ನನ್ನ ವಿರುದ್ಧ ಇಂತಹ ನೂರು ಕೇಸ್ ಹಾಕಿದರೂ ಹೆದರಲ್ಲ : ಸಿಎಂ ವಿರುದ್ಧ ಬಿಎಸ್ವೈ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Siddaramaiah

ಬೆಂಗಳೂರು, ಆ.18- ನನ್ನ ವಿರುದ್ಧ ಇಂತಹ ನೂರು ಪ್ರಕರಣ ದಾಖಲಿಸಿದರೂ ನಾನು ಬಗ್ಗುವುದಿಲ್ಲ. ಹೆದರುವುದಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ನನ್ನ ಮೇಲೆ ಕೇಸು ದಾಖಲಿಸುವ ಮೂಲಕ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಗನ ಜಾತಕಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಐಟಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ರಮೇಶ್‍ಜಾರಕಿ ಹೊಳಿ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಕೂಡಲೇ ಅವರಿಬ್ಬರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು. ಅವರಿಬ್ಬರು ನಿರಪರಾಧಿಗಳು ಎಂದು ಸಾಬೀತಾದರೆ ನಂತರ ಮತ್ತೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಿ ನಮ್ಮದೇನು ತಕರಾರು ಇಲ್ಲ. ಸಧ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಎದುರಿಸುತ್ತಿರುವ ಅವರಿಬ್ಬರಿಂದ ರಾಜೀನಾಮೆ ಪಡೆದು ತನಿಖೆಗೆ ಹಾದಿ ಸುಗಮಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಆರೋಪ ಎದುರಿಸುತ್ತಿರುವವರು ಸಚಿವ ಸ್ಥಾನದಲ್ಲಿದ್ದರೆ ಅವರ ವಿರುದ್ಧ ತನಿಖೆ ನ್ಯಾಯಯುತವಾಗಿ ನಡೆಯುವ ಸಾಧ್ಯತೆ ಇಲ್ಲ. ಆದ್ದರಿಂದ ಅವರು ರಾಜೀನಾಮೆ ಕೊಡಲೇಬೇಕು. ಸಿದ್ದರಾಮಯ್ಯ ಅವರು ಅವರಿಬ್ಬರ ರಾಜೀನಾಮೆ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಂದು ಹೋದ ಮೇಲೆ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿದೆ. ತಾವು ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ದೃಢಪಟ್ಟ ನಂತರ ಅವರಲ್ಲಿ ಹತಾಶೆ ಉಂಟಾಗಿದ್ದು, ಈ ರೀತಿ ಬಿಜೆಪಿ ನಾಯಕರ ವಿರುದ್ಧ ಸುಳ್ಳು ಎಫ್‍ಐಆರ್ ದಾಖಲಿಸುವಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರ ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಬಿಜೆಪಿ ನಾಯಕರ ವಿರುದ್ಧ ಅವರು ಏನು ಮಾಡಿದರೂ ಯಾವುದೇ ಆರೋಪಗಳನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ. ಸುಳ್ಳು ಕೇಸುಗಳು ಬಿದ್ದು ಹೋಗುತ್ತವೆ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಇನ್ನೂ ಎಷ್ಟು ಪ್ರಕರಣಗಳನ್ನು ದಾಖಲಿಸಿದರೂ ನಮಗೆ ಯಾವುದೇ ಭಯವಿಲ್ಲ. ನಾನು ಅವುಗಳನ್ನೆಲ್ಲಾ ಜಯಿಸಿ ಹೊರ ಬರುತ್ತೇನೆ. ಸತ್ಯಕ್ಕೆ ಎಂದಿದ್ದರೂ ಗೆಲುವು ಎಂದು ಅವರು ಹೇಳಿದರು.

ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಬಿಜೆಪಿ ನಾಯಕರು, ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ವಿರುದ್ಧ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Facebook Comments

Sri Raghav

Admin