ಯಾವುದೇ ಕ್ಷಣದಲ್ಲೂ ಕೇಂದ್ರ ಸಂಪುಟ ವಿಸ್ತರಣೆ, ಕರ್ನಾಟಕಕ್ಕೆ ಕನಿಷ್ಠ 3 ಸಚಿವ ಸ್ಥಾನ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Warning--01

ಬೆಂಗಳೂರು, ಆ.18- ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಕಸರತ್ತು ನಡೆಸುತ್ತಿದ್ದರೆ, ಅತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಸಂಪುಟದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ನೀಡಲು ಮುಂದಾಗಿದ್ದಾರೆ. ಯಾವುದೇ ಕ್ಷಣದಲ್ಲೂ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಈ ಬಾರಿ ಕನಿಷ್ಠ ಮೂರು ಸಚಿವ ಸ್ಥಾನ ಸಿಗುವ ಲಕ್ಷಣಗಳು ಗೋಚರಿಸಿವೆ.

2018ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೋದಿಯವರು ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಅತಿಯಾಗಿ ಪ್ರತಿಪಾದಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮೋದಿ ಕೂಡ ಅನುಸರಿಸುತ್ತಿದ್ದು, ರಾಜ್ಯ ಸರ್ಕಾರಕ್ಕೆ ಈ ಮೂಲಕ ತಿರುಗೇಟು ನೀಡಲಿದ್ದಾರೆ.
ಈಗಾಗಲೇ ಸಂಪುಟಕ್ಕೆ ತೆಗೆದುಕೊಳ್ಳಲಿರುವ ಸಂಸದರ ಜಾತಕವನ್ನು ರಹಸ್ಯವಾಗಿ ತರಿಸಿಕೊಂಡಿರುವ ಮೋದಿ ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಪ್ರದೇಶವಾರು ಜಾತಿ ಸಮೀಕರಣದ ಮೂಲಕವೇ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಿದ್ದಾರೆ.

ಪ್ರಮುಖವಾಗಿ ಉತ್ತರ ಕರ್ನಾಟಕ , ಕರಾವಳಿ ಹಾಗೂ ಮಧ್ಯ ಕರ್ನಾಟಕ ಇಲ್ಲವೇ ಬೆಂಗಳೂರಿನಿಂದ ಓರ್ವ ಸಂಸದರಿಗೆ ಸಚಿವ ಸ್ಥಾನ ದಕ್ಕುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಹಿಂದ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಈ ಸಮುದಾಯಕ್ಕೆ ಸಿಂಹಪಾಲು ನೀಡಿದ್ದಾರೆ. ಇದೀಗ ಮೋದಿ ಕೂಡ ಇದೇ ಸಮೀಕರಣದ ಮೂಲಕ ಸಂಪುಟ ವಿಸ್ತರಣೆ ಮಾಡಲಿದ್ದಾರೆ.

ರೇಸ್‍ನಲ್ಲಿ ಯಾರ್ಯಾರು..? :

ಬಹು ದಿನಗಳ ನಂತರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವುದು ಹಾಗೂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗೂಟದ ಕಾರು ಏರಲು ಹಲವು ಹೆಸರುಗಳು ಕೇಳಿ ಬರುತ್ತಿವೆ. ಮುಖ್ಯವಾಗಿ ಬಿಜೆಪಿ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯ, ವಾಲ್ಮೀಕಿ, ಹಿಂದುಳಿದ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ಸಿಗುವ ಸಂಭವವಿದೆ.

ಉತ್ತರ ಕರ್ನಾಟಕದಿಂದ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ (ಲಿಂಗಾಯತ ಸಮುದಾಯ) , ವಾಲ್ಮೀಕಿ ಸಮುದಾಯದಿಂದ ಬಳ್ಳಾರಿ ಸಂಸದ ಶ್ರೀರಾಮುಲು, ಒಕ್ಕಲಿಗ ಸಮುದಾಯದಿಂದ ಚಿಕ್ಕಮಗಳೂರು -ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್, ಹಿಂದುಳಿದ ವರ್ಗಗಳ ಸಮುದಾಯದಿಂದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ.

ಈ ಹಿಂದೆ ಸಂಪುಟ ವಿಸ್ತರಣೆಯಾಗುವ ಸಂದರ್ಭದಲ್ಲಿ ಸಾಮಾನ್ಯವಾಗಿ ಭಾರೀ ಲಾಬಿ ನಡೆಯುತ್ತಿತ್ತು. ಸಂಸದರು ತಮ್ಮ ತಮ್ಮ ಗಾಡ್ ಫಾದರ್‍ಗಳ ಮೂಲಕ ಒತ್ತಡ ಹಾಕಿ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದರು. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಇಂತಹ ಲಾಬಿಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದಾರೆ. ಯಾವುದೇ ಒಬ್ಬ ಸಂಸದನನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಾದರೆ ಅವರ ಪೂರ್ವಾಪರ, ಹಿನ್ನೆಲೆ , ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಜನರೊಂದಿಗೆ ಹೊಂದಿರುವ ಒಡನಾಟ, ಕ್ಷೇತ್ರದಲ್ಲಿ ಸಂಸದರ ಬಗ್ಗೆ ಇರುವ ಅಭಿಪ್ರಾಯ ಎಲ್ಲವನ್ನೂ ರಹಸ್ಯವಾಗಿ ವರದಿ ತೆಗೆದುಕೊಂಡ ನಂತರವೇ ಸಂಪುಟ ಸೇರ್ಪಡೆಗೆ ಹಸಿರು ನಿಶಾನೆ ತೋರುತ್ತಾರೆ.

ಶೋಭಾ ಕರಂದ್ಲಾಜೆ , ಶ್ರೀರಾಮುಲು, ಪ್ರಭಾಕರ್ ಕೋರೆ, ಪಿ.ಸಿ.ಮೋಹನ್ ಯಡಿಯೂರಪ್ಪ ಮೂಲಕ ಲಾಬಿ ನಡೆಸಿದರೆ, ನಳಿನ್‍ಕುಮಾರ್ ಕಟೀಲ್ ಸಂಘ ಪರಿವಾರದ ನಾಯಕರ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಕ್ಕೆ ಮೂರು ದಿನಗಳ ಭೇಟಿ ಕೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಥಳೀಯ ನಾಯಕರು ಹಾಗೂ ಆರ್‍ಎಸ್‍ಎಸ್ ನಾಯಕರ ಜತೆ ಇದೇ ವಿಷಯವಾಗಿ ಮಾತುಕತೆ ನಡೆಸಿದ್ದಾರೆ.  ಅಂತಿಮವಾಗಿ ಮೋದಿ ಕೃಪೆ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಮಂತ್ರಿ ಭಾಗ್ಯ ಲಭಿಸುತ್ತದೆ.

Facebook Comments

Sri Raghav

Admin