ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರಾಜ್ಯದ 6,000 ಶಿಕ್ಷಕರು…!

ಈ ಸುದ್ದಿಯನ್ನು ಶೇರ್ ಮಾಡಿ

Teachers--1

ನವದೆಹಲಿ/ಬೆಂಗಳೂರು, ಆ.19- ದೇಶದಲ್ಲಿ ಬೋಧನಾ ಸಿಬ್ಬಂದಿಯ ಕೊರತೆ ಎದುರಾಗಿರುವಾಗಲೇ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸೇವೆಯಲ್ಲಿರುವ ಶಿಕ್ಷಕರು (ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು) ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿರುವ ಸುಮಾರು 6,000 ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಡಿಪ್ಲೊಮಾ ಇನ್ ಎಜುಕೇಷನ್ (ಡಿ.ಎಡ್) ಅರ್ಹತೆಯನ್ನು ಪೂರ್ಣಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.  ಎಲ್ಲಾ ಶಿಕ್ಷಕರು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‍ಐಒಎಸ್) ಸಂಸ್ಥೆಯಿಂದ ಮುಕ್ತ ಮತ್ತು ದೂರಶಿಕ್ಷಣದ ಮೂಲಕ 31ನೇ ಮಾರ್ಚ್ 2019ರ ಒಳಗೆ ಈ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ.

ನಿಗದಿತ ಅವಧಿಯೊಳಗೆ ಅಗತ್ಯ ತರಬೇತಿ ಪಡೆಯಲು ವಿಫಲವಾಗುವ ಯಾವುದೇ ಶಿಕ್ಷಕ, ಶಿಕ್ಷಕಿಯರನ್ನು ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಗತ್ಯ ಕನಿಷ್ಠ ವೃತ್ತಿಪರ ವಿದ್ಯಾರ್ಹತೆ ಪಡೆಯಲು ಇದು ಶಿಕ್ಷಕರಿಗೆ ನೀಡುತ್ತಿರುವ ಕೊನೆಯ ಅವಕಾಶವಾಗಿದೆ ಎಂದು ತಿಳಿಸಲಾಗಿದೆ.
ಸೇವೆಯಲ್ಲಿರುವ ಎಲ್ಲ ಶಿಕ್ಷಕರು ಡಿ.ಎಡ್ ವಿದ್ಯಾರ್ಹತೆ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಗಳು ಶಾಲೆಗಳಿಗೆ ಅಂತಿಮ ಗಡುವಿನ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಶಿಕ್ಷಕರು ಈ ವಿದ್ಯಾರ್ಹತೆ ಹೊಂದುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅನಿತಾ ಕಾರ್ವಾಲ್ ತಿಳಿಸಿದ್ಧಾರೆ. ನಾವು ಈ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ರಾಜ್ಯಾದ್ಯಂತ ಇರುವ ಎಲ್ಲ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ಧಾರೆ.

Facebook Comments

Sri Raghav

Admin