ಯಡಿಯೂರಪ್ಪನವರೇ ಮತ್ತೆ ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲಿ : ಸಿಎಂ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Siddaramaiah-

ಬೆಂಗಳೂರು, ಆ.19- ನನ್ನನ್ನು ಜೈಲಿಗೆ ಕಳಿಸುವುದಿರಲಿ, ಈಗಾಗಲೇ ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗೋದನ್ನು ತಪ್ಪಿಸಿಕೊಳ್ಳಲಿ. ಆ ಮೇಲೆ ನನ್ನನ್ನು ಕಳುಹಿಸಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆಗೆ ಒಳಗಾಗಿರುವ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಅವರ ಆರೋಪ, ಟೀಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ವಸಂತನಗರದಲ್ಲಿ ಸರ್ಕಾರಿ ಗ್ರೂಪ್ ಎ ಅಧಿಕಾರಿಗಳಿಗಾಗಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪ ಮತ್ತಿತರ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಇನ್ನಷ್ಟು ಹತಾಶೆಗೊಳಗಾದ ಬಿಎಸ್‍ವೈ ಸೇರಿದಂತೆ ಅನೇಕ ನಾಯಕರು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಯಾವ ಪರಿಣಾಮವೂ ಆಗಲಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೊದಲ ದರ್ಜೆಯ ಅಧಿಕಾರಿಗಳಿಗೆ ಇಲ್ಲಿ 4ರಿಂದ 5 ವಸತಿ ಗೃಹಗಳಿದ್ದವು. ಅವುಗಳನ್ನು ಕೆಡವಿ 16 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪೊಲೀಸರಿಗೂ ಕೂಡಾ ಆದಷ್ಟು ಶೀಘ್ರ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹೊಸಕಟ್ಟಡಗಳು ಸುರಕ್ಷಿತವಾಗಿವೆ. ಹಳೇ ಕಟ್ಟಡಗಳು ಶಿಥಿಲವಾಗಿವೆ. ಕಾಲ ಕಳೆದಂತೆಲ್ಲಾ ಅವು ಬೀಳುವುದು ಸಹಜ. ಅವುಗಳನ್ನು ತೆರವುಗೊಳಿಸಲು ಹಾಗೂ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಕಟ್ಟಡಗಳ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರ ಜತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಾಗಿದೆ. ಯಾವಾಗ ವಿಸ್ತರಣೆ ಮಾಡುತ್ತೇವೆ, ಯಾರಿಗೆ ಗೃಹ ಖಾತೆ ನೀಡಲಾಗುತ್ತದೆ ಎಂಬುದನ್ನು ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ಮಾಡುವಾಗ ನಿಮಗೆ ಹೇಳುತ್ತೇನೆ ಎಂದು ಸಿಎಂ ತಿಳಿಸಿದರು.

ಕಟ್ಟಡದ ವಿವರ:

ನಗರದ ಹೃದಯ ಭಾಗವಾಗಿರುವ ವಸಂತನಗರದಲ್ಲಿ 11.50ಕೋಟಿ ರೂ. ವೆಚ್ಚದಲ್ಲಿ 16 ಪ್ಲಾಟ್‍ಗಳ ವಸತಿ ಗೃಹ ನಿರ್ಮಿಸಲಾಗಿದೆ.
ಪ್ರಥಮ ದರ್ಜೆ ಅಧಿಕಾರಿಗಳಿಗಾಗಿ ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಲಾಗಿದೆ. ಪ್ರತಿ ಕಟ್ಟಡ 140 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. 2016 ಡಿಸೆಂಬರ್‍ನಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ವಾಹನ ನಿಲುಗಡೆಗೆ ನೆಲ ಮಹಡಿ, ಜತೆಗೆ ನಾಲ್ಕು ಮಹಡಿಗಳ ಕಟ್ಟಡ ನಿರ್ಮಿಸಲಾಗಿದೆ. ಇದಲ್ಲದೆ, ವಸತಿ ಗೃಹಗಳ ಜತೆಗೆ 16 ಸೇವಕ ವಸತಿ ಗೃಹಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಸಚಿವರಾದ ರೋಷನ್ ಬೇಗ್, ಎಚ್.ಆಂಜನೇಯ, ಸಂಸದ ಪಿ.ಸಿ.ಮೋಹನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಠಿಆ, ಹಿರಿಯ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್, ಸ್ಥಳೀಯ ಪಾಲಿಕೆ ಸದಸ್ಯ ಸಂಪತ್‍ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin