ರಂಗ`ಭೀಷ್ಮ’ ಏಣಗಿ ಬಾಳಪ್ಪ ಮತ್ತೊಮ್ಮೆ ಹುಟ್ಟಿ ಬಾರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Enagai-Balappa--01

ದೇಹವೆಂದರೆ ಓ ಮನುಜ
ಮೂಳೆ ಮಾಂಸಗಳ ತಡಿಕೆ ನಿಜ
ಜನುಮದ ಜೋಡಿ ಈ ಹಾಡು ನೋಡಿದವರಿಗೆ ಬಿಳಿ ಧೋತರ-ಅಂಗಿ, ಕೈಯಲ್ಲಿ ಏಕದಾರಿ ಹಿಡಿದು ಗೆಜ್ಜೆ ನಿನಾದದೊಂದಿಗೆ ಹಾಡುತ್ತ ಶಿವರಾಜಕುಮಾರ್‍ಗೆ ಬದುಕಿನ ಪಾಠ ಹೇಳುವ ವ್ಯಕ್ತಿತ್ವ ಇಡೀ ಚಿತ್ರವನ್ನೇ ಆವರಿಸಿತ್ತು. ಆ ಚಿತ್ರದ ಆ ಪಾತ್ರ ಎಂದೂ ಮರೆಯಲಾಗದು.ಅಂತಹ ವ್ಯಕ್ತಿ ಏಣಗಿ ಬಾಳಪ್ಪ ನಮ್ಮನ್ನಗಲಿದ್ದಾರೆ. ಸವದತ್ತಿ ತಾಲೂಕಿನ ಪುಟ್ಟ ಹಳ್ಳಿ ಏಣಗಿ. ಕರ್ನಾಟಕ ವೃತ್ತಿ ರಂಗಭೂಮಿ ಚರಿತ್ರೆಯಲ್ಲಿ ಏಣಗಿ ಬಾಳಪ್ಪನವರದು ದೊಡ್ಡ ಹೆಸರು.ಅದು ಇಪ್ಪತ್ತನೆಯ ಶತಮಾನದ ಮೂರನೆಯ ದಶಕ.ಆಗೆಲ್ಲ ನಮ್ಮ ಹಳ್ಳಿಗಳಲ್ಲಿ ಆಟ-ಬಯಲಾಟಗಳು ನಡೆಯುತ್ತಿದ್ದು ಸಾಮಾನ್ಯ.ಇದಕ್ಕೆ ಏಣಗಿ ಗ್ರಾಮವೂ ಹೊರತಾಗಿರಲಿಲ್ಲ.ಊರಲ್ಲಿ ನಡೆಯುತ್ತಿದ್ದ ದೊಡ್ಡಾಟ, ಸಣ್ಣಾಟ ತಾಲೀಮಿನ ನಿರಂತರ ನೋಟ ಈ ಬಾಳಪ್ಪನಲ್ಲಿ ಅಭಿನಯದ ಗೀಳು ಮೂಡಿಸುವಲ್ಲಿ ಪ್ರಭಾವ ಬೀರಿತು.

ಏಣಗಿಯ ಲೋಕೂರ ಕರಿಬಸಮ್ಮ-ಬಾಳಮ್ಮ ಎಂಬ ದಂಪತಿಯ ಮಗನಾಗಿ ಬಾಳಪ್ಪ ಹುಟ್ಟಿದ್ದು 1914 ರಲ್ಲಿ. ಓದಿದ್ದು ನಾಲ್ಕನೆಯ ತರಗತಿಯವರೆಗೆ ಮಾತ್ರ.ಮೂರು ವರ್ಷದವರಿದ್ದಾಗ ಇವರ ತಂದೆಯ ನಿಧನ ಜೀವನ ನೌಕೆಗೊಂದು ದೊಡ್ಡ ಪೆಟ್ಟಾಯಿತು.ನಾಟಕ ಹಾಡುಗಾರಿಕೆಯ ಗೀಳು ಹೆಚ್ಚಾಗಿದ್ದ ಇವರಿಗೆ ಸಹೋದರ ಬಸವಂತಪ್ಪ ಎಲ್ಲ ದೃಷ್ಟಿಯಿಂದಲೂ ಪ್ರೋತ್ಸಾಹಿಸಿದರು. ತಾಯಿ ಆಸರೆಯಾದರು.ಹೀಗಾಗಿ ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಂದು ಜರುಗುವ ನಾಟಕಗಳಲ್ಲಿ ಬಾಳಪ್ಪನವರ ಪಾತ್ರವಿರುವುದು ಸಹಜವಾಯಿತು.

3

8 ನೇ ವರ್ಷಕ್ಕೆ ರಂಗ ಪ್ರವೇಶಿಸಿದ ಕಲಾವಿದ. ಚಟುವಟಿಕೆಗೆ ಆಗ ಚಿಕ್ಕೋಡಿ ಶಿವಲಿಂಗಸ್ವಾಮಿಗಳು ತಮ್ಮ ನಾಟಕಗಳಿಂದ ಜನಪ್ರೀತಿ ಗಳಿಸಿದ್ದರು.
ನಟ.ನಾಟಕಕಾರ. ನಾಟ್ಯಾಚಾರ್ಯ, ಮಂಡಳಿಯ ಒಡೆಯರೆನಿಸಿದ್ದ ಶಿವಲಿಂಗಸ್ವಾಮಿಗಳ ಶಿಷ್ಯತ್ವ ಸಂಪಾದಿಸಿ ಬಾಳಪ್ಪ ಅವರ ಗರಡಿಯನ್ನು ಸೇರಿದ್ದು 1928 ರಲ್ಲಿ.ಅದೇ ಸಂದರ್ಭ ಅನಿರೀಕ್ಷಿತ ಘಟನೆ ಬಾಳಪ್ಪನವರ ಬದುಕಿಗೆ ತಿರುವು ನೀಡಿತು.ಒಂದು ದಿನ ಗಣಪತಿಯ ಪಾತ್ರಧಾರಿಯೊಬ್ಬ ಗೈರು ಹಾಜರಾದ ಗಳಿಗೆ ಇವರಿಗೆ ಆ ಅವಕಾಶ ದೊರೆಯಿತು. ಆ ಸಂದರ್ಭ ಬಳಸಿಕೊಂಡ ಬಾಳಪ್ಪನವರು ಮುಂಬರುವ ದಿನಗಳಲ್ಲಿ ಓರ್ವ ಖ್ಯಾತ ಕಲಾವಿದನಾಗುವ ಭರವಸೆ ಮೂಡಿಸಿದರು.

5

ಮುಂದೆ ಶಿವಲಿಂಗಸ್ವಾಮಿಗಳ ಒಡನಾಟ ಅವರನ್ನು ಹೆಚ್ಚು ಹೆಚ್ಚು ನಾಟಕಗಳಲ್ಲಿ ಅಭಿನಯಿಸುವಂತೆ ಮಾಡಿದ್ದು ಈಗ ಇತಿಹಾಸ. ತಮ್ಮ 25 ನೆಯ ವಯಸ್ಸಿನಲ್ಲಿ ಕಲಾವೈಭವ ನಾಟ್ಯ ಸಂಘ ಬೆಳಗಾವಿ ಹೆಸರಿನಲ್ಲಿ ನಾಟಕ ಕಂಪನಿ ಸ್ಥಾಪನೆ ಮಾಡಿದರು. ಒಳ್ಳೆಯ ಸಂಗೀತಗಾರರೂ ಆಗಿದ್ದ ಇವರು ಗವಾಯಿಗಳ ಮೂಲಕ ಹೆಚ್ಚಿನ ಸಂಗೀತಾಭ್ಯಾಸ ಕೂಡ ಮಾಡಿದ್ದರು. 1930 ರಿಂದ 1983 ರ ವರೆಗೆ ಸುಮಾರು 50 ವರ್ಷಕ್ಕೂ ಹೆಚ್ಚುಕಾಲ ಕರ್ನಾಟಕ- ಮಹಾರಾಷ್ಟ್ರಗಳಲ್ಲಿ ಇವರ ನೂರಾರು ನಾಟಕಗಳು ಪ್ರದರ್ಶಿತಗೊಂಡು ಜನಮಾನಸದಲ್ಲಿ ಗೌರವಾನ್ವಿತ ಸ್ಥಾನ ಕಲ್ಪಿಸಿಕೊಟ್ಟವು.

6

ಏಣಗಿ ಬಾಳಪ್ಪನವರ ಅಭಿನಯದ ವಿಶೇಷತೆಯೆಂದರೆ ಸ್ತ್ರೀ ಪಾತ್ರಗಳು ಮತ್ತು ಬಸವಣ್ಣವರ ಪಾತ್ರ. ಬಹಳಷ್ಟು ನಾಟಕಗಳಲ್ಲಿ ಇವರದು ಸ್ತ್ರೀ ಪಾತ್ರ. ಹೇಮರಡ್ಡಿ ಮಲ್ಲಮ್ಮ.ವೀರರಾಣಿ ಕಿತ್ತೂರ ಚನ್ನಮ್ಮ.ರಾಣಿ ರುದ್ರಮ್ಮ.ಚಲೇಜಾವ್. ಸ್ತ್ರೀ ಮುಂತಾದ ನಾಟಕಗಳಲ್ಲಿ ಅವರ ಸ್ತ್ರೀ ಅಭಿನಯ ಅಮೋಘ, ಅನನ್ಯ. ಅವರ ಬಸವೆಶ್ವರರ ಪಾತ್ರವಂತೂ ಅಪಾರ ಖ್ಯಾತಿ ಗಳಿಸಿತು.

