ಜೆಡಿಎಸ್ ಭಿನ್ನ ಶಾಸಕರಿಂದ ನಾಳೆ ಸೋನಿಯಾ ಭೇಟಿ, ‘ಕೈ’ಸೇರಲು ಮುಹೂರ್ತ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

jds

ಬೆಂಗಳೂರು, ಆ.16-ಜೆಡಿಎಸ್‍ನಿಂದ ಅಮಾನತುಗೊಂಡಿರುವ ಏಳು ಮಂದಿ ಶಾಸಕರು ಹಾಗೂ ವಿಧಾನಪರಿಷತ್‍ನ ಮಾಜಿ ಸದಸ್ಯರೊಬ್ಬರು ಕಾಂಗ್ರೆಸ್ ಸೇರುವ ಸಂಬಂಧ ನಾಳೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.
ಶಾಸಕರಾದ ಜಮೀರ್ ಅಹಮ್ಮದ್‍ಖಾನ್, ಎನ್.ಚಲುವ ರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್ ಹಾಗೂ ವಿಧಾನಪರಿಷತ್‍ನ ಮಾಜಿ ಸದಸ್ಯ ರಾಮಕೃಷ್ಣ ಅವರು ಕಾಂಗ್ರೆಸ್ ಹೈಕಮಾಂಡನ್ನು ಭೇಟಿ ಮಾಡಲಿದ್ದಾರೆ.
ಇಂದು ದೆಹಲಿಗೆ ತೆರಳಲಿರುವ ಎಂಟು ಮಂದಿಯೂ ನಾಳೆ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಕೂಡ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಹಾಜರಿದ್ದು, ಸೇರ್ಪಡೆಗೆ ಮುಹೂರ್ತ ನಿಗದಿ ಮಾಡುವ ಸಾಧ್ಯತೆಗಳಿವೆ. ಕಳೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಪಾರೂಕ್ ಅಭ್ಯರ್ಥಿ ಬದಲಾಗಿ ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿದ ಆರೋಪಕ್ಕೊಳಗಾಗಿರುವ ಏಳು ಮಂದಿ ಶಾಸಕರು ಪಕ್ಷದಿಂದ ಅಮಾನತುಗೊಂಡಿದ್ದಾರೆ. ಜೆಡಿಎಸ್ ತೊರೆಯುವುದು ನಿಶ್ಚಿತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದ್ದರೂ, ಹೈಕಮಾಂಡ್ ಸಮ್ಮುಖದಲ್ಲೇ ಟಿಕೆಟ್ ನೀಡುವ ಖಾತ್ರಿಯನ್ನು ಈ ಶಾಸಕರಿಗೆ ನೀಡುವ ಸಾಧ್ಯತೆಗಳಿವೆ.

ಡಿಸೆಂಬರ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿದ್ದು, ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ಭೇಟಿ ಸಂದರ್ಭದಲ್ಲಿ ಸೇರ್ಪಡೆ ದಿನಾಂಕವೂ ನಿಗದಿಯಾಗುವ ಸಾಧ್ಯತೆಗಳಿವೆ.  ಈ ನಡುವೆ ಜಮೀರ್ ಅಹಮ್ಮದ್ ಖಾನ್ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಜೆಡಿಎಸ್ ವರಿಷ್ಠರಿಗೆ ಸವಾಲು ಹಾಕಿದ್ದಾರೆ. ಬಂಡಾಯ ಶಾಸಕರು ಮತ್ತು ಜೆಡಿಎಸ್ ವರಿಷ್ಠರು ಕಳೆದ ಒಂದು ವರ್ಷದಿಂದ ಪರಸ್ಪರ ಆರೋಪ -ಪ್ರತ್ಯಾರೋಪ ಮಾಡುತ್ತಲೇ ಬಂದಿದ್ದರು. ಈಗ ಅಮಾನತುಗೊಂಡಿರುವ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ.

Facebook Comments

Sri Raghav

Admin