ಬರ ನಿರ್ವಹಣೆಗೆ ಕೇಂದ್ರದ ಅನುದಾನ ಸಾಕಾಗಲ್ಲ : ಸಿಎಂ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

Rajanath-Sing---01

ಬೆಂಗಳೂರು, ಆ.17- ಕರ್ನಾಟಕದಲ್ಲಿ ಸತತ ನಾಲ್ಕೈದು ವರ್ಷಗಳಿಂದ ಭೀಕರ ಬರ ಪರಿಸ್ಥಿತಿ ಇದ್ದು, ಇದರ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಬೆಳೆ ನಷ್ಟಗಳಿಗೆ ಇತರೆ ರಾಜ್ಯಗಳಿಗೆ ಅನುಸಾರವಾಗಿ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರನ್ನು ಭೇಟಿ ಮಾಡಿದ ಸಿಎಂ, ಎಸ್‍ಡಿಆರ್‍ಎಫ್‍ನಡಿ 5 ವರ್ಷಗಳ ಅವಧಿಗೆ ಕರ್ನಾಟಕಕ್ಕೆ 1527 ಕೋಟಿ ರೂ.ಗಳನ್ನು ಮಾತ್ರ ನೀಡಲಾಗಿದೆ. ನಮ್ಮಂತೆ ಬರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರಕ್ಕೆ 8195 ಕೋಟಿ, ಗುಜರಾತ್‍ಗೆ 3894 ಕೋಟಿ, ತಮಿಳುನಾಡಿಗೆ 3751ಕೋಟಿ, ಆಂಧ್ರಪ್ರದೇಶಕ್ಕೆ 2430ಕೋಟಿ, ರಾಜಸ್ಥಾನಕ್ಕೆ 2153 ಕೋಟಿ ಅನುದಾನ ನೀಡಲಾಗಿದೆ. ಮಧ್ಯಪ್ರದೇಶಕ್ಕೂ ಕರ್ನಾಟಕಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎನ್‍ಡಿಆರ್‍ಎಫ್‍ನ ನಿಯಮಾವಳಿಗಳನ್ನು ಬದಲಾವಣೆ ಮಾಡಿರುವ ಬಗ್ಗೆಯೂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ 16 ವರ್ಷದಲ್ಲಿ 13 ವರ್ಷ ಬರ ಪರಿಸ್ಥಿತಿಯನ್ನೇ ಎದುರಿಸಿದ್ದೇವೆ. 2005-2010ರಲ್ಲಿ ನೆರೆ ಹಾವಳಿಯಿಂದ ಬೆಳೆ ನಷ್ಟವಾಗಿದೆ. ಉಳಿದಂತೆ 2001ರಿಂದ ಈವರೆಗೂ ನಿರಂತರ ಬರ ಇದ್ದು, ಬೆಳೆ ಹಾನಿಯಾಗಿವೆ. ಗರಿಷ್ಠ ಪ್ರಮಾಣದ ಬೆಳೆನಷ್ಟವಾಗಿದೆ. ಪ್ರಕೃತಿ ವಿಕೋಪ ಮತ್ತು ಬರ ನಿರ್ವಹಣೆಗೆ ವೈಜ್ಞಾನಿಕ ಪರಿಹಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಮೊದಲಿದ್ದ ನಿಯಮಾವಳಿಗಳ ಅನುಸಾರ ಕಳೆದ ವರ್ಷ ಕರ್ನಾಟಕದಲ್ಲಿ 164 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಹೊಸ ನಿಯಮಾವಳಿಗಳನ್ನು ಅನುಸರಿಸಿದರೆ 30 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಶೇ.50ರಷ್ಟು ಬೆಳೆ ನಷ್ಟವಾಗಿರಬೇಕು, ಶೇ.50ಕ್ಕಿಂತಲೂ ಕಡಿಮೆ ಬಿತ್ತನೆಯಾಗಿರಬೇಕು. ಭೂಮಿಯ ತೇವಾಂಶ ಶೇ.25ಕ್ಕಿಂತ ಕಡಿಮೆ ಇರಬೇಕು ಎಂಬ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಈ ನಿಯಮಾವಳಿಗಳನ್ನು ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಹಾಗಾಗಿ ಎನ್‍ಡಿಆರ್‍ಎಫ್ ನಿಯಾಮವಳಿಗಳನ್ನು ಬದಲಾವಣೆ ಮಾಡುವಾಗ ರಾಜ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin