ಚೆನ್ನಾಗಿರುವ ವಧುವಿಗೆ ಡಿಮ್ಯಾಂಡ್ ಜಾಸ್ತಿ : ಸಿ.ಎಂ.ಇಬ್ರಾಹಿಂ ಹೀಗೆ ಹೇಳಿದ್ದೇಕೆ…?

ಈ ಸುದ್ದಿಯನ್ನು ಶೇರ್ ಮಾಡಿ

Cm-Ibrahim--01

ಬೆಂಗಳೂರು, ಆ.19- ಮಧುಮಗಳು ಚೆನ್ನಾಗಿದ್ದರೆ ಮದುವೆಯಾಗಲು ಗಂಡುಗಳು ಹೆಚ್ಚು ಬರುತ್ತವೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸಿಗ ಸಿ.ಎಂ.ಇಬ್ರಾಹಿಂ ತಮಗೆ ಜೆಡಿಎಸ್ ಸೇರುವ ಆಹ್ವಾನ ಬಂದಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸೇರಲು ಮುಂದಾಗಿದ್ದಕ್ಕಾಗಿ ವಿಧಾನಪರಿಷತ್‍ಗೆ ಟಿಕೆಟ್ ನೀಡಲಾಯಿತೆ ಎಂಬ ಪ್ರಶ್ನೆಗೆ ಮತ್ತೆ ಮಾರ್ಮಿಕವಾಗಿ ಉತ್ತರ ಕೊಟ್ಟ ಇಬ್ರಾಹಿಂ ಅವರು, ಮಧುಮಗಳು ಚೆನ್ನಾಗಿದ್ದರೆ. ಗಂಡುಗಳು ಹೆಚ್ಚು ಬರುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲ. ವಿಧಾನಪರಿಷತ್ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನನ್ನದು ಹಳೆಯ ಗೆಳೆತನ. ಅವರೊಂದಿಗೆ ಯಾವುದೇ ಮನಸ್ತಾಪ ಇಲ್ಲ. ಆಗಾಗ್ಗೆ ನನಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತಿರುತ್ತಾರೆ. ಉಪಮುಖ್ಯಮಂತ್ರಿ ಆಗಿದ್ದಕ್ಕಿಂತಲೂ ಈಗ ಅವರು ಸಿಎಂ ಆಗಿರುವುದರಿಂದ ಅವರಿಗೆ ಹೆಚ್ಚು ಜವಾಬ್ದಾರಿ ಇವೆ. ಎಲ್ಲರನ್ನೂ ತೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಇದೆ. ಕಾಂಗ್ರೆಸನ್ನು ಮರಳಿ ಅಧಿಕಾರಕ್ಕೆ ತರುವ ಸಂಕಲ್ಪವಾಗಿದೆ. ಈ ಸಂದರ್ಭದಲ್ಲಿ ಯಾವುದೇ ಆಫರ್‍ಗಳು ಬಂದರೂ ನಾನು ವಿಚಲಿತನಾಗಿಲ್ಲ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ವಿಧಾನಪರಿಷತ್ ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದೇನೆ. ಸೋಮವಾರ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಇಂದು ಕೆಪಿಸಿಸಿ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ್ದೇನೆ. ಇಬ್ರಾಹಿಂ ಅವರು ಹಿರಿಯ ನಾಯಕರು. ಅನುಭವಿಗಳು, ಅವರಿಗೆ ಜವಾಬ್ದಾರಿ ನೀಡಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿತ್ತು. ಅದನ್ನು ಗೌರವಿಸಿ ಕಾಂಗ್ರೆಸ್ ಅವಕಾಶ ನೀಡಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಪರಮೇಶ್ವರ ಅವರ ಜತೆ ಇಬ್ರಾಹಿಂ ಮಾತುಕತೆ ನಡೆಸಿದರು.

Facebook Comments

Sri Raghav

Admin