ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ಥಿತಿ ಅತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

parameshwar

ಬೆಂಗಳೂರು, ಆ.17- ಜೆಡಿಎಸ್‍ನ ಬಂಡಾಯ ಶಾಸಕರು ಕಾಂಗ್ರೆಸ್ ಸೇರಲು ಹೈಕಮಾಂಡ್ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವಿಲ್ಲದಂತಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ನವದೆಹಲಿಯಲ್ಲಿ ರಾಹುಲ್‍ಗಾಂಧಿ ಅವರನ್ನು 7 ಮಂದಿ ಬಂಡಾಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅದರ ಫಲಿತಾಂಶವಾಗಿ ಚಲುವರಾಯಸ್ವಾಮಿ ಅವರಿಗೆ ನಾಗಮಂಗಲದಿಂದ, ಎಚ್.ಸಿ.ಬಾಲಕೃಷ್ಣ ಅವರಿಗೆ ಮಾಗಡಿ ಕ್ಷೇತ್ರದಿಂದ ರಮೇಶ್ ಬಂಡಿಸಿದ್ದನಗೌಡ ಅವರಿಗೆ ಶ್ರೀರಂಗಪಟ್ಟಣದಿಂದ, ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ, ಅಖಂಡ ಶ್ರೀನಿವಾಸ್‍ಮೂರ್ತಿ ಅವರಿಗೆ ಪುಲಕೇಶಿನಗರದಿಂದ, ಜಮೀರ್ ಅಹಮ್ಮದ್ ಖಾನ್ ಅವರಿಗೆ ಚಾಮರಾಜಪೇಟೆಯಿಂದ, ಭೀಮನಾಯಕ್ ಅವರಿಗೆ ಹಗರಿ ಬೊಮ್ಮನಹಳ್ಳಿಯಿಂದ ಸ್ಪರ್ಧಿಸಲು ಟಿಕೆಟ್ ಖಚಿತವಾಗಿದೆ.

ಜೆಡಿಎಸ್‍ನ 7 ಮಂದಿ ಬಂಡಾಯ ಶಾಸಕರು ಜ.15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್‍ನಿಂದ ವಲಸೆ ಬಂದಿರುವ ಈ ಶಾಸಕರ ಪೈಕಿ ಜಮೀರ್‍ಅಹಮ್ಮದ್ ಖಾನ್, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಪುಲಕೇಶಿನಗರದಿಂದ ಕಳೆದ ಬಾರಿ ಸ್ಪರ್ಧಿಸಿ ಕಾಂಗ್ರೆಸ್‍ನ ಬಿ.ಪ್ರಸನ್ನಕುಮಾರ್ ಅವರ ಎದುರು 10ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದರು.
ಪ್ರಸನ್ನಕುಮಾರ್ ಅವರು ದಲಿತ ನಾಯಕ ಬಸವಲಿಂಗಪ್ಪ ಅವರ ಪುತ್ರರೂ ಆಗಿರುವುದರಿಂದ ಈ ಬಾರಿ ಅವರಿಗೆ ಟಿಕೆಟ್ ನೀಡಬೇಕೆಂದು ಲಾಬಿ ನಡೆಯುತ್ತಿತ್ತು. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸೋಲುವ ಸಾಧ್ಯತೆ ಇರುವುದರಿಂದ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದರು.

ಅದರಲ್ಲಿ ಪುಲಕೇಶಿನಗರ ಪ್ರಮುಖ ಕ್ಷೇತ್ರವಾಗಿತ್ತು. ಉಳಿದಂತೆ ಮೂಡಿಗೆರೆ, ಬೆಂಗಳೂರಿನ ಮಹದೇವಪುರ ಕ್ಷೇತ್ರಗಳು ಪರಮೇಶ್ವರ್ ಅವರ ಪರಿಶೀಲನಾ ಪಟ್ಟಿಯಲ್ಲಿದ್ದವು. ಮೂಡಿಗೆರೆಯಲ್ಲಿ ಮೋಟಮ್ಮ ಮತ್ತೆ ಕ್ರಿಯಾಶೀಲವಾಗಿದ್ದು, ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಪ್ರಬಲವಾಗಿರುವುದರಿಂದ ಅಲ್ಲಿ ಪೈಪೋಟಿ ನೀಡುವುದು ಕಷ್ಟವಾಗಿದ್ದು, ಪುಲಕೇಶಿನಗರ ಸುರಕ್ಷಿತ ತಾಣ ಎಂದು ಅಂದಾಜಿಸಲಾಗಿತ್ತು.
ಪ್ರಸನ್ನಕುಮಾರ್ ಅವರ ಮನವೊಲಿಸಿ ಪುಲಕೇಶಿನಗರ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆ ಪರಮೇಶ್ವರ್ ಅವರಲ್ಲಿತ್ತು. ಆದರೆ, ರಾಜ್ಯಸಭೆ ಚುನಾವಣೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ಖಚಿತವಾಗಿದೆ.

ಹೀಗಾಗಿ ಪರಮೇಶ್ವರ್ ಅವರಿಗೆ ಕ್ಷೇತ್ರವಿಲ್ಲದೆ ಅತಂತ್ರವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನೇ ಕೈಬಿಡುವ ಸಾಧ್ಯತೆ ಇದೆ. ಇನ್ನು ಗಂಗಾವತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಎಲ್‍ಸಿ ಎಚ್.ಆರ್.ಶ್ರೀನಿವಾಸ್ ಅವರು ಇಕ್ಬಾಲ್ ಅನ್ಸಾರಿ ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ 26ಸಾವಿರ ಮತಗಳನ್ನು ಪಡೆದು ಸೋಲು ಕಂಡು ಜಿ.ಎ.ಭಾವಾ ಅವರು ಜಮೀರ್ ಅಹಮ್ಮದ್ ಖಾನ್ ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಹಗರಿ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದ್ದು, ಭೀಮ ನಾಯಕ್ ಅವರಿಗೆ ಅಂತಹ ವಿರೋಧ ಕಂಡು ಬಂದಿಲ್ಲ. ಮಾಗಡಿ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜುನಾಥ್ ಅವರು, ನಾಗಮಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುರೇಶ್‍ಗೌಡ ಅವರು ಜೆಡಿಎಸ್‍ನತ್ತ ಮುಖ ಮಾಡಿರುವುದರಿಂದ ಎಚ್.ಸಿ.ಬಾಲಕೃಷ್ಣ ಮತ್ತು ಚಲುವರಾಯಸ್ವಾಮಿ ಅವರಿಗೆ ಅಂತಹ ವಿರೋಧ ಕಂಡು ಬಂದಿಲ್ಲ.

ಆದರೆ, ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿಸಿದ್ದನಗೌಡ ಸೇರ್ಪಡೆಗೆ ಮಂಡ್ಯ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯ ಈ ಬಾರಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಭಾರೀ ತಯಾರಿ ನಡೆಸಿದ್ದರು.   ಹೀಗಾಗಿ ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸಿಗರಿಂದಲೇ ಜೆಡಿಎಸ್ ಬಂಡಾಯ ಶಾಸಕರ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ.

Facebook Comments

Sri Raghav

Admin