ಇಂದಿರಾ ಗಾಂಧಿ ಕನಸು ಕರ್ನಾಟಕದಲ್ಲಿ ನನಸಾಗಿದೆ : ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ಬೆಂಗಳೂರು, ಆ.16- ಯಾರೊಬ್ಬರೂ ಹಸಿವಿನಿಂದ ನರಳಬಾರದು ಮತ್ತು ಉಪವಾಸ ಮಲಗಬಾರದು ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕನಸು ಇಂದು ಕರ್ನಾಟಕದಲ್ಲಿ ನನಸಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನ ಜನತೆಗೆ ಅಗ್ಗದ ದರದಲ್ಲಿ ತಿಂಡಿ ಮತ್ತು ಊಟ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಅಂಗವಾಗಿ ಇಂದು ನಗರದಲ್ಲಿ 101 ಇಂದಿರಾ ಕ್ಯಾಂಟೀನ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಈ ಯೋಜನೆ ಕೇವಲ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗಿಲ್ಲ ಹಂತಹಂತವಾಗಿ ಇಡೀ ಕರ್ನಾಟಕದಾದ್ಯಂತ ಇಂತಹ ಕ್ಯಾಂಟೀನ್‍ಗಳು ಜನರ ಹಸಿವನ್ನು ನಿಗಿಸಲಿವೆ.

ತಾತ್ಕಾಲಿಕವಾಗಿ ನಗರದಲ್ಲಿ 101 ಕ್ಯಾಂಟೀನ್‍ಗಳು ಆರಂಭವಾಗಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಎಲ್ಲಾ ವಾರ್ಡ್‍ಗಳಲ್ಲೂ ಕ್ಯಾಂಟೀನ್ ತೆರೆಯಲಿವೆ ಎಂದು ಅವರು ಹೇಳಿದರು. ಹಿಂದೆ ಇಂದಿರಾ ಗಾಂಧಿ ಅವರು ಬಡವರಿಗಾಗಿ ರೋಟಿ- ಕಪಡಾ-ಮಕಾನ್ ಎಂಬ ಘೋಷಣೆ ಮಾಡಿ ಅದರಂತೆ ಅಭಿವೃದ್ಧಿ ಕಾರ್ಯ ನಡೆಸಿದ್ದರು. ಈಗ ಅದೇ ಪರಿಕಲ್ಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ನಾಯಕರು ಮುಂದುವರೆಸಿದ್ದಾರೆ. ಇಂದು ಇಂತಹ ಕ್ಯಾಂಟೀನ್ ಉದ್ಘಾಟಿಸುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ. ಮತ್ತು ಈ ಯೋಜನೆ ಆರಂಭಿಸಿದ ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು. ನಗರದ ಕನಕನಪಾಳ್ಯದ ಕ್ಯಾಂಟೀನ್ ಅನ್ನು ಅವರು ಸಂಕೇತಿಕವಾಗಿ ಉದ್ಘಾಟಿಸಿದರು.

ಕ್ಯಾಂಟೀನ್‍ನಲ್ಲಿ 5 ರೂಗಳಿಗೆ ತಿಂಡಿ ಮತ್ತು 10 ರೂಗಳಿಗೆ ಊಟ ಸಿಗುತ್ತದೆ. ನಗರದ ಯಾವೊಬ್ಬ ಬಡವರು ಇನ್ನು ಉಪವಾಸದ ಆತಂಕ ಅನುಭವಿಸಬೇಕಿಲ್ಲ ಎಂದು ಹೇಳಿದ ರಾಹುಲ್, ಎಲ್ಲ ಕ್ಯಾಂಟೀನ್‍ಗಳಲ್ಲೂ ಗುಣಮಟ್ಟ ಮತ್ತು ಆರೋಗ್ಯಗಳನ್ನು ಕಾಪಾಡಿಕೊಳ್ಳಬೇಕು. ಜನರಿಗೆ ರುಚಿ ಮತ್ತು ಶುಚಿಯಾದ ಆಹಾರ ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಸಲಹೇ ನೀಡಿದರು.

ಇದಕ್ಕು ಮುನ್ನ ರಾಹುಲ್ ಗಾಂಧಿ ಅವರು ಕ್ಯಾಂಟೀನ್ ವ್ಯವಸ್ಥೆ ಮತ್ತು ಆಹಾರ ತಯಾರಿಕೆ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವಿ.ಎಸ್.ಉಗ್ರಪ್ಪ, ಸಂಪುಟ ಸಚಿವರು, ಶಾಸಕರು, ಮಹಾಪೌರರಾದ ಜಿ.ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin