ಭೂಕುಸಿತದ ಭಯದಲ್ಲಿ ಬೆಂಗಳೂರು, ನೆಲಕ್ಕುರುಳಲು ಕಾಯುತ್ತಿವೆ ಕಟ್ಟಡಗಳು

ಈ ಸುದ್ದಿಯನ್ನು ಶೇರ್ ಮಾಡಿ

Building-Bengaluru

ಬೆಂಗಳೂರು, ಆ.16-ನಗರದಲ್ಲಿ ಮಳೆ ಆತಂಕ ಸೃಷ್ಟಿಸಿದೆ. ಎಲ್ಲೆಡೆ ಭೂಕುಸಿತ ಭೀತಿ ಎದುರಾಗಿದೆ. ಕಟ್ಟಡವೊಂದು ಯಾವುದೇ ಕ್ಷಣ ಕುಸಿದು ಬೀಳುವ ಸಾಧ್ಯತೆ ಇದೆ. ಎರಡು ಕಡೆ ಮನೆಗಳು ನೆಲಸಮಗೊಂಡಿದ್ದರೆ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಾಗರಿಕರ ನಿದ್ದೆಗೆಡಿಸಿದೆ. ಮೊನ್ನೆ ಬಿದ್ದ ಮಳೆ ಕೋರಮಂಗಲ, ಬಿಟಿಎಂ ಲೇಔಟ್‍ಗಳನ್ನು ದ್ವೀಪಗಳನ್ನಾಗಿಸಿತ್ತು. ಬಹಳಷ್ಟು ಅಪಾರ್ಟ್‍ಮೆಂಟ್‍ಗಳ ಬೇಸ್‍ಮೆಂಟ್‍ಗಳಲ್ಲಿ ನೀರು ತುಂಬಿಕೊಂಡು ವಾಹನಗಳು ಮುಳುಗಿಹೋಗಿದ್ದವು. ಜನ ಹೊರಬರಲಾರದೆ ಪರದಾಡಿದರು. ಇನ್ನೂ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನ ನೀರು ಹೊರಹಾಕಲು ಆಗದೆ ಜಾಗರಣೆ ಮಾಡುವಂತಾಯಿತು.ಸಾರ್ವಜನಿಕರು ಪ್ರಾಣ ಭಯದಿಂದ ತತ್ತರಿಸಿಹೋಗಿದ್ದಾರೆ.

ಈಜೀಪುರದಲ್ಲಿ 20×40 ಅಳತೆಯ ನಿವೇಶನದಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, ಮಳೆಯಿಂದಾಗಿ ಅರ್ಧ ವಾಲಿದೆ. ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿ ಇದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.  ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಮನೆಗಳ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕಟ್ಟಡದ ಮಾಲೀಕ ಮತ್ತು ಎಂಜಿನಿಯರ್ ನಾಪತ್ತೆಯಾಗಿದ್ದಾರೆ. ಮೊದಲು ಎರಡು ಅಂತಸ್ತಿನ ಕಟ್ಟಡ ಕಟ್ಟಲು ಮಾಲೀಕ ಬಿಬಿಎಂಪಿಯಿಂದ ಅನುಮತಿ ಪಡೆದು ಪ್ಲ್ಯಾನ್ ರೂಪಿಸಿ 5 ಅಂತಸ್ತಿನ ಕಟ್ಟಡ ನಿರ್ಮಿಸಿರುವುದರಿಂದ ಪಾಯ ಗಟ್ಟಿಯಿಲ್ಲದೆ ಕಟ್ಟಡ ವಾಲಲು ಕಾರಣವಾಗಿದೆ.
ಬಿಬಿಎಂಪಿ ಎಂಜಿನಿಯರ್ ಒಂದು ಅಂತಸ್ತು ಕಟ್ಟಲು ಅನುಮತಿ ನೀಡಲಾಗಿದ್ದು, ಈಗ 5 ಅಂತಸ್ತನ್ನು ನಿರ್ಮಿಸಿದ್ದರು. ಈ ಬಗ್ಗೆ ಪ್ರಶ್ನಿಸದೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಭಾರತಿನಗರ ಮುರಾಸ್‍ರಸ್ತೆ ಪೊಟ್ರಸ್ ಕಾಲೋನಿಯಲ್ಲಿ ಮಹಮ್ಮದ್ ಸಾದಿಕ್ ಅವರಿಗೆ ಸೇರಿದ ಮನೆ ಮಳೆಯಿಂದಾಗಿ ಕುಸಿದುಬಿದ್ದಿದೆ. ಮಳೆ ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದ್ದರಿಂದ ನೀರು ಸುತ್ತ ನಿಂತು ಗೋಡೆ ಶಿಥಿಲಗೊಂಡ ಕಾರಣ ಈ ಮನೆ ಕುಸಿದಿದೆ. ಮನೆ ಕುಸಿದು ಬಿದ್ದ ವಿಷಯವನ್ನು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ಜನ ಕಿಡಿಕಾರಿದ್ದಾರೆ.

ಜೊತೆಗೆ ಈ ವಾರ್ಡನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯ ಜಾಕೀರ್ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿವೇಕನಗರದಲ್ಲಿ ರಮೇಶ್ ಎಂಬುವರಿಗೆ ಸೇರಿದ ಶೆಡ್‍ವೊಂದು ಮಳೆಗೆ ನೆಲಸಮವಾಗಿದೆ. ಇದಲ್ಲದೆ, ಎಸ್‍ಜೆಪಿ ರಸ್ತೆ, ಪೂರ್ಣಿಮಾ ಟಾಕೀಸ್ ಮುಂಭಾಗದ ರಸ್ತೆ ಬಿರುಕು ಬಿಟ್ಟಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಇದಕ್ಕೆ ಕಳಪೆ ಕಾಮಗಾರಿ, ಮಳೆ ಅವಾಂತರ ಕಾರಣವಾಗಿದೆ. ಮತ್ತೆ ಮಳೆ ಬಂದರೆ ಇನ್ನೇನು ಅನಾಹುತಗಳು ಸಂಭವಿಸುತ್ತವೋ ಎಂಬ ಭೀತಿಯಲ್ಲಿ ನಗರದ ಜನತೆ ದಿನ ಕಳೆಯುವಂತಾಗಿದೆ.

ಆಕ್ರೋಶ : ಇತ್ತ ಮನೆಗಳು ಉರುಳಿ ಬಿದ್ದಿದೆ, ರಸ್ತೆಗಳು ಬಿರುಕು ಬಿಟ್ಟಿವೆ. ಆದರೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಜನರ ಭಯ ದೂರ ಮಾಡುವ ಬದಲು ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Sri Raghav

Admin