7

ಮಾವ ಬಂದ್ನಪ್ಪೋ ಮಾವ ನಾಟದಲ್ಲಿ ಚನ್ನಪ್ಪಗೌಡನಾಗಿ,ದೇವರ ಮಗು ನಾಟಕದಲ್ಲಿ ಕೇಶವರಾವ ಆಗಿ,ಶಾಲಾ ಮಾಸ್ತರ ನಾಟಕದಲ್ಲಿ ನೀತಿವಂತ ಶಿಕ್ಷಕನಾಗಿ,ಗೋರಾ ಕುಂಬಾರದ ಗೋರಾ,ಕುಂಕುಮದಲ್ಲಿ ಆಶ್ವಿನಿಯಾಗಿ, ಶ್ರೀ ಪದ್ಮಾವತಿ ಮಾತಾ, ಷಹಜಾನ್ ದ ದಾರಾ.ಗೋಪಿಚಂದ್ ದ ಗೋಪಿಚಂದನಾಗಿ, ಅತ್ತಿಗೆ ನಾಟಕದ ಗುಂಡಪ್ಪನಾಗಿ,ರಾಜಯೋಗಿ ನಾಟಕದ ಸಾಗರನಾಗಿ, ಹಳ್ಳಿ ಹುಡುಗಿಯ ಭಗವಂತನಾಗಿ ಹೀಗೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಆರು ದಶಕಗಳ ಸುದೀರ್ಘವಾದ ನಟನಾ ಜೀವನದಲ್ಲಿ ಪೌರಾಣಿಕೈತಿಹಾಸಿಕ,ಸಾಮಾಜಿಕ ಹೀಗೆ ಎಲ್ಲ ಬಗೆಯ ನಾಟಕಗಳಲ್ಲಿ ನಾಯಕ, ನಾಯಕಿ, ಪೋಷಕ, ಹಾಸ್ಯ ಮೊದಲಾಗಿ ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.

8

ಗೌರವರ್ಣದ ಸಾಧಾರಣ ಮೈಕಟ್ಟು ಹೊಂದಿದ್ದ ಬಾಳಪ್ಪನವರು ರಂಗಭೂಮಿಯ ಪಾವಿತ್ರ್ಯವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು.1955 ರಲ್ಲಿ ಎಸ್.ಎಂ.ಜೋಶಿ ಅವರಿಂದ ಸಂಕಲನಗೊಂಡ ಜಗಜ್ಯೋತಿ ಬಸವೇಶ್ವರ ನಾಟಕ ಅವರ ಜೀವನದ ಮೈಲುಗಲ್ಲು. ಆ ಪಾತ್ರದ ಅವರ ಅಭಿನಯ ಭಾವುಕತೆ ಪ್ರೇಕ್ಷಕರನ್ನು ಭಕ್ತಿ ತುಂದಿಲರನ್ನಾಗಿಸಿತು. ಅಂತೆಯೇ ಅವರಿಗೆ ನಾಟ್ಯಭೂಷಣ ಬಿರುದು ಬಂತು. ಇವರ ಕಲಾಪ್ರೌಢಿಮೆಗಾಗಿ 1973 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ,1976 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,1956 ರಲ್ಲಿ ನವಲಗುಂದ ಸ್ವಾಮಿಗಳಿಂದ ನಾಟ್ಯಭೂಷಣ ಪ್ರಶಸ್ತಿ,1970 ರಿಂದ 1994 ರ ಅವಧಿಯಲ್ಲಿ ನಾಟಕ ಅಕಾಡಮಿ ಸದಸ್ಯತ್ವ. 1992-94 ರಲ್ಲಿ ಭಾರತ ಸರ್ಕಾರದ ದಕ್ಷಿಣವಲಯ ಭಾರತ ಸಂಸ್ಕøತಿ ಅಕಾಡಮಿ ಸದಸ್ಯತ್ವ. 1979 ರಲ್ಲಿ ಹುಬ್ಬಳ್ಳಿಯ ಮೂರುಸಾವಿರಮಠದ ಜಗದ್ಗುರುಗಳಿಂದ ನಾಟ್ಯಗಂಧರ್ವ, ಮಹಾರಾಷ್ಟ್ರದ ಬಸವತತ್ವ ಸಮಿತಿಯ ವತಿಯಿಂದ ಬಸವತತ್ವಭೂಷಣ 1995 ರಲ್ಲಿ ಕರ್ನಾಟಕ ಸರ್ಕಾರದ ಗುಬ್ಬೀವೀರಣ್ಣ ಪ್ರಶಸ್ತಿ.

2

1995 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ.2005 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ನಾಡೋಜ ಗೌರವ ಪ್ರಶಸ್ತಿ,2006 ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.2007 ರಲ್ಲಿ ಆಳ್ವಾಸ್ ನುಡಿಸಿರಿ ಗೌರವ.2007 ರಲ್ಲಿ ಝೀ ಕನ್ನಡ ವಾಹಿನಿಯ ಝೀ ಗೌರವ ಪ್ರಶಸ್ತಿ, 2010 ರಲ್ಲಿ ನಾಗನೂರು ರುದ್ರಾಕ್ಷಿಮಠದ ಬೆಳಗಾವಿಯ ಸಮಾಜಸೇವಾ ರತ್ನ ಪ್ರಶಸ್ತಿ, 2011 ಬಸವ ವೇದಿಕೆ ಬೆಂಗಳೂರಿನ ಬಸವಶ್ರೀ ಪ್ರಶಸ್ತಿ,2012 ರಲ್ಲಿ ಕರ್ನಾಟಕ ರಂಗತಂಡಗಳ ಒಕ್ಕೂಟ ಹಾಗೂ ರಂಗ ಜಾಗೃತಿ ಪರಿಷತ್ತು ಬೆಂಗಳೂರು ಇವರಿಂದ ರಂಗಭಂಡಾರಿ ಪ್ರಶಸ್ತಿ.

2012 ರ ಚಂದನ ದೂರದರ್ಶನದ ಚಂದನ ಪ್ರಶಸ್ತಿ.2013 ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಗೌರವ.2014 ತೋಂಟದಾರ್ಯ ಸಂಸ್ಥಾನಮಠ ಗದಗ ಇವರಿಂದ ಜನ್ಮಶತಮಾನೋತ್ಸವ ಸನ್ಮಾನ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದವರು ಇದೇ ವರ್ಷ 9-3-2017 ರಂದು ಏಣಗಿಗೆ ಬಂದು ಅವರ ಮನೆಯಲ್ಲಿಯೇ ಬಾಳಪ್ಪನವರಿಗೆ ಡಾಕ್ಟರ್ ಆಪ್ ಪರ್ಫಾರ್ಮಿಂಗ್ ಆ್ಯಟ್ ರಂಗಭೂಮಿ(ನಾಟಕ) ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು.

ಅವರ ಮಗ ಅರವಿಂದ ತಂದೆಯ ಹೆಸರಿನಲ್ಲಿ ಮನೆಯ ಆವರಣದಲ್ಲಿ ಕಟ್ಟಿರುವ ಕಲಾವೈಭವ ಡಾ.ಏಣಗಿ ಬಾಳಪ್ಪ ಸ್ಮೃತಿ ಸ್ಫೂರ್ತಿ ಹೆಸರಿನ ಬಾಳಪ್ಪನವರ ಬದುಕಿನ ಚಿತ್ರಣ ತೆರೆದಿಡುವ ಕೊಠಡಿ ನಿಜಕ್ಕೂ ಅವಿಸ್ಮರಣೀಯ. ಇಂದು ಅವರು ನಮ್ಮೊಡನಿಲ್ಲ.ಅವರ ಸ್ಮತಿಗಳು ಮಾತ್ರ ನಮ್ಮೊಂದಿಗೆ ಸದಾ ಅಜರಾಮರ.ಏಣಗಿ ಬಾಳಪ್ಪನವರ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಹುದ್ದೆಯಲ್ಲಿರುವರು. ಬಸವರಾಜ ವೈದ್ಯರಾಗಿ. ಸುಭಾಷ ಇಂಜನಿಯರ್. ಮೋಹನ್ ನ್ಯಾಯವಾದಿ. ಅರವಿಂದ ಕೃಷಿಕರಾಗಿರುವರು ಹೆಣ್ಣು ಮಕ್ಕಳು ಕೂಡ ವಿವಾಹಿತೆಯರಾಗಿದ್ದು. ದಿವಂಗತ ಏಣಗಿ ನಟರಾಜ ಕೂಡ ಮೇರು ಕಲಾವಿದರಾಗಿದ್ದರು.
-ವೈ.ಬಿ.ಕಡಕೋಳ (ಶಿಕ್ಷಕರು)

 

Facebook Comments

Sri Raghav

Admin