ಅಮಿತ್ ಶಾ ಕೊಟ್ಟ ಏಟಿಗೆ ರಾಜ್ಯ ಬಿಜೆಪಿ ನಾಯಕರ ಬಾಯಿ ಬಂದ್..!

ಈ ಸುದ್ದಿಯನ್ನು ಶೇರ್ ಮಾಡಿ

BJP--001

ಬೆಂಗಳೂರು, ಆ.19- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೊಟ್ಟ ಏಟಿಗೆ ರಾಜ್ಯ ನಾಯಕರು ಎಷ್ಟರ ಮಟ್ಟಿಗೆ ತತ್ತರಿಸಿದ್ದಾರೆ ಎಂದರೆ ಅಪ್ಪಿತಪ್ಪಿಯೂ ಮಾಧ್ಯಮಗಳಿಗೆ ಹೇಳಿಕೆ ನೀಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಹೀಗಾಗಿ ಬಹುತೇಕ ನಾಯಕರ ಬಾಯಿ ಬಂದ್ ಆಗಿದ್ದು, ಎಲ್ಲರೂ ಗಪ್‍ಚುಪ್ ಎನ್ನುವಂತಾಗಿದೆ. ಅಪ್ಪಿತಪ್ಪಿಯೂ ಯಾವ ನಾಯಕರೂ ತುಟಿ ಬಿಚ್ಚದೆ ಎಲ್ಲವನ್ನು ಮೌನದಿಂದಲೇ ನಿಭಾಯಿಸುತ್ತಿದ್ದಾರೆ.  ಕೇವಲ ಒಂದೇ ವಾರದಲ್ಲಿ ಅಮಿತ್ ಶಾ ನೀಡಿದ ಶಾಕಿಗೆ ಬಹುತೇಕ ನಾಯಕರು ಏನೇ ಕೇಳಿದರೂ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಇಲ್ಲದ ಉಸಾಬಾರಿ ನಮಗೇಕೆ ಎಂಬುದು ಬಹುತೇಕ ನಾಯಕರ ಅಳಲು. ಯಾವುದೇ ಕಾರಣಕ್ಕೂ ವರಿಷ್ಠರ ಅನುಮತಿ ಇಲ್ಲದೆ ಯಾರೊಬ್ಬರೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಅಮಿತ್ ಶಾ ತಾಕೀತು ಮಾಡಿದ್ದರು. ಇದನ್ನು ಎಷ್ಟರ ಮಟ್ಟಿಗೆ ಬಿಜೆಪಿ ನಾಯಕರು ಪಾಲಿಸುತ್ತಿದ್ದಾರೆಂದರೆ ಬಾಯ್ಬಿಟ್ಟು ಮಾತನಾಡಿದರೆ ನನ್ನ ಮೇಲೆ ರಾಷ್ಟ್ರೀಯ ನಾಯಕರು ಕಣ್ಣಿಡಬಹುದೆಂದು ಹೆದರಿಕೊಳ್ಳುತ್ತಿದ್ದಾರೆ.

ಈ ಮೊದಲು ಪಕ್ಷದ ವಲಯದಲ್ಲಿ ಒಂದಿಷ್ಟು ಗೌಪ್ಯ ಮಾಹಿತಿಗಳನ್ನು ಪಕ್ಷದಲ್ಲಿದ್ದ ಕೆಲ ನಾಯಕರು ವ್ಯವಸ್ಥಿತವಾಗಿ ಸೋರಿಕೆ ಮಾಡುತ್ತಿದ್ದರು. ಪದಾಧಿಕಾರಿಗಳ ನೇಮಕಾತಿ ನಂತರ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈಶ್ವರಪ್ಪ ನಡುವೆ ಉಂಟಾಗಿದ್ದ ಮನಸ್ಥಾಪ ಬೀದಿಗೆ ಬರಲು ಈ ಮಧ್ಯವರ್ತಿಗಳೇ ಕಾರಣ ಎಂಬುದು ಬಹುತೇಕರ ಆರೋಪವಾಗಿತ್ತು. ಪಕ್ಷದಲ್ಲಿ ಈ ರೀತಿ ಸುದ್ದಿ ಸೋರಿಕೆ ಮಾಡುತ್ತಿದ್ದ ಕೆಲವರ ಮೇಲೆ ವರಿಷ್ಠರಿಗೂ ರಹಸ್ಯವಾಗಿ ದೂರು ನೀಡಲಾಗಿತ್ತು. ಕಳೆದ ಶನಿವಾರ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಸುದ್ದಿ ಸೋರಿಕೆ ಮಾಡುತ್ತಿದ್ದ ಶೂರರನ್ನು ತರಾಟೆಗೆ ತೆಗೆದುಕೊಂಡರು.

ಸವಾಲು ಹಾಕಿದ ಅಮಿತ್ ಶಾ:

ಕಳೆದ ಶನಿವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಬಳಿಕ ಮಾಜಿ ಶಾಸಕರು, ಮಾಜಿ ಸಚಿವರ ಜತೆ ಅಮಿತ್ ಶಾ ಸಮಾಲೋಚನೆ ಸಭೆ ನಡೆಸಿದರು. ಈ ವೇಳೆ ಅವರು ಇಲ್ಲಿ ನಡೆಯುವ ಒಂದೇ ಒಂದು ವಿಷಯವೂ ಮಾಧ್ಯಮಗಳಿಗೆ ಹೋಗ ಬಾರದು. ಸಭೆಯಲ್ಲಿ ಯಾರ್ಯಾರು ಭಾಗವಹಿಸಿದ್ದೀರಿ ಎಂಬುದಕ್ಕೆ ನನ್ನ ಬಳಿ ಪಟ್ಟಿ ಇದೆ. ಒಂದು ವೇಳೆ ಇಲ್ಲಿ ನಡೆದಿರುವ ಮಾಹಿತಿ ಸೋರಿಕೆಯಾದರೆ ನಿಮ್ಮನ್ನು ಬಿಟ್ಟು ಬೇರೆ ಯಾರು ಕೊಡಲು ಸಾಧ್ಯವಿಲ್ಲ.

ಅದು ಹೇಗೆ ಸುದ್ದಿ ಸೋರಿಕೆಯಾಗುತ್ತದೆ ಎಂಬುದನ್ನು ನಾನು ನೋಡಿಯೇ ಬಿಡುತ್ತೇನೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸವಾಲುಹಾಕಿದ್ದರು.
ಪಕ್ಷದ ಶಿಸ್ತು ಉಲ್ಲಂಘಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದು, ಪದೇ ಪದೇ ಅಶಿಸ್ತು ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು, ನಿಯೋಜನೆಗೊಂಡಿರುವವರು ಮಾತ್ರ ಸಮಯ, ಸಂದರ್ಭಕ್ಕನುಗುಣವಾಗಿ ಮಾಧ್ಯಮಗಳ ಮುಂದೆ ಹೋಗಬೇಕು ಎಂದು ಸೂಚಿಸಿದ್ದರು.  ಇದರಿಂದ ಬೆಚ್ಚಿ ಬಿದ್ದಿರುವ ಬಹುತೇಕ ನಾಯಕರು ಬಾಯಿ ಬಿಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಪಕ್ಷದೊಳಗೆ ಉಂಟಾಗಿರುವ ಈ ದಿಢೀರ್ ಬದಲಾವಣೆ ಹಲವರಿಗೆ ಅಚ್ಚರಿ ತಂದಿದ್ದರೆ, ಸುದ್ದಿ ಸೋರಿಕೆ ಶೂರರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin