ವಿಮಾನನಿಲ್ದಾಣದಿಂದ ಪ್ರಮುಖ ನಾಯಕರ ಜೊತೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಬೆಂಗಳೂರು, ಆ.16-ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಲುವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ರಾಜ್ಯದ ಪ್ರಮುಖ ನಾಯಕರ ಜೊತೆ ವಿಮಾನನಿಲ್ದಾಣದಿಂದ ಜಯನಗರದವರೆಗೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಬೆಳಗ್ಗೆ ವಿಮಾನನಿಲ್ದಾಣಕ್ಕೆ ರಾಹುಲ್‍ಗಾಂಧಿಯವರು ಬಂದಿಳಿಯುವ ವೇಳೆಗೆ ಸಾಕಷ್ಟು ಸಮಯವಾಗಿತ್ತು. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ವಿಳಂಬವಾಗುತ್ತಿದ್ದರಿಂದ ವಿಮಾನನಿಲ್ದಾಣದಲ್ಲಿ ವಿಶ್ರಾಂತಿಯನ್ನೂ ತೆಗೆದುಕೊಳ್ಳದೆ ನೇರವಾಗಿ ಕಾರು ಹತ್ತಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಕಾರಿನಲ್ಲಿ ಪ್ರಯಾಣಿಸಲು ಮುಂದಾದಾಗ ಅವರನ್ನು ತಮ್ಮ ಕಾರಿನಲ್ಲೇ ಬರಲು ರಾಹುಲ್‍ಗಾಂಧಿ ಆಹ್ವಾನಿಸಿದ್ದಾರೆ. ಮುಂದಿನ ಸೀಟಿನಲ್ಲಿ ರಾಹುಲ್‍ಗಾಂಧಿ ಕುಳಿತರೆ, ಹಿಂದಿನ ಸೀಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಇಕ್ಕಟ್ಟಿನಲ್ಲೇ ಹೊಂದಾಣಿಕೆ ಮಾಡಿಕೊಂಡು ಕುಳಿತಿದ್ದಾರೆ.

ದಾರಿಯುದ್ದಕ್ಕೂ ರಾಜ್ಯ ರಾಜಕಾರಣದ ಚರ್ಚೆ ನಡೆಸಲಾಗಿದ್ದು, ಇತ್ತೀಚೆಗೆ ಅಮಿತ್‍ಷಾ ಅವರ ಬೆಂಗಳೂರಿನ ಭೇಟಿ ಬಗ್ಗೆ ರಾಹುಲ್‍ಗಾಂಧಿ ರಾಜ್ಯ ನಾಯಕರಿಂದ ಮಾಹಿತಿ ಪಡೆದರು ಎಂದು ಹೇಳಲಾಗಿದೆ.  ಅಮಿತ್ ಷಾ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದು, ಅಲ್ಲಿನ ನಿರ್ಮಲಾನಂದಶ್ರೀಗಳ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಮೂಲಕ ದರ್ಪ ಪ್ರದರ್ಶಿಸಿದ್ದು, ಅದರಿಂದ ತಪ್ಪು ಸಂದೇಶ ರವಾನೆಯಾಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ರಾಹುಲ್‍ಗಾಂಧಿಯವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ನೀಡಿದ ಜೆಡಿಎಸ್ ಏಳು ಮಂದಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವ ಅನಿವಾರ್ಯತೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ. ನಾಳೆ ಅವರನ್ನು ನವದೆಹಲಿಗೆ ಕರೆತರುತ್ತಿರುವುದಾಗಿ ಹೇಳಿದಾಗ, ಒಮ್ಮೆ ಆ ಶಾಸಕರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪರಿಚಯಿಸಿಕೊಡುವಂತೆ ರಾಹುಲ್ ಸಲಹೆ ನೀಡಿದ್ದಾರೆನ್ನಲಾಗಿದೆ.  ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಆದರೆ ಅದಕ್ಕೆ ಸೂಕ್ತ ಪ್ರಚಾರ ನೀಡಿ ಜನರಿಗೆ ತಲುಪಿಸುವಲ್ಲಿ ಪಕ್ಷ ವಿಫಲವಾಗಿದೆ. ಹೀಗಾಗಿ ಸಂಘಟನೆಯನ್ನು ಹೆಚ್ಚು ಬಲಗೊಳಿಸಬೇಕು. ಜನಸಾಮಾನ್ಯರಿಗೆ ತಲುಪುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದು ರಾಹುಲ್‍ಗಾಂಧಿ ಸಲಹೆ ನೀಡಿದ್ದಾರೆ.

ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳು, ಅದಕ್ಕಾಗಿ ಸಂಪುಟ ವಿಸ್ತರಣೆ, ವಿಧಾನಪರಿಷತ್ ಸದಸ್ಯರ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ರಾಜ್ಯ ನಾಯಕರು ರಾಹುಲ್‍ಗಾಂಧಿಯವರ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ದಾರಿಯುದ್ದಕ್ಕೂ ರಾಜ್ಯರಾಜಕಾರಣದ ಬಗ್ಗೆ ನಾಲ್ಕು ಮಂದಿ ಪ್ರಮುಖರ ಜೊತೆ ರಾಹುಲ್‍ಗಾಂಧಿ ಲೋಕಾಭಿರಾಮವಾಗಿ ಮಾತುಕತೆ ನಡೆಸಿದರು. ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ರಾಹುಲ್‍ಗಾಂಧಿಯವರ ಮಾತುಗಳನ್ನು ಅತ್ಯಂತ ಶಿಸ್ತಿನಿಂದ ಆಲಿಸಿದರು ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin