ಶತ್ರುಗಳ ಬೆದರಿಗೆಗೆ ಬಗ್ಗಲ್ಲ : ಕೆಂಪುಕೋಟೆ ಮೇಲೆ ಮೋದಿ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

MOdi--002

ನವದೆಹಲಿ, ಆ. 15- ಎಂಥದೇ ಬಾಹ್ಯ ಬೆದರಿಕೆಗಳ ಹುಟ್ಟಡಗಿಸಲು ಭಾರತ ಸಮರ್ಥವಾಗಿದೆ ಎಂದು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, 1942ರಲ್ಲಿ ಭಾರತ್ ಛೋಡೊ(ಭಾರತ ಬಿಟ್ಟು ತೊಲಗಿ) ಚಳವಳಿ ನಡೆಸಲಾಗಿತ್ತು. ಆದರೆ ಇಂದು ನಾವು ಭಾರತ್ ಜೋಡೊ (ಭಾರತವನ್ನು ಒಗ್ಗೂಡಿಸುವ) ಚಳವಳಿಯನ್ನು ಆರಂಭಿಸಬೇಕಾಗಿದೆ ಎಂದು ಹೇಳಿದರು. 71ನೆ ಸ್ವಾತಂತ್ರ್ಯೋತ್ಸವ ದಿನವಾದ ಇಂದು ದೇಶದ ಐತಿಹಾಸಿಕ ಕೆಂಪುಕೋಟೆಯ ಮೇಲೆ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ವೀರರನ್ನು ನಾವು ಸ್ಮರಿಸಬೇಕಾಗಿದೆ ಎಂದರು.

ಜಾತಿ, ಧರ್ಮಗಳ ಹೆಸರಿನಲ್ಲಿ ಯಾವುದೇ ರೀತಿಯ ಹಿಂಸಾಚಾರಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಮೋದಿ, ಜಾತಿ-ಧರ್ಮಗಳ ಭಾವನೆಗಳು ಈ ದೇಶದ ಪಾಲಿಗೆ ಕಾರ್ಕೋಟಕ ವಿಷವಿದ್ದಂತೆ ಎಂದು ಬಣ್ಣಿಸಿದರು. ಧರ್ಮದ ಹೆಸರು ಹೇಳಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಗಳು ಸ್ವೀಕಾರಾರ್ಹವಲ್ಲ. ಇದು ಬುದ್ಧ, ಮಹಾತ್ಮ ಗಾಂಧಿ ಜನಿಸಿದ ನಾಡು. ಇಲ್ಲಿ ಹಿಂಸೆಗೆ ಎಡೆಯಿಲ್ಲ. ಎಲ್ಲರ ಗುರಿಯೂ ದೇಶದ ಅಭಿವೃದ್ಧಿಯೇ ಆಗಿರಬೇಕು ಎಂದು ಅವರು ಹೇಳಿದರು.
ಇತ್ತೀಚೆಗೆ ರಾಷ್ಟ್ರದ ಕೆಲವು ಕಡೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ಲಕ್ಷಾಂತರ ಜನ ತತ್ತರಿಸಿದ್ದಾರೆ. ಅಂತಹವರಿಗೆ ದೇಶದ ಜನ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಉತ್ತರ ಪ್ರದೇಶದ ಗೋರಖ್‍ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸಿದ ಎಳೆಯ ಶಿಶುಗಳ ಮಾರಣ ಹೋಮದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರಲ್ಲದೆ, ತಮ್ಮ ಕರುಳು ಕುಡಿಗಳನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿರುವ ಆ ಹೆತ್ತವರ ಬೆನ್ನಿಗೆ ಇಡೀ ದೇಶವಿದೆ ಮತ್ತು ಅವರ ರಕ್ಷಣೆಗೆ ಸರ್ಕಾರವಿದೆ ಎಂದು ಭರವಸೆ ನೀಡಿದರು.

ಈಗಾಗಲೆ ಸರ್ಕಾರವು 1.75 ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣವನ್ನು ಪತ್ತೆ ಹಚ್ಚಿದೆ. ಅಕ್ರಮ ಹಣ ಸಂಪಾದನೆ ಮಾಡಿ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಮಾಡಿಕೊಂಡಿರುವ 18 ಲಕ್ಷ ಮಂದಿ ಇದೀಗ ಕಣ್ಣಿಗೆ ನಿದ್ರೆಯಿಲ್ಲದೆ ಕಂಗಾಲಾಗಿದ್ದಾರೆ. ದೇಶವನ್ನು ಕೊಳ್ಳೆ ಹೊಡೆದಿದ್ದ ಇಂತಹವರನ್ನು ಮಟ್ಟ ಹಾಕಲು ಎಲ್ಲ ತಯಾರಿ ನಡೆಸಿದೆ. ಕಳೆದ ನವೆಂಬರ್‍ನಲ್ಲಿ 500 ಮತ್ತು 1000 ರೂ ನೋಟುಗಳ ನಿಷೇಧದ ನಂತರ ಬ್ಯಾಂಕ್‍ಗಳಲ್ಲಿ ಬಚ್ಚಿಟ್ಟಿದ್ದ 3 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಬಯಲಿಗೆ ಬಂದಿದೆ ಎಂದು ಅವರು ಹೇಳಿದರು.

