‘ಇಂದಿರಾ ಕ್ಯಾಂಟಿನ್‍’ಗೆ ಸಕತ್ ರೆಸ್ಪಾನ್ಸ್, ಕ್ವಾಲಿಟಿ ಓಕೆ, ಕ್ವಾಂಟಿಟಿ ಸಾಕಾಗಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen

ಬೆಂಗಳೂರು, ಆ.17- ನಗರದಲ್ಲಿ ನಿನ್ನೆಯಿಂದ ಆರಂಭವಾಗಿರುವ ಇಂದಿರಾ ಕ್ಯಾಂಟಿನ್‍ಗಳ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಉಪಹಾರ ಇನ್ನೂ ಬೇಕಾಗಿತ್ತು, ಮತ್ತಷ್ಟು ಜನಕ್ಕೆ ಸಿಗಬೇಕಾಗಿತ್ತು ಎಂಬ ಮಾತುಗಳು ಕೇಳಿಬಂದವು. ಎರಡನೇ ದಿನವಾದ ಇಂದು ಇಂದಿರಾ ಕ್ಯಾಂಟಿನ್ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಅರ್ಧ-ಮುಕ್ಕಾಲು ಗಂಟೆಯಲ್ಲೇ ಖಾಲಿಯಾಗಿದ್ದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದರು. ಟೇಸ್ಟ್ ಸೂಪರ್ ಆಗಿದೆ. ಇದೇ ಗುಣಮಟ್ಟ ಮುಂದುವರಿಯಲಿ. ಆದರೆ, 250 ಜನಕ್ಕಷ್ಟೇ ಕೊಟ್ಟರೆ ಸಾಲದು. ಇದರ ಪ್ರಮಾಣವನ್ನು ಹೆಚ್ಚಿಸಲಿ ಎಂಬ ಮಾತುಗಳು ಕೇಳಿಬಂದವು.

ಬಡವರನ್ನು, ಶ್ರಮಿಕ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಯಾಂಟಿನ್ ಸ್ಥಾಪಿಸಲಾಗಿದೆ. ಆದರೆ, ಬಹುತೇಕ ಪಾರ್ಕ್‍ಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಕ್ಯಾಂಟಿನ್‍ಗಳನ್ನು ಸ್ಥಾಪಿಸಿರುವುದರಿಂದ ವಾಕಿಂಗ್ ಬರುವವರು ಬಹುತೇಕ ಹೈ-ಪೈ ಜನಗಳೇ. ಬೆಳಗ್ಗೆ ಬಂದಾಗ ಇಡ್ಲಿ, ಚೌ ಚೌ ಬಾತ್ ಅವರ ಪಾಲಾಗುತ್ತದೆ. ಇನ್ನು ಬಡವರಿಗೆ ಎಲ್ಲಿ ಸಿಗುತ್ತದೆ. ಅವರಿಗೆ ತಿಂಡಿ ಸಿಗಬೇಕೆಂದರೆ ಬೆಳ್ಳಂಬೆಳಗ್ಗೆ ಹೋಗಿ ಕ್ಯಾಂಟೀನ್‍ಗಳಲ್ಲಿ ಕ್ಯೂ ನಿಲ್ಲಬೇಕು. ಇನ್ನು ಕೆಲಸಕ್ಕೆ ಎಲ್ಲಿ ಹೋಗುವುದು. ಅದಕ್ಕಾಗಿ ಕ್ಯಾಂಟಿನ್‍ಗಳನ್ನು ಹೆಚ್ಚಳ ಮಾಡಬೇಕು ಅಥವಾ ತಿಂಡಿ ಕೊಡುವ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರಿಂದ ಕೇಳಿಬಂತು.

ಮಧ್ಯಾಹ್ನದ ಊಟಕ್ಕೆ ಈಗಾಗಲೇ ಹಲವು ಕ್ಯಾಂಟಿನ್‍ಗಳ ಮುಂದೆ ಸರದಿ ಸಾಲು ಕಂಡುಬಂತು. ಮಧ್ಯಾಹ್ನ 12.30 ರಿಂದ 3 ಗಂಟೆಯೊಳಗೆ ಊಟ ಕ್ಲೋಸ್ ಆಗುತ್ತದೆ. ಅಷ್ಟರೊಳಗೆ ಊಟ ಪಡೆಯಬೇಕು. 10ರೂ. ಕೊಟ್ಟು ಟೋಕನ್ ಪಡೆದು ಊಟ ಪಡೆಯಲು ಬಹುತೇಕ ಕ್ಯಾಂಟಿನ್‍ಗಳ ಮುಂದೆ ಜನ ಸಾಲಿನಲ್ಲಿ ನಿಂತಿದ್ದರು. 101 ಕ್ಯಾಂಟಿನ್‍ಗಳು ಪ್ರಾರಂಭವಾಗಿದ್ದರೂ ಹಲವು ಕಡೆ ತಾಂತ್ರಿಕ ಕಾರಣಗಳಿಂದ ಇನ್ನೂ ತೆರೆದಿರಲಿಲ್ಲ. ಅಂತಹ ಭಾಗಗಳಲ್ಲಿ ಕೆಲವರಿಗೆ ನಿರಾಸೆಯಾಯಿತು. 500 ಮಂದಿಗೆ ಉಪಹಾರ, 500 ಮಂದಿಗೆ ಊಟ ನೀಡಲಾಗುತ್ತಿದೆ ಎಂದು ಹೇಳಿದ್ದರೂ ಕೂಡ 250 ಮಂದಿಗೆ ಕೊಡಲಾಗುತ್ತಿದೆ. ಇದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದುದು ಕೇಳಿಬಂದಿತು.

Indira-Canteen

ಒಟ್ಟಾರೆ ಇಂದಿರಾ ಕ್ಯಾಂಟಿನ್‍ನ ಪ್ರಥಮ ದಿನದ ರೆಸ್ಪಾನ್ಸ್ ಭರ್ಜರಿಯಾಗಿತ್ತು. ಆದರೆ, ಇನ್ನೂ ಬೇಕು, ಇನ್ನೂ ಎಲ್ಲರಿಗೂ ಸಿಗಬೇಕು, ಇದೇ ರುಚಿ-ಶುಚಿ ಮುಂದುವರಿಯಬೇಕು ಎಂದು ಬಹುತೇಕ ಎಲ್ಲರೂ ಹೇಳುತ್ತಿದ್ದುದು ಕಂಡುಬಂತು. ಹಲವರು ತಮಗೆ ಸಿಕ್ಕಿತಲ್ಲ ಎಂದು ಸಿಕ್ಕಿದ ತಿಂಡಿಯನ್ನು ಸವಿದು ನಾಳೆಯೂ ಇದೇ ಸಮಯಕ್ಕೆ ಬರೋಣ ಎಂದು ಮಾತನಾಡಿಕೊಳ್ಳುತ್ತ ತೆರಳುತ್ತಿದ್ದರು.  ಇಂದಿರಾ ಕ್ಯಾಂಟಿನ್‍ನಲ್ಲಿ ತಿಂಡಿ-ಊಟ ಸವಿದ ಹಲವರನ್ನು ಈ ಸಂಜೆ ಮಾತನಾಡಿಸಿದಾಗ, ಓ.. ಸೂಪರ್… ಆದರೆ, ಗುಣಮಟ್ಟ ಕಾಯ್ದುಕೊಂಡು ಜಾಸ್ತಿ ಸಮಯ ತಿಂಡಿ ವಿತರಿಸಬೇಕೆಂದು ಹಿರಿಯೊಬ್ಬರು ನುಡಿದರು.

ಊಟ ಸೂಪರ್ ಆಗಿದೆ. ಇದೇ ರೀತಿ ಗುಣಮಟ್ಟ ಕಾಯ್ದುಕೊಂಡರೆ ಚೆನ್ನಾಗಿರುತ್ತದೆ. ಇಂದು 50ರೂ. ಕೊಟ್ಟರೂ ಉತ್ತಮ ಅಕ್ಕಿ ಸಿಗುವುದಿಲ್ಲ. ಅಂತಹದ್ದರಲ್ಲಿ 5ರೂ.ಗೆ ಉಪಹಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮತ್ತೊಬ್ಬರು ಉಪ್ಪಿಟ್ಟು ಸೇವಿಸುತ್ತಾ ತಿಳಿಸಿದರು. ಮತ್ತೊಬ್ಬರನ್ನು ಸಂಪರ್ಕಿಸಿದಾಗ ಉಪಹಾರ ಬೊಂಬಾಟ್ ಆಗಿದೆ. ಆದರೆ, ಜಾಸ್ತಿ ಕೊಡಬೇಕಿತ್ತು. 5ರೂ.ಗೆ ತಿಂಡಿ ಕೊಡುವುದೇ ಹೆಚ್ಚು, ಇನ್ನೆಷ್ಟು ತಾನೇ ಕೊಡುತ್ತಾರೆ ಬಿಡಿ. ಬಂದವರೆಲ್ಲರಿಗೂ ನೀಡಬೇಕಲ್ವಾ ಎಂದು ಅವರಿಗವರೇ ಮಾತನಾಡಿಕೊಳ್ಳುತ್ತಿದ್ದರು. ನಿನ್ನೆ ಇಡ್ಲಿ ವಿತರಿಸಲಾಗಿತ್ತಂತೆ, ಇಂದು ಇಡ್ಲಿ ಇರಲಿಲ್ಲ. ಬದಲಿಗೆ ಉಪ್ಪಿಟ್ಟು ಕೊಟ್ಟರು. ರುಚಿ ಚೆನ್ನಾಗಿದೆ ಎಂದು ಮಗದೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಾರೆ ಅಗ್ಗದ ದರದಲ್ಲಿ ಇಂದಿರಾ ಕ್ಯಾಂಟಿನ್‍ನಲ್ಲಿ ಕಡಿಮೆ ಬೆಲೆಗೆ ಉಪಹಾರ ನೀಡುತ್ತಿರುವುದು ಹಸಿವನ್ನು ನೀಗಿಸಿದಂತಾಗಿದೆ. ಮಳೆಯಿಂದಾಗಿ ಕೆಲವು ಕಡೆ ಇಂದಿರಾ ಕ್ಯಾಂಟಿನ್‍ನಲ್ಲಿ ಬೆಳಗಿನ ಉಪಹಾರ ತಡವಾಗಿ ನೀಡಲಾಯಿತು. ಗಡಿಬಿಡಿಯಲ್ಲಿ ದೊರೆತ ಜಾಗದಲ್ಲಿ ಇಂದಿರಾಕ್ಯಾಂಟಿನ್ ನಿರ್ಮಾಣ ಮಾಡಲಾಗಿದ್ದು, ಕೆಲವೊಂದು ಕಡೆ ಮಳೆಯಿಂದ ಸೋರುತ್ತಿದ್ದುದು ಕಂಡು ಬಂತು.  ಇಂದು ಕೆಲವೊಂದು ಇಂದಿರಾ ಕ್ಯಾಂಟಿನ್‍ಗಳಲ್ಲಿ ಉಪಹಾರಕ್ಕಾಗಿ ಬೆಳಗ್ಗೆ ನೂಕು-ನುಗ್ಗಲು ಕಂಡು ಬಂತು. ಟೋಕನ್ ಪಡೆದವರಿಗೆಲ್ಲಾ ತಿಂಡಿ ಸಿಕ್ಕೇ ಸಿಗುತ್ತದೆ. ಅವರು ಸಾಲಾಗಿ ಬಂದು ಉಪಹಾರ ಸ್ವೀಕರಿಸಿದರೆ ಒಳಿತು.  ಎಲ್ಲರೂ ತಮಗೆ ಮೊದಲು ಸಿಗಬೇಕೆಂದು ಮುಗಿಬಿದ್ದರೆ ಉಪಹಾರ ನೀಡುವವರಿಗೂ ತೊಂದರೆಯಾಗುತ್ತದೆ ಎಂದು ಹಿರಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin