ಮೇಯರ್ ಪಟ್ಟ ಬಿಟ್ಟುಕೊಟ್ಟು ಮೈತ್ರಿ ಧರ್ಮ ಪಾಲಿಸಲು ಕಾಂಗ್ರೆಸ್‍ಗೆ ಜೆಡಿಎಸ್ ಷರತ್ತು

ಈ ಸುದ್ದಿಯನ್ನು ಶೇರ್ ಮಾಡಿ

BBMp--041

ಬೆಂಗಳೂರು, ಆ.15- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಯ ಮೇಯರ್ ಸ್ಥಾನವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಮುಂದೆ ಜೆಡಿಎಸ್ ಇಟ್ಟಿದೆ. ಬಿಬಿಎಂಪಿ ಆಡಳಿತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಗೂಡಿದ್ದು, ಕಳೆದ ಎರಡು ವರ್ಷಗಳಿಂದ ಉಭಯ ಪಕ್ಷಗಳು ಅಧಿಕಾರ ಹಂಚಿಕೊಂಡಿವೆ. ಮೈತ್ರಿ ಧರ್ಮ ಪಾಲಿಸದಿರುವ ಹಿನ್ನೆಲೆಯಲ್ಲಿ ಮುಂದಿನ ಮೇಯರ್ ಹುದ್ದೆಯನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು.

ಎರಡು ವರ್ಷಗಳ ಕಾಲ ಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಹೀಗಾಗಿ 3ನೆ ವರ್ಷದಲ್ಲಿ ಮೇಯರ್ ಹುದ್ದೆಯನ್ನು ನೀಡುವಂತೆ ಜೆಡಿಎಸ್ ಕೋರಲಿದೆ. ಮುಂದಿನ ತಿಂಗಳ 10ರಂದು ಹಾಲಿ ಮೇಯರ್ ಅವಧಿ ಮುಕ್ತಾಯಗೊಳ್ಳಲಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ನೂತನ ಮೇಯರ್ ಆಯ್ಕೆ ನಡೆಯಬೇಕಿದೆ. ಕಾಂಗ್ರೆಸ್‍ನ ಜಿ.ಪದ್ಮಾವತಿ ಮೇಯರ್ ಆಗಿದ್ದಾರೆ. ಜೆಡಿಎಸ್‍ನ ಆನಂದ್ ಉಪಮೇಯರ್ ಆಗಿದ್ದಾರೆ. 12 ಸ್ಥಾಯಿ ಸಮಿತಿಗಳ ಪೈಕಿ ಜೆಡಿಎಸ್‍ಗೆ 3 ಸ್ಥಾನವನ್ನು ಬಿಟ್ಟುಕೊಡಲಾಗಿತ್ತು.

ಕಳೆದ ಎರಡು ವರ್ಷಗಳಲ್ಲಿ ಮೇಯರ್ ಹುದ್ದೆಯನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟು ಉಪಮೇಯರ್ ಹುದ್ದೆಯನ್ನು ಮಾತ್ರ ನಮ್ಮ ಪಕ್ಷ ಪಡೆದಿದೆ ಎಂದು ಜೆಡಿಎಸ್ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು ಈ ಸಂಜೆಗೆ ತಿಳಿಸಿದರು. ಬಿಬಿಎಂಪಿಯ 14 ಸದಸ್ಯರು ಹಾಗೂ ಬೆಂಗಳೂರು ಮಹಾನಗರ ಘಟಕ ಈ ಬಾರಿ ಮೇಯರ್ ಹುದ್ದೆ ಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮೇಯರ್-ಉಪಮೇಯರ್ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ನಂತರ ಉಭಯ ಪಕ್ಷಗಳ ನಾಯಕರ ನಡುವೆ ಈ ಸಂಬಂಧ ಮಾತುಕತೆ ನಡೆಯಲಿದೆ.

ಕಳೆದ ಎರಡು ವರ್ಷದಲ್ಲಿ ಮೇಯರ್ ಹುದ್ದೆ ಬಿಟ್ಟುಕೊಟ್ಟರೂ ಕಾಂಗ್ರೆಸ್‍ನಿಂದ ಸಮರ್ಪಕವಾಗಿ ಮೈತ್ರಿ ಧರ್ಮ ಪಾಲನೆಯಾಗಿಲ್ಲವೆಂಬ ಮಾತುಗಳು ಕೇಳಿ ಬಂದಿವೆ. ಮೇಯರ್ ಬೇಡಿಕೆ ಕುರಿತಂತೆ ಕಾಂಗ್ರೆಸ್ ತೆಗೆದುಕೊಳ್ಳುವ ನಿಲುವಿನ ಮೇಲೆ ಉಭಯ ಪಕ್ಷಗಳ ಮೈತ್ರಿ ಮುಂದುವರಿಕೆ ನಿರ್ಧಾರವಾಗಲಿದೆ.
ಸ್ಥಾಯಿ ಸಮಿತಿಗಳ ಹಂಚಿಕೆ ಕುರಿತಂತೆಯೂ ಮಾತುಕತೆ ಸಂದರ್ಭದಲ್ಲಿ ಚರ್ಚೆಯಾಗಲಿದೆ. ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರೆಸುವ ಮತ್ತು ಯಾವ ರೀತಿ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಬಿಬಿಎಂಪಿ ಸದಸ್ಯರು ಬೆಂಗಳೂರು ಮಹಾನಗರ ಘಟಕ ಮೇಯರ್ ಹುದ್ದೆ ಪಡೆಯಬೇಕೆಂಬ ಒತ್ತಡವನ್ನು ವರಿಷ್ಠರ ಮೇಲೆ ಹೇರುತ್ತಿದ್ದಾರೆ ಎಂದು ರಮೇಶ್‍ಬಾಬು ತಿಳಿಸಿದರು.

Facebook Comments

Sri Raghav

Admin