ಸ್ಪೇನ್‍ನಲ್ಲಿ ಭಯೋತ್ಪಾದಕರ ದಾಳಿಗೆ 20 ಸಾವು : ಮಹಾ ವಿಧ್ವಂಸಕ್ಕೆ ಸಜ್ಜಾಗಿದ್ದ 5 ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

20-Killed--014

ಬಾರ್ಸಿಲೋನಾ, ಆ.18- ಸ್ಪೇನ್‍ನ ಬಾರ್ಸಿಲೋನಾ ಮತ್ತು ಕ್ಯಾಂಬ್ರಿಲ್ಸ್ ನಗರಗಳ ಮೇಲೆ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ 20 ಮಂದಿ ಹತರಾಗಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೇ ವೇಳೆ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ಐವರು ಉಗ್ರರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಬಾರ್ಸಿಲೋನಾ ಮತ್ತು ಅಲ್ಲಿಂದ 120 ಕಿ.ಮೀ. ದೂರದಲ್ಲಿರುವ ಸಮುದ್ರ ತಟದ ಜನಪ್ರಿಯ ನಗರ ಕ್ಯಾಂಬ್ರಿಲ್ಸ್‍ನಲ್ಲಿ ವ್ಯಾನ್ ಮತ್ತು ಕಾರುಗಳನ್ನು ರಭಸವಾಗಿ ಪ್ರವಾಸಿಗರ ಮೇಲೆ ನುಗ್ಗಿಸಿ ಭಯೋತ್ಪಾದಕರು ನಡೆಸಿದ ಭೀಕರ ಕೃತ್ಯದಲ್ಲಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಈ ಪ್ರತ್ಯೇಕ ದಾಳಿಗಳಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಬಾಂಬ್‍ಗಳನ್ನು ಹೊಂದಿದ್ದ ಬೆಲ್ಟ್‍ಗಳನ್ನು ಧರಿಸಿದ್ದ ಐವರು ಭಯೋತ್ಪಾದಕರನ್ನು ಕ್ಯಾಂಬ್ರಿಲ್ಸ್ ನಗರದಲ್ಲಿ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದಂತಾಗಿದೆ.  ಈ ದಾಳಿ ಹೀಂದೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಕೈವಾಡ ಇರುವುದು ಸಾಬೀತಾಗಿದೆ.   ಸ್ಪೇನ್ ಪ್ರಜೆಗಳು ಮತ್ತು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ. ಉಗ್ರರ ಕುಕೃತ್ಯದಲ್ಲಿ ಭಾರತೀಯರು ಮೃತಪಟ್ಟಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ವಿಶ್ವಸಂಸ್ಥೆ, ಟ್ರಂಪ್, ಮೋದಿ ಖಂಡನೆ :

ಬಾರ್ಸಿಲೋನಾ ಮತ್ತು ಕ್ಯಾಂಬ್ರಿಲ್ಸ್ ನಗರಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಇದೊಂದು ಬರ್ಬರ ಮತ್ತು ಹೇಡಿತನದ ಕೃತ್ಯ ಎಂದು ಹೇಳಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್, ಈ ಕೃತ್ಯ ಎಸಗಿದವರು ಮತ್ತು ಇದಕ್ಕೆ ಹಣಕಾಸು ಪೂರೈಸಿದವರ ವಿರುದ್ಧ ಉಗ್ರಕ್ರಮ ಕೈಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.  ಉಗ್ರರ ದಾಳಿಯಲ್ಲಿ ನಾಗರಿಕರು ಸಾವಿಗೀಡಾಗಿರುವ ಕೃತ್ಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ನಾಯಕರು ಉಗ್ರವಾಗಿ ಖಂಡಿಸಿದ್ಧಾರೆ.

Facebook Comments

Sri Raghav

Admin