ಶಾಸಕ ಎಸ್.ಟಿ.ಸೋಮಶೇಖರ್’ರಿಂದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಗುಳುಂ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01

ಬೆಂಗಳೂರು, ಆ.17- ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು 100 ಕೋಟಿ ರೂ. ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಈ ಸಂಬಂಧ ಸಿಬಿಐ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ 630 ಪುಟಗಳ ದಾಖಲೆ ಬಿಡುಗಡೆ ಮಾಡಿದ ಅವರು, ಕರ್ನಾಟಕ ವಸತಿ ಮಹಾಮಂಡಲಕ್ಕೆ ಎಸ್.ಟಿ.ಸೋಮಶೇಖರ್ ಕಾನೂನು ಬಾಹಿರವಾಗಿ ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಹಿಂಬಾಲಕರ ಮೂಲಕ ನಕಲಿ ಗೃಹ ನಿರ್ಮಾಣ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಾವಿರಾರು ಬೆಂಬಲಿಗರನ್ನು ಸದಸ್ಯರನ್ನಾಗಿ ಮಾಡಿ, ಕಾರ್ಯಚಟುವಟಿಕೆ ನಡೆಸಿ ಅವ್ಯವಹಾರ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ. ನಕಲಿ ಸಹಕಾರ ಸಂಘಗಳಲ್ಲಿರುವ ತಮ್ಮ ಬೆಂಬಲಿಗರ ಮತಗಳನ್ನು ಅಕ್ರಮವಾಗಿ ಪಡೆದು ನಿರಂತರವಾಗಿ ವಸತಿ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ 16 ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ ಎಂದು ಹೇಳಿದ ಅವರು, ವಸತಿ ಮಹಾಮಂಡಲ ವತಿಯಿಂದ ತನ್ನ ಸದಸ್ಯರಿಗೆಂದೇ ಬಡಾವಣೆ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ತಾವರೆಕೆರೆ ಹೋಬಳಿಯ ಚುಂಚನಕಟ್ಟೆ ಗ್ರಾಮದಲ್ಲಿ 2006ರಲ್ಲಿ ವಸತಿ ಮಹಾಮಂಡಲ ವತಿಯಿಂದ 1 ಮತ್ತು 2ನೆ ಹಂತದಲ್ಲಿ 2480 ನಿವೇಶನಗಳನ್ನು ಹಂಚುವುದಾಗಿ ಘೋಷಣೆ ಮಾಡಿ 2014ರೊಳಗಾಗಿ ಬಡಾವಣೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಬಿಎಂಆರ್‍ಡಿಎ ಅನುಮತಿ ಮತ್ತು ನಕ್ಷೆ ಮಂಜೂರಾತಿ ಪಡೆದುಕೊಳ್ಳದೆ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

180 ಎಕರೆ ಪೈಕಿ ಶೇ.95ರಷ್ಟು ಸರ್ಕಾರಿ ಜಮೀನಾಗಿದೆ. ಸರ್ಕಾರಿ ಜಮೀನುಗಳಿಗೆ ಉಳುಮೆದಾರರ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಮ್ಯುಟೇಷನ್ ರಿಜಿಸ್ಟರ್‍ಗಳನ್ನು ತಯಾರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಉಳುಮೆಗಾರರಿಂದ 15 ಲಕ್ಷ ರೂ. ಬೆಲೆಗೆ ಜಮೀನು ಪಡೆದು ಅದೇ ಜಮೀನನ್ನು ವಸತಿ ಮಹಾಮಂಡಲಕ್ಕೆ 85 ರಿಂದ 90 ಲಕ್ಷಕ್ಕೆ ಮಾರಾಟ ಮಾಡಿಸುವ ಮೂಲಕ 135 ಕೋಟಿಯಷ್ಟು ಲಾಭ ಪಡೆದಿದ್ದಾರೆ. 180 ಎಕರೆ ಜತೆಗೆ ಗೋಮಾಳ, ಗುಂಡುತೋಪು, ಸರ್ಕಾರಿ ಹಳ್ಳ, ಸ್ಮಶಾನ, ರಾಜಕಾಲುವೆ, ಕೆರೆ, ಕಲ್ಲು, ಗುಡ್ಡ ಸೇರಿ 100 ಕೋಟಿ ಬೆಲೆಬಾಳುವ 80 ಎಕರೆಯಷ್ಟು ಸರ್ಕಾರಿ ಜಮೀನನ್ನು ಕಬಳಿಸಲಾಗಿದ್ದು, ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೆ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಅಧ್ಯಯನ ಪ್ರವಾಸದ ಹೆಸರಿನಲ್ಲಿ ವಸತಿ ಮಹಾಮಂಡಲದ 10 ಕೋಟಿ ರೂ.ಗೂ ಹೆಚ್ಚು ಹಣವನ್ನು ಕಬಳಿಸಿದ್ದಾರೆ ಎಂದು ಅವರು ಹೇಳಿದರು. ಕೂಡಲೇ ವಸತಿ ಮಹಾಮಂಡಲವನ್ನು ಸೂಪರ್ ಸೀಡ್ ಮಾಡಬೇಕು. ಮಹಾಮಂಡಲದ ಸಾವಿರಾರು ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ವಸತಿ ಮಹಾಮಂಡಲದ ಅಧ್ಯಕ್ಷರಾದ ಎಸ್.ಟಿ.ಸೋಮಶೇಖರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್‍ಕೃಷ್ಣ, ತಿಬ್ಬೇಗೌಡ, ಲಕ್ಷ್ಮಣ್ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ, ಬಿಎಂಟಿಎಫ್‍ಗೆ ದೂರು ಸಲ್ಲಿಸಲಾಗಿದೆಯಲ್ಲದೆ ಎಸಿಎಂಎಂ ನ್ಯಾಯಾಲಯದಲ್ಲೂ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin