ವಾಲಿದ್ದ ಐದಂತಸ್ತಿನ ಕಟ್ಟಡ ತೆರವು ವಿಳಂಬ, ಬೀದಿಗೆ ಬಂತು ಅಕ್ಕಪಕ್ಕದವರ ಬದುಕು

ಈ ಸುದ್ದಿಯನ್ನು ಶೇರ್ ಮಾಡಿ

Building-Bengaluru

ಬೆಂಗಳೂರು, ಆ.17- ನಗರದಲ್ಲಿ ಸುರಿದ ಮಳೆಗೆ ಈಜಿಪುರದಲ್ಲಿ ವಾಲಿದ್ದ ಐದು ಅಂತಸ್ತಿನ ಕಟ್ಟಡ ತೆರವು ಕಾರ್ಯ ಇಂದೂ ಮುಂದುವರಿದಿದೆ. ಆದರೆ, ಕಟ್ಟಡ ಮತ್ತೆ ಒಂದು ಅಡಿ ವಾಲಿದ್ದು, ಯಾವುದೇ ಕ್ಷಣದಲ್ಲೂ ಬೀಳುವ ಸ್ಥಿತಿ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕಟ್ಟಡ ತೆರವು ಕಾರ್ಯವನ್ನು ಬಿಬಿಎಂಪಿ ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಿದ್ದು, ನಿನ್ನೆ 5ನೆ ಮಹಡಿಯನ್ನು ಮಿಷನ್ ಇಲ್ಲದೆ ಕೇವಲ ಹಾರೆ, ಸುತ್ತಿಗೆಯಿಂದ ಒಡೆಯಲು ಪ್ರಾರಂಭಿಸಿದರು.
ಅಕ್ಕಪಕ್ಕದ ನಿವಾಸಿಗಳು ಈ ಕಟ್ಟಡವನ್ನು ಶೀಘ್ರ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ಇಂದು ಮಿಷನ್ ಬಳಸಿ ಕಟ್ಟಡ ಒಡೆಯಲಾಗುತ್ತಿದೆ. ಆದರೆ, ಕೇವಲ 5 ಮಂದಿ ಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಸಂಜೆವರೆಗೆ ಕಾರ್ಯ ನಡೆದರೂ 5ನೆ ಮಹಡಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇಷ್ಟರಲ್ಲಿ ಕಟ್ಟಡ ಇನ್ನೂ ಒಂದು ಅಡಿ ವಾಲಿರುವುದರಿಂದ ಯಾವ ಕ್ಷಣದಲ್ಲಿ ಧರೆಗುರುಳಲಿದೆಯೋ ಎಂಬ ಆತಂಕದಲ್ಲಿ ಅಕ್ಕಪಕ್ಕದ ನಿವಾಸಿಗಳು ಇದ್ದಾರೆ.

ಕಟ್ಟಡ ತೆರವುಗೊಳಿಸುವ ವೇಳೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಕ್ಕಪಕ್ಕದಲ್ಲಿ ಬಾಡಿಗೆ ಮನೆಗಳಲ್ಲಿದ್ದ ನಾಲ್ಕೈದು ಕುಟುಂಬಗಳನ್ನು ಮಾತ್ರ ಎನ್‍ಜಿವಿ ಕ್ಲಬ್‍ಗೆ ಸ್ಥಳಾಂತರ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ, ವಾಲಿರುವ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಎರಡು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿಯೇ ಇಲ್ಲ ಶಕೀರಾ ಬೇಗಂ, ಚಾಂದ್ ಪಾಷ ಕುಟುಂಬಗಳಲ್ಲಿ ಒಟ್ಟು 8 ಮಂದಿ ಸದಸ್ಯರಿದ್ದು, ಬೀದಿಗೆ ಬಿದ್ದಂತಾಗಿದೆ. ಈ ಕುಟುಂಬಗಳು ತಾವಾಗಿಯೇ ಹೊರಗೆ ಬಂದಿದ್ದು, ಸಾಮಗ್ರಿಗಳು ಮಾತ್ರ ಒಳಗೆ ಇವೆ. ಇತ್ತ ಊಟವೂ ಇಲ್ಲದೆ, ಅತ್ತ ಒಳ ಹೋಗಲೂ ಆಗದೆ ಎರಡೂ ಕುಟುಂಬದವರು ಪರಿತಪಿಸುತ್ತಿದ್ದಾರೆ.

ಇಷ್ಟಾದರೂ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಬಂದು ತಮ್ಮ ಅಳಲನ್ನು ಆಲಿಸಿಲ್ಲ ಎಂದು ಈ ಎರಡೂ ಕುಟುಂಬದವರು ದೂರಿದ್ದಾರೆ. ನಮಗೆ ಕನಿಷ್ಟ ಒಳಗೆ ಹೋಗಿ ನಿತ್ಯ ಬಳಕೆಯ ವಸ್ತುಗಳನ್ನಾದರೂ ಹೊರತರಲು ಅವಕಾಶ ಮಾಡಿಕೊಡಿ. ಎರಡು ದಿನಗಳಿಂದ ಬಯಲಲ್ಲಿದ್ದೇವೆ. ನಮಗೆ ಯಾವುದೇ ನೆರವು ಸಿಕ್ಕಿಲ್ಲ. ಏನೂ ಮಾಡಲು ತೋಚುತ್ತಿಲ್ಲ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವರನ್ನು ಮನೆಗೆ ಹೋಗಲು ಬಿಟ್ಟಿಲ್ಲ. ಬಡಪಾಯಿಗಳು ಇನ್ನೂ ರಸ್ತೆಯಲ್ಲೇ ಇದ್ದಾರೆ.  ಇದೆಲ್ಲದರ ನಡುವೆಯೇ ಕಟ್ಟಡದ ತೆರವು ಕಾರ್ಯ ನಿಧಾನಗತಿಯಲ್ಲಿ ಸಾಗಿದೆ. ಮತ್ತೇನಾದರೂ ಮಳೆ ಬಂದರೆ ಯಾವುದೇ ಕ್ಷಣದಲ್ಲಾದರೂ ಕಟ್ಟಡ ಬೀಳುವುದು ಖಂಡಿತ.

Facebook Comments

Sri Raghav

Admin