ಪ್ಲೀಸ್,ಇದೊಂದು ಸಾರಿ ಕ್ಷಮಿಸಿ ಬಿಡಿ : ಬೆಂಗಳೂರಿಗರಲ್ಲಿ ಜನಪ್ರತಿನಿಧಿಗಳ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Rain-Bengalueru--01

ಬೆಂಗಳೂರು, ಆ.19- ನಗರದಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಸಮಸ್ಯೆಗಳನ್ನು 10 ದಿನಗಳೊಳಗೆ ಪರಿಹರಿಸುತ್ತೇವೆ. ಇನ್ನು ಮುಂದೆ ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುತ್ತೇವೆ. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇದೊಂದು ಬಾರಿ ಕ್ಷಮಿಸಿ ಬಿಡಿ ಎಂದು ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಹಾಗೂ ಮೇಯರ್ ಜಿ.ಪದ್ಮಾವತಿ ನಾಗರಿಕರಲ್ಲಿ ಇಂದಿಲ್ಲಿ ಮನವಿ ಮಾಡಿದರು.  ಕಳೆದ ಐದು ದಿನಗಳಿಂದ ನಗರದಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಇಂದು ಸಚಿವರು ಮತ್ತು ಮೇಯರ್ ಪದ್ಮಾವತಿ ಅವರು ನಗರ ಪ್ರದಕ್ಷಿಣೆ ನಡೆಸಿದರು.

Rain--00144

ಮಳೆ ಅನಾಹುತ ಸಂಭವಿಸಿದ ಜೆ.ಸಿ.ರೋಡ್, ಶಾಂತಿನಗರ, ಕೋರಮಂಗಲ, ಆನೆಪಾಳ್ಯ, ಅವನಿಶೃಂಗೇರಿ, ಸರಸ್ವತಿಪುರಂ, ಯಡಿಯೂರು, ಅರಕೆರೆ ಮತ್ತಿತರ ಪ್ರದೇಶಗಳಲ್ಲಿ ಈ ದಂಡು ಪ್ರದಕ್ಷಿಣೆ ನಡೆಸಿತು.  ಜೆ.ಸಿ.ರಸ್ತೆಯ ಕುಂಬಾರಗುಂಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಅವರು ರಾಜಕಾಲುವೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.  ಕಾಮಗಾರಿ ಮಾಡಬೇಕಾದರೆ ಮೋರಿಗೆ ಅಡ್ಡಲಾಗಿ ಸ್ಯಾಂಡ್‍ಬ್ಯಾಗ್ ಹಾಕಬೇಕು. ಯಾವುದೇ ಕಾರಣಕ್ಕೂ ಮೋರಿ ನೀರು ರಸ್ತೆಗೆ ಬರದಂತೆ ಎಚ್ಚರ ವಹಿಸಬೇಕೆಂದು ತಾಕೀತು ಮಾಡಿದರು.

ನಂತರ ಡಬ್ಬಲ್‍ರೋಡ್‍ಗೆ ಆಗಮಿಸಿ ರಾಜಕಾಲುವೆ ತಡೆಗೋಡೆ ಒಡೆದು ರಸ್ತೆಗಳು ಜಲಾವೃತಗೊಂಡಿರುವುದನ್ನು ಹಾಗೂ ಬಸ್ ನಿಲ್ದಾಣದಲ್ಲಿ ನೀರು ನಿಂತಿರುವುದನ್ನು ಕಂಡು ಕೆಂಡಾಮಂಡಲರಾದ ಜಾರ್ಜ್ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಕಳೆದ 50 ವರ್ಷಗಳಿಂದ ಇಲ್ಲಿ ಸಮಸ್ಯೆ ಇದೆ. ನೀವು ಏನು ಮಾಡುತ್ತಿದ್ದೀರಿ. ಇನ್ನು ಮುಂದೆ ಮಳೆಯಾದರೂ ನೀರು ರಸ್ತೆಗೆ ಬರಬಾರದು ಎಂದು ಎಇಇ ರೇಣುಕಾ ಅವರಿಗೆ ಕ್ಲಾಸ್ ತೆಗೆದುಕೊಂಡರು.
ರೀಟೇನಿಂಗ್ ವಾಲ್ ಆಗಿದೆ ಸಾರ್ ಎಂದು ಫೈಲ್ ತೋರಿಸಲು ಮುಂದಾದ ಎಇಇ ಅವರನ್ನು ಕೆಲಸ ಫೈಲ್‍ನಲ್ಲಿ ಇರುತ್ತಾ, ಮೊದ್ಲು ಹೇಳಿದ ಕೆಲಸ ಮಾಡ್ರಿ. ಸಮಸ್ಯೆ ನಿವಾರಿಸಿ ಎಂದು ತಪರಾಕಿ ಹಾಕಿದರು.

ಶಾಂತಿನಗರ ಬಸ್ ನಿಲ್ದಾಣದಲ್ಲಿ ನಿಂತಿರುವ ನೀರನ್ನು ಈ ಕೂಡಲೇ ತೆರವುಗೊಳಿಸಬೇಕು. ಹಣ ಎಷ್ಟಾದರೂ ಪರವಾಗಿಲ್ಲ. ಅದನ್ನು ಸರ್ಕಾರ ಭರಿಸುತ್ತದೆ. ಇನ್ನು ಮುಂದೆ ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು. ನಗರದಲ್ಲಿ 127 ವರ್ಷಗಳಿಂದ ಈ ಸಮಸ್ಯೆ ಇದೆ. ಒಂದೇ ಬಾರಿಗೆ ಎಲ್ಲಾ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ. ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿಗಳು ಹಣ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ತಕ್ಷಣದ ಅನಾಹುತಗಳನ್ನು ಯಾವ ರೀತಿ ತಪ್ಪಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. 10 ದಿನಗಳೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಂಡು ಹಂತ ಹಂತವಾಗಿ ಎಲ್ಲಾ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.

ಎಲ್ಲೆಲ್ಲಿ ಕೆಲಸ ಆಗುತ್ತಿಲ್ಲವೋ ಅಲ್ಲಿ ಕೆಲಸ ಮಾಡಿಸುತ್ತೇವೆ. ಸೋಮಾರಿತನ ಪ್ರದರ್ಶಿಸುವ ಅಧಿಕಾರಿಗಳು, ಇಂಜನಿಯರ್‍ಗಳು ಮತ್ತು ಕಾಂಟ್ರಾಕ್ಟ್‍ರ್‍ಗಳ ವಿರುದ್ಧ ಹಾಗೂ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರ್ಜ್ ಎಚ್ಚರಿಕೆ ನೀಡಿದರು.
ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ನಿವಾರಣೆಗೆ ಎಸ್‍ಟಿಪಿ ಕಡ್ಡಾಯಗೊಳಿಸುವುದು ಅನಿವಾರ್ಯ. ಶೀಘ್ರದಲ್ಲೇ ಎಸ್‍ಟಿಪಿ ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸದ್ಯ ಉಂಟಾಗಿರುವ ಸಮಸ್ಯೆ ನಿವಾರಣೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಕೆಲಸ ಮಾಡದಿದ್ದರೆ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಎಂದು ಸ್ಥಳೀಯ ಅಧಿಕಾರಿಗಳ ಮೊಬೈಲ್ ನಂಬರ್‍ಗಳನ್ನು ನಾಗರಿಕರಿಗೆ ನೀಡಿದರು.  ಮಳೆಯಿಂದಾಗಿ ದ್ವೀಪದಂತಾಗಿದ್ದ ಎಸ್‍ಟಿಬೆಡ್ ಪ್ರದೇಶಕ್ಕೆ ಸಚಿವರು ಆಗಮಿಸಿದಾಗ ಸ್ಥಳೀಯರು ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು.  ಈ ಸಂದರ್ಭದಲ್ಲಿ ಜಾರ್ಜ್ ಪರವಾಗಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ನಿಮಗೆ ಆದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಎಸ್‍ಟಿಬೆಡ್‍ನಲ್ಲಿ ರಾಜಕಾಲುವೆ ಕೆಲಸ ಮಾಡಲು ಮಣ್ಣು ತೆಗೆದ ಪರಿಣಾಮ ನಿಮ್ಮ ಪ್ರದೇಶಕ್ಕೆ ನೀರು ನುಗ್ಗಿದೆ. ಇನ್ನು ಮುಂದೆ ರಾಜಕಾಲುವೆ ಕಾಮಗಾರಿಯನ್ನು ಸ್ವತಃ ನಾನೇ ಪರಿಶೀಲಿಸುತ್ತೇನೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ನಿತ್ಯ ಬಂದು ಹೋಗುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಸ್ಥಳೀಯರಿಗೆ ಅಭಯ ನೀಡಿದರು. ಕಳೆದ ಐದು ದಿನಗಳಿಂದ ಸುರಿದ ಮಳೆಯಿಂದ ಆದ ಅನಾಹುತ ಕುರಿತಂತೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ ಮೇಯರ್ ಜಿ.ಪದ್ಮಾವತಿ ಅವರು, ಭವಿಷ್ಯದಲ್ಲಿ ಮಳೆ ಅನಾಹುತ ಸಂಭವಿಸದಂತೆ ಸರ್ಕಾರ ಮತ್ತು ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಇದುವರೆಗೂ 825 ಕಿ.ಮೀ. ರಾಜಕಾಲುವೆ ದುರಸ್ತಿ ಪಡಿಸಿದ್ದೇವೆ. ಸಾರಿಗೆ ಸಚಿವರು ಖುದ್ದು ನಿಂತು ಕೆಲಸ ಮಾಡಿಸುತ್ತಿದ್ದಾರೆ. ನಿಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುತ್ತೇವೆ. ನಡೆಯುವಾಗ ಎಡುವುವುದು ಮಾಮೂಲು. ಹಾಗಾಗಿ ನಾವು ಎಡವಿದ್ದೇವೆ. ನಮ್ಮ ತಪ್ಪನ್ನು ಮನ್ನಸಿ, ಮುಂದೆ ಇಂತಹ ಅನಾಹುತ ಆಗುವುದಿಲ್ಲ ಎಂದು ಮೇಯರ್ ಭರವಸೆ ನೀಡಿದರು.

Facebook Comments

Sri Raghav

Admin