ಗಡಿಯಲ್ಲಿನ ಹೊಸ ಸ್ಥಳಗಳತ್ತ ನುಸುಳಲು ನುಸುಳಲು ಚೀನಾ ಹುನ್ನಾರ

ಈ ಸುದ್ದಿಯನ್ನು ಶೇರ್ ಮಾಡಿ

China--01

ನವದೆಹಲಿ, ಆ.17-ಈಶಾನ್ಯ ರಾಜ್ಯ ಅಸ್ಸಾಂನ ಡೋಕ್ಲಾಂ ವಲಯ ಮತ್ತು ಲಡಾಖ್ ಪ್ರದೇಶದಲ್ಲಿ ಕ್ಯಾತೆ ತೆಗೆದು ಮುಖಭಂಗಕ್ಕೆ ಒಳಗಾಗಿರುವ ಚೀನಾ ಈಗ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‍ಎಸಿ) ಬಳಿ ಇರುವ ಹೊಸ ಸೂಕ್ಷ್ಮ ಸ್ಥಳಗಳತ್ತ ನುಸುಳಲು ಹುನ್ನಾರ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದರಿಂದಾಗಿ ಮತ್ತೊಂದು ಗಂಭೀರ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನಾ ಪಡೆಗಳು ಸಜ್ಜಾಗುವುದು ಅನಿವಾರ್ಯವಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಹೆಚ್ಚು ದುರ್ಗಮವಲ್ಲದ ಹಾಗೂ ಸುಲಭವಾಗಿ ಅತಿಕ್ರಮಣ ಮಾಡಬಹುದಾದ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಮುನ್ನುಗ್ಗಲು ಕುಯುಕ್ತಿ ರೂಪಿಸಿದೆ ಎಂದು ಭಾರತೀಯ ಭದ್ರತಾ ಪಡೆಗಳ ಉನ್ನತ ಮೂಲಗಳು ತಿಳಿಸಿವೆ.

ಸಿಕ್ಕಿಂನ ಡೋಕ್ಲಾಮ್ ವಲಯದಲ್ಲಿ ಭಾರತೀಯ ಸೇನಾ ಪಡೆ ಹಿಂದಕ್ಕೆ ಸರಿಯುವಂತೆ ಮಾಡಲು ಒತ್ತಡ ಹೇರುವ ತಂತ್ರವೂ ಇದರಲ್ಲಿ ಅಡಗಿದೆ.
ಲಡಾಖ್‍ನ ಪ್ರಸಿದ್ಧ ಪಾನ್‍ಗೊಂಗ್ ಸರೋವರದ ದಂಡೆಯುದ್ದಕ್ಕೂ ಇರುವ ಭಾರತೀಯ ಪ್ರಾಂತ್ಯದೊಳಗೆ ನುಸುಳಲು ಚೀನಾ ಯೋಧರು ನಡೆಸಿದ ಯತ್ನವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ್ದವು. ಈ ಕೃತ್ಯದ ನಂತರ ಎರಡು ದೇಶಗಳ ನಡುವೆ ಮತ್ತೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು. ಈ ಸರೋವರದ ಬಳಿ ಭಾರತ ಮತ್ತು ಚೀನಾ ಯೋಧರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಆದರೆ ಪೂರ್ವ ಲಡಾಖ್‍ನಲ್ಲಿ ಉಭಯ ದೇಶಗಳ ಭದ್ರತಾಪಡೆಗಳು ಗಡಿ ಸಿಬ್ಬಂದಿ ಸಭೆ (ಬಿಪಿಎಂ) ನಡೆಸಿ ಪರಿಸ್ಥಿತಿ ಉಪಶಮನಕ್ಕೆ ಮುಂದಾದ ಸಂದರ್ಭದಲ್ಲೇ ಇನ್ನೊಂದೆಡೆ ಚೀನಾ ಹೊಸ ಪ್ರದೇಶಗಳ ಮೇಲೆ ವಕ್ರದೃಷ್ಟಿ ಬೀರಿ ಮಸಲತ್ತು ಮಾಡುತ್ತಿದೆ.

ಈಗಾಗಲೇ ಉದ್ವಿಗ್ನಗೊಂಡಿರುವ ಸಿಕ್ಕಿಂ-ಭೂತಾನ್-ಸಿಕ್ಕಿಂ ಟ್ರೈ ಜಂಕ್ಷನ್‍ನಲ್ಲಿ(ಮೂರು ಸ್ಥಳ ಕೂಡುವ ಪ್ರದೇಶ) ಚೀನಾದ ಡ್ರ್ಯಾಗನ್ ಮತ್ತೆ ಬಾಲ ಬಿಚ್ಚುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಅಲ್ಲಿ ಭಾರತೀಯ ಯೋಧರು ಬಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡು ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧರಾಗಿದ್ದಾರೆ. ಒಂದು ವೇಳೆ ಸಂಘರ್ಷ ಭುಗಿಲೆದ್ದರೆ ಭಾರತೀಯ ಪಡೆಗಳ ಆಕ್ರೋಶಕ್ಕೆ ಚೀನಾ ಚುಂಬಿ ಕಣಿವೆ ಸುಲಭವಾಗಿ ಧ್ವಂಸಗೊಳ್ಳುತ್ತದೆ.

ಚೀನಾ, ಲಡಾಖ್‍ನಲ್ಲಿ ನಡೆಸಿದ ಅತಿಕ್ರಮಣ ಕುಯುಕ್ತಿಯನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಹೀಗಾಗಿ ಹೊಸ ಸ್ಥಳಗಳತ್ತ ಪಿಎಲ್‍ಎ ಕಾಕದೃಷ್ಟಿ ಬೀರಿದೆ. ಲಡಾಖ್‍ನ ಪೂರ್ವಭಾಗ ಅಥವಾ ಪೂರ್ವ ಅರುಣಾಚಲ ಪ್ರದೇಶ ಅಥವಾ ಹಿಮಾಚಲ-ಉತ್ತರಾಖಂಡ್‍ನಲ್ಲಿರುವ ಲಿಪುಲೇಕಾ ಪಾಸ್ ಮತ್ತು ಬರಾಹೊಟಿ ಸ್ಥಳಗಳತ್ತ ನುಸುಳುವುದು ಚೀನಾದ ದುರುದ್ದೇಶವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಚೀನಾ ಸಹ ಡೋಕ್ಲಾಮ್ ಗಡಿಯಲ್ಲಿ ಭಾರೀ ಸಂಖ್ಯೆಯ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದ್ದರೂ, ಪೂರ್ಣ ಪ್ರಮಾಣದ ಯುದ್ಧದ ಗಂಡಾಂತರವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧವಾಗಿಲ್ಲ.

ಡೋಕ್ಲಾಮ್ ಮತ್ತು ಲಡಾಖ್ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಲಭಿಸಿರುವುದು ಚೀನಾ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ಭಾರತಕ್ಕೆ ಉಪದ್ರವ ನೀಡಲು ಅನ್ಯ ಮಾರ್ಗಗಳನ್ನು ಬಳಸಲು ಕುತಂತ್ರ ರೂಪಿಸುತ್ತಿದೆ. ಲಡಾಖ್‍ನಿಂದ ಅರುಣಾಚಲ ಪ್ರದೇಶದ ಉದ್ದಕ್ಕೂ ಇರುವ 4,057 ಕಿ.ಮೀ. ಪ್ರದೇಶದ ಕೆಲವು ಸ್ಥಳಗಳಲ್ಲಿ ಅತಿಕ್ರಮಣ ಮಾಡುವುದು ಚೀನಾದ ಗ್ಲೇಮ್ ಪ್ಲಾನ್. ಆ ಮೂಲಕ ಭೂತಾನ್ ಗಡಿ ಭಾಗದ ಡೋಕ್ಲಾಮ್‍ನಿಂದ ಭಾರತೀಯ ಸೇನಾಪಡೆಯು ಹಿಂದಕ್ಕೆ ಸರಿಯುವಂತೆ ಮಾಡಲು ಒತ್ತಡ ಹೇರುವ ದುರಾಲೋಚನೆ ಇದಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಸಿಕ್ಕಿಂ ಮತ್ತು ಲಡಾಖ್‍ನಲ್ಲಿ ತಗಾದೆ ತೆಗೆದಿರುವ ಚೀನಾ ಕುತಂತ್ರದಿಂದ ಎಚ್ಚೆತ್ತಿರುವ ಭಾರತೀಯ ಸೇನಾ ಪಡೆಗಳು ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳು, ಹಿಮಾಚಲಪ್ರದೇಶ, ಉತ್ತರಾಖಂಡ್ ಮತ್ತು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಚೀನಾ ಡ್ರ್ಯಾಗನ್‍ಗಳು ಒಳನುಸುಳದಂತೆ ಪಹರೆಯನ್ನು ಮತ್ತಷ್ಟು ಬಿಗಿಗೊಳಿಸಿವೆ.

Facebook Comments

Sri Raghav

Admin