ವರುಣನ ಆರ್ಭಟಕ್ಕೆ ನಲುಗಿದ ಬೆಂಗಳೂರು, ಮಲಗಿದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

Rain--00001

ಬೆಂಗಳೂರು,ಆ.15-ರಾತ್ರಿ ಇಡೀ ಸದ್ದಿಲ್ಲದೆ ಸುರಿದ ಧಾರಾಕಾರ ಮಳೆಗೆ ನಗರ ಅಕ್ಷರಶಃ ನಲುಗಿಹೋಗಿದೆ. ರಾಜಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಕೆರೆಗಳಂತಾಗಿವೆ. ಕೋರಮಂಗಲ, ಬಿಟಿಎಂ ಬಡಾವಣೆಯ ಕೆಲ ಪ್ರದೇಶಗಳ ಜನ ಮನೆಯಿಂದ ಹೊರಬಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಉದ್ಯಾನನಗರಿಯಲ್ಲಿ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಆರಂಭವಾದ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿತ್ತು. ನಿದ್ದೆಯ ಮಂಪರಿನಲ್ಲಿದ್ದ ನಗರವಾಸಿಗಳು ಮಳೆಯಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ನಗರದ ಕೆಲವು ಪ್ರದೇಶಗಳ ಮನೆಗಳಿಗೆ ನುಗ್ಗಿದ ಮಳೆ ನೀರಿನಿಂದಾಗಿ ಜನ ಇಡೀ ರಾತ್ರಿ ಹೊರಗೆ ಕಾಲ ಕಳೆಯುವಂತಾಯಿತು.

ಕೋರಮಂಗಲ, ಬಿಟಿಎಂ ಬಡಾವಣೆ, ಯಡಿಯೂರು, ಆನೆಪಾಳ್ಯ, ಜೆ.ಸಿ.ನಗರ, ನಾಗವಾರ, ಶಾಂತಿನಗರ, ವಿಲ್ಸನ್ ಗಾರ್ಡನ್, ಮಡಿವಾಳ, ಕಾಟನ್‍ಪೇಟೆ, ಮೆಜೆಸ್ಟಿಕ್, ಕೆ.ಆರ್.ಪುರಂ, ಎಚ್‍ಎಸ್‍ಆರ್ ಲೇಔಟ್, ಹಲಸೂರು, ಈಜಿಪುರ, ವಿವೇಕನಗರ, ಡಾಲರ್ಸ್ ಕಾಲೋನಿ, ಉತ್ತರಹಳ್ಳಿ ಸೇರಿದಂತೆ ನಗರದ ಬಹುತೇಕ ಪ್ರದೇಶಗಳು ಮಳೆ ಅನಾಹುತದಿಂದ ತತ್ತರಿಸಿ ಹೋದವು.  ಮಡಿವಾಳದಲ್ಲಿ ವರುಣನ ಆರ್ಭಟ ಜೋರಾಗಿ, ಭಾರೀ ಅವಾಂತರ ಸೃಷ್ಟಿಯಾಗಿತ್ತು. ಮಾರುತಿನಗರದ ರಸ್ತೆಗಳಲ್ಲಿ 5ರಿಂದ 6 ಅಡಿ ವರೆಗೂ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.

ವಿಲ್ಸನ್‍ಗಾರ್ಡನ್ ಸಮೀಪದ ಜಲಕಂಠೇಶ್ವರ ನಗರದಲ್ಲಿ ಕೊಳಚೆ ನೀರು ಮನೆಗೆ ನುಗ್ಗಿದ್ದರಿಂದ ಇಡೀ ಪ್ರದೇಶ ಗಬ್ಬು ನಾರುತ್ತಿತ್ತು. ಸ್ಥಳೀಯರು ರಾತ್ರಿ ಇಡೀ ಮನೆಗೆ ನುಗ್ಗಿದ ಮಲೀನ ನೀರನ್ನು ತೆರವುಗೊಳಿಸುವ ಕಾಯಕದಲ್ಲಿ ಜಾಗರಣೆ ಮಾಡುವಂತಾಯಿತು.  ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾರಣದಿಂದ ಮಳೆಯ ಮುನ್ಸೂಚನೆ ನೀಡಿದ್ದ ಮಳೆರಾಯ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದ. ಮಳೆ ಬಂದಿರುವುದರಿಂದ ಒಂದೆಡೆ ನಗರ ತಂಪುಗೊಂಡರೆ, ಮತ್ತೊಂದೆಡೆ ರಸ್ತೆಗಳು ಹದಗೆಟ್ಟು ವಾಹನ ಸವಾರರು, ಸಾರ್ವಜನಿಕರು ಓಡಾಡಲು ತೊಂದರೆಯುಂಟು ಮಾಡಿತ್ತು. ಕೆಲವೆಡೆ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು.   ಆಡುಗೋಡಿ ಪೊಲೀಸ್ ಕ್ವಾಟರ್ಸ್ ಕಾಂಪೌಂಡ್ ಗೋಡೆ ಕುಸಿದಿದೆ, ರಾತ್ರಿಯಾಗಿದ್ದರಿಂದ ಜನರಿಲ್ಲದುದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಗೋಲ್ಡನ್ ವೆಸ್ಟ್ ಅಪಾರ್ಟ್‍ಮೆಂಟ್‍ನ ನೆಲಮಹಡಿಯಲ್ಲಿ ನೀರು ನುಗ್ಗಿ ಜನರು ತೀವ್ರ ಪರದಾಡಿದರು.

 

0afe2a24-027e-4ebe-a411-3cee4df4f6b6

ಮನೆಯಿಂದ ಹೊರಬರದ ಜನ:
ಕೋರಮಂಗಲ 4ನೇ ಬ್ಲಾಕ್, ಹಲಸೂರು, ಜೋಗುಪಾಳ್ಯ, ಶಾಂತಿನಗರದ ಕೆಲವು ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ರಸ್ತೆಗಳು ಕೆರೆಗಳಂತಾಗಿದ್ದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ರಸ್ತೆಯಲ್ಲಿ ನಿಂತಿದ್ದ ಬಹುತೇಕ ವಾಹನಗಳು ನೀರಿನಿಂದ ಮುಳುಗಿ ಹೋಗಿದ್ದವು. ಕೋರಮಂಗಲದ ಎಸ್‍ಟಿ ಬೆಡ್ ಲೇಔಟ್‍ನ ತಗ್ಗು ಪ್ರದೇಶದಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ ಯೋಧರು ಬೋಟ್ ಮೂಲಕ ಮನೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ನೀರು ನುಗ್ಗಿದ ಸಂದರ್ಭದಲ್ಲಿ ಸತ್ತ ಹಾವುಗಳು ಹಾಗೂ ಕೆಲ ಜೀವಂತ ಹಾವುಗಳು ಮನೆಗೆ ಹರಿದುಬಂದಿದ್ದವು. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಹಾವುಗಳನ್ನು ತೆರವುಗೊಳಿಸಿದರು.  ಹಲಸೂರ ಮೆಟ್ರೊ ಸ್ಟೇಷನ್ ಬಳಿ ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ಈಜಿಪುರದ 7ನೇ ಕ್ರಾಸ್‍ನಲ್ಲಿರುವ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಕೆರೆಯಂತಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

 

0db10623-9aca-4c9d-8944-39cd5daba707

ಕೆ.ಆರ್.ಪುರದಲ್ಲಿ ಕೊಳಚೆ ನೀರು:
ಕೆ.ಆರ್.ಪುರಂನ ದೇವೇಂದ್ರನಗರ, ರಾಮಮೂರ್ತಿನಗರ, ಡೀಸೆಲ್ ಶೆಡ್ ರಸ್ತೆಯ ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿ ಜನರು ಸಾಕಷ್ಟು ಪರದಾಡಿದರು. ಮ್ಯಾನ್‍ಹೋಲ್ ಒಡೆದು ಕೊಳಚೆ ನೀರು ರಸ್ತೆಯಲ್ಲೆಲ್ಲ ಹರಿಯಿತು.  ಶಾಂತಿನಗರದ ಕೆಎಸ್‍ಆರ್‍ಟಿಸಿ ವಸತಿ ನಿಲಯ ಸಂಪೂರ್ಣ ಜಲಾವೃತ್ತವಾದರೆ, ಅಲ್ಲಲ್ಲಿ ಬಿಎಂಟಿಸಿ ಬಸ್‍ಗಳು ಕೆಟ್ಟು ನಿಂತವು. ಎಚ್‍ಎಸ್‍ಆರ್ ಲೇಔಟ್ 7ನೇ ಹಂತದಲ್ಲಿ ನೆರೆ ನಿರ್ಮಾಣವಾಗಿದೆ. ನಗರದ ಕೆಲವೆಡೆ ಮ್ಯಾನ್‍ಹೋಲ್‍ಗಳು ಒಡೆದು ರಸ್ತೆ ತುಂಬೆಲ್ಲ ಕೊಳಚೆ ನೀರು ಹರಿದಿದೆ. ಈ ಎಲ್ಲಾ ಅವಾಂತರಗಳಿಂದ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಚ್‍ಎಸ್‍ಆರ್ ಲೇಔಟ್ ಗ್ರೀನ್ ವ್ಯೂ ಆಸ್ಪತ್ರೆಯ ನೆಲಮಹಡಿ ಜಲಾವೃತ್ತಗೊಂಡು ಬೈಕ್‍ಗಳು, ಆಕ್ಸಿಜನ್ ಸಿಲಿಂಡರ್‍ಗಳು ಮುಚ್ಚಿಹೋಗಿದ್ದವು. ಡಯಾಲೀಸ್ ಕೇಂದ್ರಕ್ಕೆ ನೀರು ನುಗ್ಗಿದೆ. ಇದರಿಂದಾಗಿ ಆಸ್ಪತ್ರೆಯ ಇಬ್ಬರು ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ.

 

3a775cfd-bee1-4b14-9e13-918958ad6e96

ಅವೈಜ್ಞಾನಿಕ :
ಓಕಳಿಪುರಂ ಜಂಕ್ಷನ್‍ನ ವಾಹನ ದಟ್ಟಣೆ ತಪ್ಪಿಸಲೆಂದು ನಿರ್ಮಿಸಲಾಗುತ್ತಿರುವ ಎಂಟು ಪಥದ ಮೇಲ್ಸೇತುವೆ ಅವೈಜ್ಞಾನಿಕದಿಂದ ಕೂಡಿದೆ ಎಂಬುದಕ್ಕೆ ರಾತ್ರಿ ಸುರಿದ ಮಳೆಯೇ ಸಾಕ್ಷಿಯಾಗಿದೆ. ಓಕಳಿಪುರಂ ವೃತ್ತದಲ್ಲಿ ಮುಕ್ತಗೊಳಿಸಲಾಗಿರುವ ಎರಡು ಕೆಳಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಎದೆ ಮಟ್ಟದವರೆಗೆ ನೀರು ನಿಂತ ಹಿನ್ನೆಲೆಯಲ್ಲಿ ವಾಹನಗಳು ಮುಂದೆ ಸಾಗಲಾಗದೆ ನಿಂತಲೇ ನಿಲ್ಲುವಂತಾಯಿತು.

ಕುಸಿದು ಬಿದ್ದ ರಸ್ತೆ:
ಯಡಿಯೂರು ಕೆರೆ ಮುಂಭಾಗದ ಎಸ್.ಕರಿಯಪ್ಪ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದು ಮೂರು ಕಾರು, ಒಂದು ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಯಡಿಯೂರು ಕೆರೆ ಏರಿಗೆ ಕಟ್ಟಲಾಗಿರುವ 500 ಅಡಿ ಉದ್ದದ ತಡೆಗೋಡೆಯನ್ನು ಹೊಸದಾಗಿ ನಿರ್ಮಿಸುವ ಭರವಸೆ ನೀಡಿದ್ದಾರೆ.   ಒಟ್ಟಾರೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ರಾಜಧಾನಿಯೇ ತತ್ತರಿಸಿಹೋಗಿದೆ. ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ಅನಾಹುತ ತಪ್ಪಿಸಲು ಹರಸಾಹಸ ನಡೆಸುತ್ತಿದ್ದಾರೆ.
5ddccf3e-5f12-42f7-b625-5d243a8d6a54

ಇನ್ನೆರಡು ದಿನ ಮಳೆ :
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ತಮಿಳುನಾಡು, ಕೇರಳದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಉದ್ಯಾನನಗರಿಯಲ್ಲಿ ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ದಾಖಲೆ ಪ್ರಮಾಣ ಮಳೆಯಾಗಿದ್ದು , ಸುಮಾರು 100 ಮೀ.ಮೀ ಮಳೆಯಾಗಿದೆ.

 

8c62d966-58e4-4ec8-b966-ba4639b75372

ರಾಜಕಾಲುವೆ ಒತ್ತುವರಿ ಕಾರಣ:
ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದರೂ ನಗರದಲ್ಲಿ ಹೆಚ್ಚು ಮರಗಳು ಉರುಳಿಬಿದ್ದಿಲ್ಲ. ಆದರೆ ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ಇಡೀ ನಗರ ಕೆರೆಯಂತಾಗಿ ಪರಿವರ್ತನೆಗೊಂಡಿತ್ತು. ಇಷ್ಟೆಲ್ಲ ಅನಾಹುತಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ. ನಗರದಲ್ಲಿ ಪದೇ ಪದೇ ಮಳೆ ಅನಾಹುತ ಸಂಭವಿಸುವ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳು ಇದುವರೆಗೂ ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯಿಸದಿರುವುದು ಇಷ್ಟೆಲ್ಲ ಅನಾಹುತಗಳಿಗೆ ಕಾರಣ. ಕೆಲ ಪ್ರದೇಶಗಳಲ್ಲಿ ರಾಜಕಾಲುವೆಗಳು ಉಕ್ಕಿದ ಪರಿಣಾಮ ಕಾಲುವೆಗಳು ತುಂಬಿ ಹಿಮ್ಮುಖವಾಗಿ ಹರಿದಿದ್ದರಿಂದ ಹಲವಾರು ಮನೆಗಳು ಜಲಾವೃತಗೊಳ್ಳುವಂತಾಯಿತು.

 

74ee8236-16e6-4f33-ab65-512337b0253c

ಮೇಯರ್ ರೌಂಡ್ಸ್ :
ಮಳೆ ಅನಾಹುತ ಪ್ರದೇಶಗಳಿಗೆ ಮೇಯರ್ ಜಿ.ಪದ್ಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೆ.ಸಿ.ರಸ್ತೆ, ಕುಂಬಾರಗುಂಡಿಯ ಮಳೆ ಅನಾಹುತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕನ ನಡೆಸಿದರು.  ಈ ಸಂದರ್ಭದಲ್ಲಿ ಬೃಹತ್ ಮಳೆ ನೀರು ಕಾಲುವೆ ವಿಭಾಗದ ಮುಖ್ಯ ಅಭಿಯಂತರ ಸಿದ್ದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

 

ae099119-5085-4ce7-a188-42c00d580d26

ತಲೆದಂಡ:
ಮಳೆ ನೀರು ಕಾಲುವೆ ವಿಭಾಗದ ಮುಖ್ಯ ಅಭಿಯಂತರ ಸಿದ್ದೇಗೌಡ ಅವರು ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡುವುದಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯವೇ ಇಂದಿನ ರಾಜಕಾಲುವೆಗಳ ದುಸ್ಥಿತಿಗೆ ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರ ಸ್ಥಾನದಿಂದ ಹೊರಕಳುಹಿಸುವ ಸಾಧ್ಯತೆಗಳಿವೆ.
ಒಂದು ತಿಂಗಳ ಹಿಂದೆ ಸ್ವತಃ ಮೇಯರ್ ಅವರೇ ಸಿದ್ದೇಗೌಡ ಅವರನ್ನು ಸಿಇ ಸ್ಥಾನದಿಂದ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಇದೀಗ ನಗರದಲ್ಲಿ ರಾಜಕಾಲುವೆ ಉಕ್ಕಿ ಹರಿದು ಭಾರೀ ಪ್ರಮಾಣದ ಅನಾಹುತ ಸಂಭವಿಸಿರುವುದರಿಂದ ಸಿದ್ದೇಗೌಡ ಅವರ ತಲೆದಂಡ ಬಹುತೇಕ ಖಚಿತ ಎನ್ನಲಾಗಿದೆ.

d4aaa7c5-b737-4459-8eed-243e12bebab8

ಸಾರ್ವಜನಿಕ ಆಕ್ರೋಶ:
ಚುನಾವಣೆ ಸಂದರ್ಭದಲ್ಲಿ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡುವ ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ಮಾತ್ರ ನೆರವಿಗೆ ಬರಲ್ಲ. ಮುಂದಿನ ಚುನಾವಣೆಯಲ್ಲಿ ಮತ ಕೇಳಲು ಬರಲಿ ಅವರ ಜನ್ಮ ಜಾಲಾಡುತ್ತೇವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಬಿಎಂಪಿ ಸಿಬ್ಬಂದಿಗಳು ನೆರವು ನೀಡುವ ನಾಟಕವಾಡುತ್ತಾರೆ. ಮಳೆಯ ಅನಾಹುತದಿಂದ ರೋಸಿಹೋಗಿದ್ದೀವಿ. ಈ ಊರಿನ ಸಹವಾಸವೇ ಬೇಡವಾಗಿದೆ. ನಗರ ಬಿಟ್ಟು ಹೋಗಿಬಿಡೋಣ ಅನಿಸುತ್ತಿದೆ ಎನ್ನುತ್ತಾರೆ ಮಳೆ ಸಂತ್ರಸ್ತ ಸೇತು ಮಾಧವ ಅವರು.
ರಾತ್ರಿಯಿಡೀ ಮನೆಗೆ ಕೊಳಚೆ ನೀರು ನುಗ್ಗಿ ಮನೆಯೆಲ್ಲ ಮಲೀನವಾಗಿದೆ. ಅಧಿಕಾರಿಗಳು ಬಂದರೆ ಅವರ ಚಳಿ ಬಿಡಿಸುತ್ತೇನೆ ಎಂದು ಗುಡುಗುತ್ತಾರೆ ಕೆ.ಆರ್.ಪುರಂ ನಿವಾಸಿ ಆಶಾ ಬಾನು.   ಮಳೆ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳು ಜಲಾವೃತಗೊಂಡು ಮಳೆಯೂ ಎಡೆಬಿಡದೆ ಸುರಿಯುತ್ತಿದ್ದರಿಂದ ಇಂದು ಬೆಳಗ್ಗೆ ವಿವಿಧ ಶಾಲೆಗಳಲಿ ಆಚರಿಸಲಾದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳು ಮನೆಗಳಿಂದಲೇ ತೆರಳಲು ಸಾಧ್ಯವಾಗಲಿಲ್ಲ.

dfb1ad84-9c49-494d-a258-ef5a7487ad3c

eb7c8e3f-a1c9-4a7a-ac11-52f2ce6b7e2d

ec420ecf-6db1-4865-862d-a05ebd62fd93

Rain--01

 

 

Facebook Comments

Sri Raghav

Admin