ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ, ಆ.17- ಖಾಲಿ ಇರುವ ಸಂಪುಟದ ಮೂರು ಸ್ಥಾನಗಳ ಭರ್ತಿ, ವಿಧಾನ ಪರಿಷತ್‍ಗೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಇಂದು ಅಂತಿಮಗೊಳ್ಳಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ವರಿಷ್ಠರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಎಚ್.ಎಸ್.ಮಹದೇವ ಪ್ರಸಾದ್ ಅವರ ನಿಧನ ಹಾಗೂ ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ತುಂಬಲು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಈ ಸಂಬಂಧ ಈಗಾಗಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಯವರೊಂದಿಗೆ ಚರ್ಚೆ ನಡೆಸಲಾಗಿದೆ. ಇಂದು ಪಕ್ಷದ ಉಸ್ತುವಾರಿ ಕೆ.ವೇಣುಗೋಪಾಲ್ ಅವರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಅದೇ ರೀತಿ ವಿಧಾನ ಪರಿಷತ್‍ಗೆ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಬಗ್ಗೆಯೂ ಕೂಡ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಕುರುಬ ಸಮುದಾಯದ ಪ್ರಭಾವಿ ನಾಯಕ ಎಚ್.ಎಂ.ರೇವಣ್ಣ, ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಮುಖಂಡರಾದ ಎ.ಬಿ.ಮಾಲಕರೆಡ್ಡಿ, ಪರಿಶಿಷ್ಟ ಸಮುದಾಯದ ಆರ್.ಬಿ.ತಿಮ್ಮಾಪುರ್ ಅಥವಾ ನರೇಂದ್ರ ಸ್ವಾಮಿ ಅವರು ಸಚಿವ ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ.
ಸಂಪುಟದಲ್ಲಿ ತೆರವಾಗಿದ್ದ ಸ್ಥಾನಗಳನ್ನು ಅದೇ ಸಮುದಾಯದವರಿಗೆ ನೀಡಬೇಕೆಂದು ತೀರ್ಮಾನವಾಗಿದ್ದ ಹಿನ್ನೆಲೆಯಲ್ಲಿ ಮಹದೇವ ಪ್ರಸಾದ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಕಾಂಗ್ರೆಸ್‍ನ ಹಿರಿಯ ಮುಖಂಡ, ಸಚಿವ ಸ್ಥಾನ ವಂಚಿತರಾಗಿದ್ದ ಎ.ಬಿ.ಮಾಲಕರೆಡ್ಡಿ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ಪರಮೇಶ್ವರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಆರ್.ಬಿ.ತಿಮ್ಮಾಪುರ್ ಮತ್ತು ನರೇಂದ್ರಸ್ವಾಮಿಯವರ ನಡುವೆ ಪೈಪೋಟಿ ನಡೆದಿದೆ. ಕುರುಬ ಸಮುದಾಯದ ಮುಖಂಡರಾದ ಎಚ್.ವೈ.ಮೇಟಿ ಅವರಿಂದ ತೆರವಾಗಿದ್ದ ಸ್ಥಾನವನ್ನು ಎಚ್.ಎಂ.ರೇವಣ್ಣ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.
ಕುರುಬ ಸಮಾಜದ ಪ್ರಭಾವಿ ಮುಖಂಡರಾಗಿದ್ದ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಕುರುಬ ಪ್ರಭಾವಿ ನಾಯಕರಿಗೆ ಸಂಪುಟದಲ್ಲಿ ಮಣೆ ಹಾಕಲು ನಿರ್ಧರಿಸಿರುವುದರಿಂದ ಸಚಿವ ರೇವಣ್ಣ ಅವರಿಗೆ ಸಂಪುಟ ಸ್ಥಾನ ದೊರೆಯುವ ಸಾಧ್ಯತೆ ಇದೆ.

ವಿಧಾನ ಪರಿಷತ್: ವಿಮಲಾಗೌಡ ಅವರ ನಿಧನದಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು, ಮಹಿಳೆಯಿಂದ ತೆರವಾಗಿರುವ ಸ್ಥಾನಕ್ಕೆ ಮಹಿಳೆಯೊಬ್ಬರಿಗೇ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿದೆ. ಹಿರಿಯ ಮುಖಂಡರಾದ ಮಾಜಿ ಸಚಿವೆ ರಾಣಿ ಸತೀಶ್ ಅವರ ಹೆಸರು ಕೇಳಿಬಂದಿದೆ. ಅಲ್ಪಸಂಖ್ಯಾತ ಮುಖಂಡ ಮುಖ್ಯಮಂತ್ರಿಯವರ ಆಪ್ತರಾದ ಸಿ.ಎಂ.ಇಬ್ರಾಹಿಂ ಅವರ ಹೆಸರು ಕೂಡ ಕೇಳಿಬಂದಿದ್ದು, ಈ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದಲ್ಲದೆ, ಡಿ.ಕೆ.ಶಿವಕುಮಾರ್ ಆಪ್ತ ವಿನಯ್ ಕಾರ್ತಿಕ್, ಜಿ.ಸಿ.ಚಂದ್ರಶೇಖರ್, ಮಾಜಿ ಮೇಯರ್ ರಾಮಚಂದ್ರಪ್ಪ ಮುಂತಾದವರು ಪರಿಷತ್ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ.

Facebook Comments

Sri Raghav

Admin