ಹುತಾತ್ಮ, ಶಾಶ್ವತ ಅಂಗವಿಕಲರಾದ ರಾಜ್ಯದ ಯೋಧರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಆ.15- ಯುದ್ಧ ಅಥವಾ ಯುದ್ಧದಂಥ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ ಓರ್ವ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ಕಾಳಜಿ ಕೇವಲ ಬಾಯಿಮಾತಿನದ್ದಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು.

ನಾವಿಂದು ಮನೆಯೊಳಗೆ ಸುರಕ್ಷಿತವಾಗಿ ನಿಶ್ಚಿಂತೆಯಿಂದ ಇರಲು ಕಾರಣ ಪ್ರಾಣ ಒತ್ತೆ ಇಟ್ಟು ದೇಶ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಸೈನಿಕರಿಗೆ ನಮ್ಮದೊಂದು ಸೆಲ್ಯೂಟ್ ಎಂದು ಹೇಳಿದರು.
ಕೋಮುವಾದ, ಜಾತಿವಾದ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕೂ ದಿಕ್ಕುಗಳಿಂದ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದು ಕೂಡ ಆತಂಕಕಾರಿ ಸಂಗತಿಯಾಗಿದೆ.

ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಈ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನವಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶ ವಿರೋಧಿಗಳ ಹುನ್ನಾರ ವಿಫಲಗೊಳಿಸಲು ನಾವೆಲ್ಲ ಮುಂದಾಗಬೇಕೆಂದು ಕರೆ ನೀಡಿದರು.
ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರಿಗೂ, ಸಮಪಾಲು-ಸಮಬಾಳು ನೀಡುವ ಸರ್ವೋದಯ ತತ್ವದ ಅಭಿವೃದ್ಧಿ ಮಾದರಿ ನಾಡು. ಕಾಯಕ ಜೀವಿ, ಚಳವಳಿಯ ನೇತಾರ ಬಸವಣ್ಣನವರು ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅದಕ್ಕಾಗಿ ಅವರ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

 

Facebook Comments

Sri Raghav

Admin