101 ಇಂದಿರಾ ಕ್ಯಾಂಟಿನ್ ಗಳಿಗೆ ಚಾಲನೆ ನೀಡಿದ ರಾಹುಲ್

Indira-Canteen--01

ಬೆಂಗಳೂರು, ಆ.16- ನಗರದೆಲ್ಲೆಡೆ ಇಂದಿರಾ ಕ್ಯಾಂಟಿನ್ ಹಬ್ಬ..! ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಇಂದಿರಾ ಕ್ಯಾಂಟಿನ್‍ಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮೊಮ್ಮಗ ರಾಹುಲ್‍ಗಾಂಧಿಯವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ವಲಸಿಗರನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರು ಮಹಾನಗರದಲ್ಲಿ ಸರ್ಕಾರ ಸ್ಥಾಪಿಸಿರುವ ಇಂದಿರಾ ಕ್ಯಾಂಟಿನ್‍ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಜಯನಗರದ ಕನಕನಪಾಳ್ಯದಲ್ಲಿ ಸ್ವತಃ ಉಪಹಾರ ಸೇವಿಸುವ ಮೂಲಕ ಕ್ಯಾಂಟಿನ್‍ಗಳನ್ನು ಆರಂಭಿಸಿದ್ದು ವಿಶೇಷವಾಗಿತ್ತು.

ಎಲ್ಲ 198 ವಾರ್ಡ್‍ಗಳಲ್ಲಿ ಸ್ಥಾಪನೆಯಾಗಬೇಕಿದ್ದ ಇಂದಿರಾ ಕ್ಯಾಂಟಿನ್‍ಗಳು ಹಲವು ತಾಂತ್ರಿಕ ಕಾರಣಗಳಿಂದ 101 ಕಡೆ ಮಾತ್ರ ಸ್ಥಾಪನೆಯಾಗಿದ್ದು, ಉಳಿದ ಕ್ಯಾಂಟಿನ್‍ಗಳು ಅಕ್ಟೋಬರ್ 2ರೊಳಗೆ ಆರಂಭವಾಗಲಿವೆ. ಇಂದು ನವದೆಹಲಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್‍ಗಾಂಧಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಸ್ವಾಗತಿಸಿದರು.

Indira-Canteen--02

ಅಲ್ಲಿಂದ ನೇರವಾಗಿ ಕನಕನಪಾಳ್ಯದಲ್ಲಿ ಆಯೋಜಿಸಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಕ್ಯಾಂಟಿನ್‍ಅನ್ನು ವೀಕ್ಷಿಸಿದರು. ನಂತರ ಗಣ್ಯರೊಂದಿಗೆ ಕುಳಿತು ಉಪಹಾರ ಸೇವಿಸಿದರು.  ಅಲ್ಲಿಯೇ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂದಿರಾ ಕ್ಯಾಂಟಿನ್‍ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತರುತ್ತಿರುವುದು ಅತ್ಯಂತ ಉತ್ತಮವಾಗಿದೆ ಮತ್ತು ದೇಶಕ್ಕೆ ಮಾದರಿಯಾಗಿದೆ ಎಂದರು.

Indira-Canteen--03

ಸಿದ್ದರಾಮಯ್ಯ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ನಾಲ್ಕು ವರ್ಷಗಳಲ್ಲಿ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹತ್ತು-ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಿದ್ದು, ಇಂದು ಕ್ಯಾಂಟಿನ್ ಭಾಗ್ಯ ಜಾರಿ ಮಾಡಿದೆ. 30 ಸಾವಿರ ಉದ್ಯೋಗಗಳನ್ನು ಕಲ್ಪಿಸಿದ್ದು, ಈಗ ಪ್ರತಿದಿನ 3 ಲಕ್ಷ ಜನರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸುವ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವುದು ಅತ್ಯುತ್ತಮ ಕೆಲಸ ಎಂದರು.

ಕಡಿಮೆ ದರದಲ್ಲಿ ಊಟ-ಉಪಹಾರ ಒದಗಿಸುವ ಈ ಕ್ಯಾಂಟಿನ್‍ಗಳು ಇಂದಿನಿಂದ ಬೆಂಗಳೂರು ನಗರದಲ್ಲಿ ಪ್ರತಿದಿನ ಕಾರ್ಯಾರಂಭ ಮಾಡಲಿವೆ. ಇಂದು ಎಲ್ಲ ಕ್ಯಾಂಟಿನ್‍ಗಳಲ್ಲಿ ಉಚಿತವಾಗಿ ಊಟ ನೀಡಲಿದ್ದು, ನಾಳೆಯಿಂದ 5ರೂ.ಗೆ ತಿಂಡಿ, 10ರೂ. ದರದಲ್ಲಿ ಊಟ ದೊರೆಯಲಿದ್ದು, ಪ್ರತಿದಿನ 3 ಲಕ್ಷ ಜನಕ್ಕೆ ಕಡಿಮೆ ದರದಲ್ಲಿ ಊಟ-ಉಪಹಾರ ದೊರೆಯಲಿದೆ.

ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಡುಗೆ ತಯಾರಿಸುವ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇಲ್ಲಿ ತಯಾರಾದ ಊಟ ಮತ್ತು ತಿಂಡಿ ಕ್ಯಾಂಟಿನ್‍ಗಳಿಗೆ ಸರಬರಾಜಾಗಿ ಅಲ್ಲಿ ವಿತರಣೆಯಾಗುತ್ತದೆ. 101 ಕ್ಯಾಂಟಿನ್‍ಗಳು ಇಂದಿನಿಂದ ಕಾರ್ಯಾರಂಭ ಮಾಡಲಿದ್ದು, ಉಳಿದ ಕ್ಯಾಂಟಿನ್‍ಗಳು ಅಕ್ಟೋಬರ್ 2ರಿಂದ ಪ್ರಾರಂಭವಾಗಲಿವೆ. ಕೆಲವೆಡೆ ಜಾಗದ ಸಮಸ್ಯೆ, ಮತ್ತೆ ಕೆಲವೆಡೆ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಎಲ್ಲ ಕಡೆ ಮಾಡಲು ಸಾಧ್ಯವಾಗಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಕ್ಟೋಬರ್ 2ಕ್ಕೆ ಇನ್ನುಳಿದ ಕ್ಯಾಂಟಿನ್‍ಗಳನ್ನು ಸರ್ಕಾರ ಪ್ರಾರಂಭಿಸಲಿದೆ. ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಶೋಕ ಪಿಲ್ಲರ್ ಮುಂಭಾಗದಲ್ಲಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅಶೋಕ ಪಿಲ್ಲರ್ ರಸ್ತೆಯಲ್ಲಿ 2ಕಿಲೋ ಮೀಟರ್‍ವರೆಗೆ ರಸ್ತೆ ಬಂದ್ ಮಾಡಲಾಗಿತ್ತು.

Facebook Comments

Sri Raghav

Admin