾಳು ನೀಡುವ ಸರ್ವೋದಯ ತತ್ವದ ಅಭಿವೃದ್ಧಿ ಮಾದರಿ ನಾಡು. ಕಾಯಕ ಜೀವಿ, ಚಳವಳಿಯ ನೇತಾರ ಬಸವಣ್ಣನವರು ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅದಕ್ಕಾಗಿ ಅವರ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin