ಕರ್ನಾಟಕ-ಗುಜರಾತ್ ಚುನಾವಣೆಯ ಬಗ್ಗೆ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳಿದ ಅಮಿತ್ ಷಾ..!

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಬೆಂಗಳೂರು, ಆ.17- ಮೂರು ದಿನಗಳ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜ್ಯೋತಿಷಿಗಳನ್ನು ಭೇಟಿಯಾಗಿ ಕರ್ನಾಟಕ ಮತ್ತು ಗುಜರಾತ್ ಚುನಾವಣೆಯ ಬಗ್ಗೆ ಭವಿಷ್ಯ ಕೇಳಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಬಿಡುವಿಲ್ಲದ ಪ್ರವಾಸದ ನಡುವೆಯೂ, ಅಮಿತ್ ಶಾ ತಮಿಳುನಾಡಿನ ತಂಜಾವೂರಿನಿಂದ ಬಂದ ಇಬ್ಬರು ಜ್ಯೋತಿಷಿಗಳ ಜೊತೆ ನಗರದ ಹೊರವಲಯದಲ್ಲಿರುವ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಭಾನುವಾರ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಭೇಟಿಯಾದ ನಂತರ ಅಮಿತ್ ಶಾ, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ನಲ್ಲಿರವಿಶಂಕರ್ ಗುರೂಜಿಗಳನ್ನು ಭೇಟಿಯಾಗಿದ್ದರು. ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾಗಿರುವ ಗುಜರಾತ್ ಮತ್ತು ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿಯ ಪರಿಸ್ಥಿತಿ ಏನಾಗಬಹುದು ಎಂದು ತಿಳಿದುಕೊಳ್ಳಲು ಅಮಿತ್ ಶಾ ಬಯಸಿದ್ದರಿಂದ, ಜ್ಯೋತಿಷಿಗಳನ್ನು ರವಿಶಂಕರ್ ಅವರ ಆಶ್ರಮಕ್ಕೆ ಕರೆಸಿಕೊಳ್ಳಲಾಗಿತ್ತು.

ಗುಜರಾತ್ ಚುನಾವಣೆ ವರ್ಷಾಂತ್ಯದಲ್ಲಿ ಮತ್ತು ಕರ್ನಾಟಕದ ಚುನಾವಣೆ ಬರುವ ವರ್ಷ ಮೇ ತಿಂಗಳಲ್ಲಿ ಅಥವಾ ಅದಕ್ಕಿಂತ ಮುಂಚೆ ನಡೆಯುವ ಸಾಧ್ಯತೆಯಿದೆ. ಈ ಎರಡು ರಾಜ್ಯಗಳ ಚುನಾವಣೆಯ ಬಗ್ಗೆ ಜ್ಯೋತಿಷಿಗಳು ನುಡಿದ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.

ತಮಿಳುನಾಡಿನ ತಂಜಾವೂರಿನಿಂದ ಬಂದಿದ್ದ ಜ್ಯೋತಿಷಿಗಳು:

ತಮಿಳುನಾಡಿನ ತಂಜಾವೂರಿನಿಂದ ಇಬ್ಬರು ಜ್ಯೋತಿಷಿಗಳನ್ನು ರವಿಶಂಕರ್ ಗುರೂಜಿ ಆಶ್ರಮಕ್ಕೆ ಕರೆಸಿಕೊಳ್ಳಲಾಗಿತ್ತು. ಅತ್ಯಂತ ಗೌಪ್ಯವಾಗಿ ನಡೆದ ಮಾತುಕತೆಯ ವೇಳೆ, ಅಮಿತ್ ಶಾ ಅವರ ಭದ್ರತಾ ಅಧಿಕಾರಿಗಳು, ಬಿಜೆಪಿ ಮುಖಂಡರು, ರವಿಶಂಕರ್ ಅವರ ಅನುಯಾಯಿಗಳಿಗಾಗಲಿ ಯಾರಿಗೂ ಪ್ರವೇಶ ನೀಡಿರಲಿಲ್ಲ. ಇಬ್ಬರು ಜ್ಯೋತಿಷಿಗಳು, ಅಮಿತ್ ಶಾ ಮತ್ತು ರವಿಶಂಕರ್ ಗುರೂಜಿಗಳು ಮಾತ್ರ ಕೊಠಡಿಯಲ್ಲಿ ಮಾತುಕತೆ ನಡೆಸಿದ್ದರು. ಎರಡು ರಾಜ್ಯಗಳಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಮುಖಂಡರನ್ನು ನಂಬಿಕೊಂಡು ಚುನಾವಣೆ ಎದುರಿಸುವುದು ಬೇಡ ಎನ್ನುವ ಸಲಹೆಯನ್ನು ಜ್ಯೋತಿಷಿಗಳು ನೀಡಿದ್ದಾರೆ.
ಶಿಸ್ತುಬದ್ದವಾಗಿ ಯೋಜನೆ ರೂಪಿಸಿ :

ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ತೀವ್ರ ಶ್ರಮ ವಹಿಸಬೇಕಾಗುತ್ತದೆ, ಹಾಗಾಗಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಶಿಸ್ತುಬದ್ದವಾಗಿ ಯೋಜನೆ ರೂಪಿಸಿದರೆ, ಸ್ವಂತ ಬಲದಿಂದಲೇ ಅಧಿಕಾರಕ್ಕೆ ಬರಬಹುದು ಎಂದು ಜ್ಯೋತಿಷಿಗಳು, ಅಮಿತ್ ಶಾಗೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಲಭವಾಗಿ ಜಯ ಸಿಗುವುದಿಲ್ಲ, ರಾಜ್ಯ ಮುಖಂಡರಿಗಿಂತ ಚುನಾವಣೆ ಮುಗಿಯುವ ತನಕ ನೀವೇ ನೇರ ಜವಾಬ್ದಾರಿ ತೆಗೆದುಕೊಳ್ಳಿ. ಉಸ್ತುವಾರಿ ನೀವೇ ವಹಿಸಿ ಕೊಂಡರೆ ಶಕ್ತಿ ಜಾಸ್ತಿ. ಈಗ ಗೆದ್ದ ಶಾಸಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ಯೋಜನೆ ರೂಪಿಸಿ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

ಗುಜರಾತಿನಲ್ಲೂ ಜಯ ಸುಲಭವಿಲ್ಲ :

ರವಿಶಂಕರ್ ಗುರೂಜಿ, ಅಮಿತ್ ಶಾ ಸುಮಾರು ಒಂದು ಗಂಟೆಗಳ ಕಾಲ ಜ್ಯೋತಿಷಿಗಳ ಜೊತೆ ಕ್ಲೋಸ್ ಡೋರ್ ಮಾತುಕತೆಯ ವೇಳೆ, ಗುಜರಾತಿನಲ್ಲೂ ಜಯ ಸುಲಭವಿಲ್ಲ. ಕಾರ್ಯಕರ್ತರು ಶ್ರಮವಹಿಸಬೇಕು, ಸೂಕ್ತ ಅಭ್ಯರ್ಥಿಯನ್ನು ಹಾಕಬೇಕು ಮತ್ತು ಅಧಿಕಾರ ಉಳಿಸಿಕೊಳ್ಳಲು ಸಿಕ್ಕಾಪಟ್ಟೆ ಶ್ರಮ ಪಡಬೇಕಾಗುತ್ತದೆ ಎಂದು ಜ್ಯೋತಿಷಿಗಳು ಭವಿಷ್ಯ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಅಮಿತ್ ಶಾಗೆ ಹೇಳಿದ್ದಾರೆ.

Facebook Comments

Sri Raghav

Admin