ಭಾರೀ ಮಳೆ ಹಿನ್ನೆಲೆಯಲ್ಲಿ ಮೋಟಾರ್ ಸೈಕಲ್, ಶ್ವೇತ ಅಶ್ವ ಪ್ರದರ್ಶನಗಳು ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Manik-Shah--01

ಬೆಂಗಳೂರು,ಆ.15-ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪ್ರತಿ ವರ್ಷ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುತ್ತಿದ್ದ ಮಿಲಿಟರಿ ಪೊಲೀಸ್ ಸಿಬ್ಬಂದಿಗಳ ಮೋಟಾರ್ ಸೈಕಲ್ ಪ್ರದರ್ಶನವಾದ ಶ್ವೇತ ಅಶ್ವ ಕಸರತ್ತು ಈ ಭಾರೀ ಮಳೆ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.  ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಇಡೀ ಕಾರ್ಯಕ್ರಮದಲ್ಲಿ ಆಕರ್ಷಣೀಯ ಎನಿಸುತ್ತಿದ್ದ ಸೇನಾ ಯೋಧರ ಕಸರತ್ತನ್ನು ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಪ್ರದರ್ಶಿಸಲು ಅವಕಾಶ ನೀಡಲಿಲ್ಲ. ನಿನ್ನೆ ರಾತ್ರಿಯಿಂದ ನಗರದಾದ್ಯಂತ ನಿಂತರೂ ನಿಲ್ಲದಂತೆ ಸುರಿದ ಮಳೆಯಿಂದಾಗಿ ಪರೇಡ್ ಮೈದಾನವು ಒದ್ದೆಯಾಗಿತ್ತು. ಜೊತೆಗೆ ಕಾರ್ಯಕ್ರಮಕ್ಕಾಗಿ ಹಲವಾರು ಮಂದಿ ಮೈದಾನದಲ್ಲಿ ಜಮಾಯಿಸಿದ್ದರಿಂದ ಎಲ್ಲೆಲ್ಲೂ ಕೆಸರುಮಯವಾಗಿತ್ತು. ಈ ಹಿನ್ನೆಲೆಯಲ್ಲಿ ಶ್ವೇತಾಶ್ವ ಕಸರತ್ತನ್ನು ರದ್ದುಗೊಳಿಸಲಾಯಿತು.

ಇನ್ನುಳಿದಂತೆ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ದೇಶ ಪ್ರೇಮವನ್ನು ಪ್ರಚೋದಿಸುವಂತೆ ಎಲ್ಲರ ಮನಮುಟ್ಟಿತು. ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ ವೀರಸಿಂಧೂರ ಲಕ್ಷ್ಮಣ ಎಂಬ ಕಾರ್ಯಕ್ರಮ ದೇಶಭಕ್ತಿಯ ದ್ಯೋತಕವಾಗಿತ್ತು. ನೋಡುಗರ ಮೈನವಿರೇಳಿಸುವಂತೆ ಮಾಡಿತು. ಸುಮಾರು 750 ಮಕ್ಕಳು ಈ ಪ್ರದರ್ಶನ ನೀಡಿದರು.  ಹೊಸಕೆರೆಹಳ್ಳಿಯ ಲಿಟಲ್ ಫ್ಲವರ್ ಪಬ್ಲಿಕ್ ಶಾಲೆ ಮಕ್ಕಳು ನಡೆಸಿಕೊಟ್ಟ ವಸುದೈವ ಕುಟುಂಬಕಂ ಎಂಬ ಕಾರ್ಯಕ್ರಮ ವರ್ಣರಂಜಿತವಾಗಿತ್ತಲ್ಲದೆ ಎಲ್ಲರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಜೀವನಭೀಮನಗರದ ಸರ್ಕಾರಿ ಪ್ರೌಢಶಾಲೆ ಮಕ್ಕಳು ಪ್ರದರ್ಶಿಸಿದ ಜೈಜವಾನ್, ಜೈ ಕಿಸಾನ್, ಶಾಂತಿಕ್ರಾಂತಿ ಕಾರ್ಯಕ್ರಮ ಯುವಜನರಲ್ಲಿ ರಕ್ಷಣೆ- ಪೋಷಣೆಯ ತತ್ವವನ್ನು ಸಾರಿತು.

ವಿಜಯನಗರದ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾನ್ ದೇಶಭಕ್ತ ಮುಂಡರಗಿ ಭೀಮರಾಯರ ಕುರಿತ ನೃತ್ಯ ಪ್ರದರ್ಶನ ಶೌರ್ಯ ಪರಾಕ್ರಮದ ಪ್ರತೀಕವಾಗಿತ್ತಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಂಡರಗಿಯ ಭೀಮರಾಯರ ಬಗ್ಗೆ ಮಾಹಿತಿ ಒದಗಿಸಿತು.  ಕೊಪ್ಪಳದ ಕೋಟೆಯಲ್ಲಿದ್ದ ಮುಂಡರಗಿ ಭೀಮರಾಯ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಲ್ಲಿ ಒಬ್ಬರಾಗಿದ್ದು , 100ಕ್ಕೂ ಹೆಚ್ಚು ಜನರ ಸೈನ್ಯ ಕಟ್ಟಿಕೊಂಡು ಪೊಲೀಸ್ ಠಾಣೆ, ತಾಲ್ಲೂಕು ಕಚೇರಿಗಳನ್ನು ಧ್ವಂಸಗೊಳಿಸಿ ಪೊಲೀಸರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. 1857ರ ಮೇ 30ರಂದು ವೀರ ಮರಣವನ್ನಪ್ಪಿದ್ದರು.

ಈ ಎಲ್ಲ ಕಾರ್ಯಕ್ರಮಗಳಿಗೂ ಮುನ್ನ ಜವಾಹರ್‍ಲಾಲ್ ನವೋದಯ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಲಾಯಿತು. ನಂತರ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ಹಾಡಲಾಯಿತು. ಇದೇ ವೇಳೆ ಜೀವರಕ್ಷಕ ಪ್ರಶಸ್ತಿ ವಿತರಣೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸಿದರು.  ಮಳೆ ಹಿನ್ನೆಲೆಯಲ್ಲಿ 9 ಗಂಟೆಗೆ ಕಾರ್ಯಕ್ರಮವಿದ್ದರೂ ಜನ ಮಾತ್ರ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಸ್ವಲ್ಪ ತಡವಾಗೇ ಬರುವಂತಾಯಿತು. ಬೆಳಗಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಇತ್ತಾದರೂ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭವಾಗುವ ವೇಳೆಗೆ ಜನ ಸೇರಲಾರಂಭಿಸಿದರು. ಆದರೆ ಈ ಹಿಂದೆಲ್ಲ ಕಿಕ್ಕಿರಿದು ಸೇರುತ್ತಿದ್ದ ಸಾರ್ವಜನಿಕರು ಇಂದು ಕಾಣಸಿಗಲಿಲ್ಲ. ಇನ್ನು ಕಾರ್ಯಕ್ರಮಗಳು ನಡೆಯುವಾಗಲೂ ಮಳೆರಾಯನಿಂದಾಗಿ ಮೈದಾನವೆಲ್ಲ ಒದ್ದೆಯಾಗಿದ್ದರಿಂದ ಎಲ್ಲರೂ ಎಚ್ಚರಿಕೆಯಿಂದಲೇ ಹೆಜ್ಜೆ ಹಾಕುವಂತಾಯಿತು.

Facebook Comments

Sri Raghav

Admin