ಮಕ್ಕಳಿಗೆ ವಿಷವುಣಿಸಿ ತಾವೂ ಸಾವಿಗೆ ಶರಣಾದ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

poison--suicide

ದಾವಣಗೆರೆ,ಆ.18- ಪುಟ್ಟ ಮಕ್ಕಳಿಬ್ಬರಿಗೆ ವಿಷವುಣಿಸಿದ ದಂಪತಿ ತಾವೂ ವಿಷ ಸೇವಿಸಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಚೆನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ. ತಂದೆ 38 ವರ್ಷದ ಪಾಲಾಕ್ಷ ತಾಯಿ 28ವರ್ಷದ ಶಶಿಕಲಾ ಮಕ್ಕಳಾದ ಕಾರ್ತಿಕ್ (8) ಹಾಗೂ ವರ್ಷಿಣಿ(5) ಮೃತಪಟ್ಟ ದುರ್ದೈವಿಗಳು. ನಿನ್ನೆರಾತ್ರಿ ಮಲಗಿದ ಮೇಲೆ ಈ ಘಟನೆ ನಡೆದಿದ್ದು, ಬೆಳಗ್ಗೆ ಸಂಬಂಧಿಕರು ಮನೆಗೆ ಬಂದಾಗ ಈ ದಾರುಣ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಈ ದುರ್ಘಟನೆಯಿಂದ ಇಡೀ ಬೆಳಲಗೆರೆ ಗ್ರಾಮವೇ ದಿಗ್ಭ್ರಾಂತಿಗೊಂಡಿದ್ದು, ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಈ ದುರಂತ ಸಾವಿಗೆ ಅಣ್ಣತಮ್ಮಂದಿರ ನಡುವಿನ ಆಸ್ತಿ ಜಗಳ ಕಾರಣವಿರಬಹುದು ಎಂದು ಹೇಳಲಾಗಿದೆ.

ಅಲ್ಲಲ್ಲಿ ಕೈ ಸಾಲ ಮಾಡಿಕೊಂಡಿದ್ದ ಪಾಲಾಕ್ಷ ಅವರು ಸಾಲ ತಿರಿಸಲು ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿದ್ದಾರೆ. ಈ ವೇಳೆ ಸಹೋದರರ ನಡುವೆ ಜಗಳವಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದರಿಂದ ಮನನೊಂದ ಪಾಲಾಕ್ಷ ದಂಪತಿ ಪುಟ್ಟಮಕ್ಕಳಿಗೆ ವಿಷ ಕುಡಿಸಿ ತಾವು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಬಸವಾಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಸುದ್ದಿ ತಿಳಿಯುತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್‍ಪಿ ಮಂಜುನಾಥ್ ಕೆ.ಗಂಗಲ್, ಬಸವಾಪಟ್ಟಣ ಪಿಎಸ್‍ಐ ಮೇಘರಾಜ್ ಮತ್ತು ಸಿಬ್ಬಂದಿ ಬೆಳಲಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ನಂತರವಷ್ಟೇ ಖಚಿತ ಮಾಹಿತಿಗಳು ಲಭ್ಯವಾಗಬೇಕಾಗಿದೆ.

Facebook Comments

Sri Raghav

Admin