ಆಮ್ಮು-ಕಾಶ್ಮೀರದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ಸಮಸ್ಯೆಗೆ ಗುಂಡು ಮತ್ತು ಆರೋಪ-ಪ್ರತ್ಯಾರೋಪಗಳಿಂದ ಯಾವುದೇ ಪರಿಹಾರ ಸಿಕ್ಕಲು ಸಾಧ್ಯವಿಲ್ಲ. ಕಾಶ್ಮೀರಿ ಜನತೆಯನ್ನು ಸಮಗ್ರವಾಗಿ ಒಪ್ಪಿಕೊಳ್ಳಬೇಕು. ಆಗಲೇ ಸಮಸ್ಯೆ ಬಗೆಹರಿಯಲು ಸಾಧ್ಯ. ಕಣಿವೆ ರಾಜ್ಯದಲ್ಲಿ ಯಾರೋ ಕೆಲವು ಮಂದಿ ತಮ್ಮು ಹಿತಾಸಕ್ತಿಗಾಗಿ ಸಾರ್ವಜನಿಕರ ನರಮೇಧ ನಡೆಸುವುದು ವಿದ್ರೋಹದ ಕೆಲಸ. ಕಾಶ್ಮೀರವು ಭೂಲೋಕದ ಸ್ವರ್ಗ ಎಂಬ ಗತ ಇತಿಹಾಸವನ್ನು ಮತ್ತೆ ಎತ್ತಿ ಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಹೇಳಿದರು.

ಸಮಾಜದ ಅನಿಷ್ಟಗಳು, ಸಮಸ್ಯೆಗಳ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಸಿಡಿದೆದ್ದು ನಿಲ್ಲಬೇಕಾಗಿದೆ. ಚಲ್ತಾ ಹೈ (ಹೇಗೋ ನಡೆದು ಹೋಗುತ್ತದೆ) ಎಂಬ ಕಾಲ ಇದಲ್ಲ. ಬದಲ್ ಸಕ್ತಾ ಹೈ(ಎಲ್ಲವನ್ನೂ ಬದಲಾಯಿಸಲು ಸಾಧ್ಯವಿದೆ). ಇಂತಹ ಸಂಕಲ್ಪಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಅವರು ಬಣ್ಣಿಸಿದರು.
ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ಎಂಬ ಧ್ಯೇಯದಿಂದ ಜಾರಿಗೆ ತರಲಾದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿ ಒಂದು ತಾಂತ್ರಿಕ ಪವಾಡವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಈ ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಜನತೆಯ ಜೀವನ ಮಟ್ಟ ಸುಧಾರಣೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಸರ್ಕಾರ ತೆಗೆದುಕೊಂಡಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವರ್ಷವು ಹಲವು ವಿಧಗಳಲ್ಲಿ ಅತ್ಯಂತ ಪ್ರಶಸ್ತವಾಗಿದೆ. ದೇಶದಲ್ಲಿ ಗಣೇಶೋತ್ಸವವು ಆರಂಭವಾಗಿ ಇಲ್ಲಿಗೆ 125 ವರ್ಷಗಳಾದವು. ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ. ಅಲ್ಲದೆ ಈ ಶತಮಾನದ ಆದಿಯಲ್ಲಿ ಜನಿಸಿದವರು 2018ಕ್ಕೆ 18ನೆ ವಯಸ್ಸಿಗೆ ಕಾಲಿಡುವ ದಿನವಾಗಲಿದೆ. ಅವರೆಲ್ಲ ಈ ದೇಶದ ಭಾಗ್ಯವಿಧಾತರು ಎಂದೇ ಕರೆಯಲಿಚ್ಛಿಸುತ್ತೇನೆ ಎಂದು ಮೋದಿ ನುಡಿದರು.

ಜಿಎಸ್‍ಟಿ ಜಾರಿಯಿಂದಾಗಿ ತೆರಿಗೆ ಪಾವತಿಸುವವರ ಸಂಖ್ಯೆ ದ್ವಿಗುಣವಾಗಿದೆ. ಈ ಬಾರಿ 56 ಲಕ್ಷ ಮಂದಿ ತೆರಿಗೆ ದಾರರ ಪಟ್ಟಿಗೆ ಸೇರಿದ್ದಾರೆ. ಕಳೆದ ವರ್ಷ ಇದು 22 ಲಕ್ಷ ಮಾತ್ರ ಇತ್ತು. ಇದು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯ ದ್ಯೋತಕವಾಗಿದೆ ಎಂದರು.

Facebook Comments

Sri Raghav

Admin